- ₹1.25 ಲಕ್ಷಕ್ಕೆ ಖಾತಾ ಬದಲಾವಣೆ ಮಾಡಿಕೊಡಲು ಬೇಡಿಕೆ
- ಮೂವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲು
ಖಾತಾ ಬದಲಾವಣೆಗೆ ₹1 ಲಕ್ಷ ಲಂಚ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಂದಾಯ ವಿಭಾಗದ ಇಬ್ಬರು ನೌಕರರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಬಿಬಿಎಂಪಿ ಕಂದಾಯ ನಿರೀಕ್ಷಕ ರಾಜಗೋಪಾಲ್ ಪರಾರಿಯಾಗಿದ್ದು, ಎಫ್‌ಡಿಎ ರಾಘವೇಂದ್ರ, ಡಾಟಾ ಎಂಟ್ರಿ ಆಪರೇಟರ್ ಸುರೇಶ್ ದತ್ತ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಮಾಚೋಹಳ್ಳಿಯ ಅರುಣ್ ಕುಮಾರ್ ಅವರು ಬನಶಂಕರಿಯ ಕರಿಸಂದ್ರದಲ್ಲಿರುವ ಬಿಬಿಎಂಪಿ ವಾರ್ಡ್ ಕಚೇರಿಯಲ್ಲಿ ಖಾತಾ ವರ್ಗಾವಣೆ/ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ನಿರೀಕ್ಷಕ ರಾಜಗೋಪಾಲ್ ₹1.25 ಲಕ್ಷಕ್ಕೆ ಖಾತಾ ಬದಲಾವಣೆ ಮಾಡಿಕೊಡಲು ಬೇಡಿಕೆ ಇಟ್ಟಿದ್ದಾರೆ. ಮುಂಗಡವಾಗಿ ₹1 ಲಕ್ಷ ಹಣ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಜಯನಗರದ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಅರುಣ್ ಕುಮಾರ್ ಎಂಬುವವರಿಂದ ಹಣವನ್ನು ಪಡೆಯಲು ರಾಜ್‌ಗೋಪಾಲ್ ತನ್ನ ಅಧೀನದಲ್ಲಿರುವ ಇಬ್ಬರು ಎಫ್‌ಡಿಎ ರಾಘವೇಂದ್ರ ಮತ್ತು ಡೇಟಾ ಎಂಟ್ರಿ ಆಪರೇಟರ್ ಸುರೇಶ್ ಅವರನ್ನು ಕಳುಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಟ್ಟಡದ ಮೇಲಿಂದ ನೀರಿನ ಟ್ಯಾಂಕ್ ಕುಸಿದು ಇಬ್ಬರು ಸಾವು
“ಕುಮಾರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಲೆ ಬೀಸಲು ನಿರ್ಧರಿಸಿದ್ದಾರೆ. ಕುಮಾರ್‌ನಿಂದ ಹಣ ಪಡೆಯಲು ಮುಂದಾದಾಗ ಪೊಲೀಸರು ರಾಘವೇಂದ್ರ ಮತ್ತು ಸುರೇಶ್‌ನನ್ನು ಹಿಡಿದಿದ್ದಾರೆ. ರಾಜಗೋಪಾಲ್ ಪರಾರಿಯಾಗಿದ್ದಾರೆ” ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
“ಮೂವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಹೇಳಿದ್ದಾರೆ.