ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಕಟ್ಟಡಗಳು ಹಾಗೂ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಸುಮಾರು 5 ಲಕ್ಷ ‘ಬಿ’ ಖಾತಾ ಸ್ವತ್ತುಗಳಿಗೆ ‘ಎ’ ಖಾತಾ ಜತೆಗೆ ಎಲ್ಲ ಮೂಲಸೌಕರ್ಯಗಳು ದೊರಕಲಿವೆ.ಇದಕ್ಕೆ ಸ್ವತ್ತಿನ ಮಾಲೀಕರು ಮಾರ್ಗಸೂಚಿ ದರದ ಶೇಕಡಾ 5 ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.
ಏಕ ನಿವೇಶನದ ‘ಬಿ’ ಖಾತಾ ಸ್ವತ್ತುಗಳನ್ನು ಕ್ರಮಬದ್ಧಗೊಳಿಸಿ ‘ಎ’ ಖಾತಾ ನೀಡುವಂತಹ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಸಭೆಯು ಕೈಗೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಸುಮಾರು 5 ಲಕ್ಷಕ್ಕಿಂತ ಹೆಚ್ಚು ‘ಬಿ’ ಖಾತಾ ಸ್ವತ್ತುಗಳಿವೆ. 9 ಮಾನದಂಡಗಳ ಆಧಾರದಲ್ಲಿ ಭೂಪರಿವರ್ತನೆಯಾಗದ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ನಿವೇಶನಗಳಿಗೆ ಖಾತಾ ನೀಡಲು ತೀರ್ಮಾನಿಸಲಾಗಿದೆ.
ನಿವೇಶನಗಳಿಗಷ್ಟೇ ‘ಎ’ ಖಾತಾ ಭಾಗ್ಯ
ಸಾರ್ವಜನಿಕ ರಸ್ತೆಗಳೆಂದು ಘೋಷಿಸಲ್ಪಟ್ಟ ರಸ್ತೆಗಳಲ್ಲಿರುವ ‘ಬಿ’ ಖಾತಾ ಏಕ ನಿವೇಶನಗಳಿಗೆ ‘ಎ’ ಖಾತಾ ನೀಡಲು ನಿರ್ಧರಿಸಲಾಗಿದೆ. ‘ಬಿ’ ಖಾತಾ ನಿವೇಶನದಲ್ಲಿ ಈಗಾಗಲೇ ಕಟ್ಟಡ ನಿರ್ಮಿಸಿರುವವರಿಗೂ ‘ಎ’ ಖಾತಾ ಹಾಗೂ ನಕ್ಷೆ ಸಿಗಲಿದೆ. ಆದರೆ, ಕಟ್ಟಡ ಅನಧಿಕೃತ ಎಂದು ನಮೂದಾಗಿರುತ್ತದೆ. ನಿವೇಶನಗಳಿಗಷ್ಟೇ ‘ಎ’ ಖಾತಾ ಭಾಗ್ಯ ಸಿಗುತ್ತದೆ, ಕಟ್ಟಡಗಳಿಗೆ ಎ ಖಾತಾ ನೀಡಲಾಗುವುದಿಲ್ಲ.
ಕಾನೂನುಬಾಹಿರವಾಗಿ ಅನಿಯಂತ್ರಿತ ಕಟ್ಟಡ ನಿರ್ಮಾಣ ಮತ್ತು ಬಡಾವಣೆಗಳ ನಿರ್ಮಾಣದಲ್ಲಿ ಶಿಸ್ತು ತರಲು, ನಗರದ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳಿಗೆ ಕಾನೂನು ಉದ್ದೇಶಕ್ಕೆ ಅಧಿಕೃತ ‘ಎ’ ಖಾತಾ ನೀಡಲು ಸಚಿವ ಸಂಪುಟ ನಿರ್ಧರಿಸಿದೆ’ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳು ‘ಎ’ ಖಾತಾದ ಸಕಲ ಸೌಲಭ್ಯಗಳನ್ನು ಪಡೆಯಲು ಅರ್ಹವಾಗಿದ್ದು, ಅದಕ್ಕೆ ಅಗತ್ಯವಾದ ಶುಲ್ಕ, ಅಭಿವೃದ್ಧಿ ಶುಲ್ಕವನ್ನು ಬಿಬಿಎಂಪಿಗೆ ಪಾವತಿಸಬೇಕು. ಶುಲ್ಕ ಪಾವತಿ ನಂತರ, ‘ಇ’ ಖಾತಾ ಸೇರಿದಂತೆ ಕಟ್ಟಡ ನಕ್ಷೆಯೂ ಲಭ್ಯವಾಗಲಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961ರಲ್ಲಿ (ಕೆಟಿಸಿಪಿ) ‘ಬಿ’ ಖಾತಾ ಆಸ್ತಿಗಳು ಎಂಬ ಮಾನ್ಯತೆ ಇಲ್ಲ. ಇಂತಹ ಯೋಜಿತವಲ್ಲದ ಆಸ್ತಿಗಳಲ್ಲಿ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳು ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಕುಸಿದು, ಅಸುರಕ್ಷಿತ ತಾಣಗಳಾಗಿವೆ.
ಆದ್ದರಿಂದ ‘ಬಿ’ ಖಾತಾ ಆಸ್ತಿಗಳನ್ನು ಕೆಟಿಸಿಪಿ ಕಾಯ್ದೆಯ ನಿಯಂತ್ರಣಕ್ಕೆ ತರುವುದು ಅವಶ್ಯ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024 (ಜಿಬಿಜಿಎ) ಕಲಂ 3ರ 147ರಲ್ಲಿ 2024ರ ಸೆಪ್ಟೆಂಬರ್ 30ರ ನಂತರದ ಅನಧಿಕೃತ ಆಸ್ತಿಗಳಿಗೆ ‘ಬಿ’ ಖಾತಾ ನೀಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ, ಅನಧಿಕೃತ ಕಟ್ಟಡಗಳು ಮತ್ತು ಬಡಾವಣೆಗಳ ಅಭಿವೃದ್ಧಿಯನ್ನು ನಿಯಂತ್ರಿಸಲು, ತಡೆ ಗಟ್ಟಲು ಕಾನೂನು ಮತ್ತು ನಿಯಂತ್ರಿತ ಚೌಕಟ್ಟನ್ನು ಖಾತರಿಪಡಿಸಲು ಜಿಬಿಜಿಎ ಅಡಿ ರಚಿಸಲಾಗುವ ಎಲ್ಲ ನಗರ ಪಾಲಿಕೆಗಳಿಗೂ ಅನ್ವಯವಾಗುವಂತೆ ಎಲ್ಲ ನಿವೇಶನಗಳಿಗೆ ‘ಎ’ ಖಾತಾ ನೀಡುವ ಪ್ರಸ್ತಾವವನ್ನು ಸಚಿವ ಸಂಪುಟ ಅನುಮೋದಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತುಳಿದಷ್ಟು ಪುಟಿದೇಳುವ ರಾಹುಲ್ ಎಂಬ ಜನನಾಯಕ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ನಿವೇಶನಗಳು ‘ಎ’ ಖಾತಾವನ್ನು ಪಡೆಯಬಹುದು. ನಿವೇಶನಗಳ ಮುಂದಿರುವ ಖಾಸಗಿ ರಸ್ತೆಯನ್ನು ‘ಸಾರ್ವಜನಿಕ ರಸ್ತೆ’ ಎಂದು ಘೋಷಿಸಲಾಗುತ್ತದೆ. ಭೂ ಪರಿವರ್ತನೆಯಾಗಿರುವ ಅಥವಾ ಭೂ ಪರಿವರ್ತನೆಯಾಗದ ನಿವೇಶನಗಳಿಗೆ ಮಾರ್ಗಸೂಚಿ ದರದಂತೆ ಶೇ 5ರಷ್ಟು ದರವನ್ನು ಶುಲ್ಕವನ್ನಾಗಿ ಪಾವತಿಸಬೇಕು.
ಯಾರಿಗೆ ಅನುಕೂಲ?
ಬಿಬಿಎಂಪಿಯಿಂದ ‘ಬಿ’ ಖಾತಾ ಪಡೆದಿರುವ ನಿವೇಶನದಾರರು
ಅನಧಿಕೃತ ನಿವೇಶನ/ ಬಡಾವಣೆಯಲ್ಲಿ ‘ಬಿ’ ಖಾತಾ ಹೊಂದಿದ್ದ ಅಥವಾ ಹೊಂದಿರದ ಕಟ್ಟಡಗಳು
ಏಕ ನಿವೇಶನದಲ್ಲಿ ಬಿಬಿಎಂಪಿ ಖಾತಾ ಹೊಂದದೆ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್
ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಯಾಗಿ, ಕೆಟಿಸಿಪಿ ಕಾಯ್ದೆಯಂತೆ ಅನುಮೋದನೆ ಪಡೆಯದ ಖಾಲಿ ನಿವೇಶನ
ಭೂ ಪರಿವರ್ತನೆಯಾಗಿ, ನೋಂದಣಿ ಪತ್ರದ ಮೂಲಕ ವಿಭಾಗಗೊಂಡಿರುವ ಖಾಲಿ ನಿವೇಶನಗಳು
ಭೂ ಪರಿವರ್ತನೆಯಾಗದೆ ವಿಭಾಗವಾಗದ ಸರ್ವೆ ಸಂಖ್ಯೆ/ ಹಿಸ್ಸಾ ಸಂಖ್ಯೆ ಖಾಲಿ ನಿವೇಶನ
ಭೂ ಪರಿವರ್ತನೆಯಾಗದೆ ಸರ್ವೆ ಸಂಖ್ಯೆ/ ಹಿಸ್ಸಾ ಸಂಖ್ಯೆಯಲ್ಲಿ ಅನಧಿಕೃತ ವಾಗಿ ಭಾಗವಾಗಿ 2024ರ ಸೆಪ್ಟೆಂಬರ್ 30ರೊಳಗೆ ನೋಂದಣಿ ಪತ್ರದ ಮೂಲಕ ದಾಖಲೆ ಹೊಂದಿರುವ ನಿವೇಶನ
30 ಅಡಿx40 ಅಡಿ ನಿವೇಶನಕ್ಕೆ ₹2.07 ಲಕ್ಷ
ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನವಿರುವ ಪ್ರದೇಶದಲ್ಲಿ ಮಾರ್ಗಸೂಚಿ ದರ ಪ್ರತಿ ಚದರಡಿಗೆ ₹3,000 ಇದ್ದರೆ, ₹1.80 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಇದರ ಜೊತೆಗೆ, ಪ್ರತಿ ಚದರ ಮೀಟರ್‌ಗೆ ₹250ರಂತೆ ₹27,870 ಅಭಿವೃದ್ಧಿ ಶುಲ್ಕವಿರುತ್ತದೆ.
ಉದ್ಯಾನಕ್ಕೆ ಜಾಗವಿಲ್ಲದಿದ್ದರೆ ಶುಲ್ಕ
ಉದ್ಯಾನಕ್ಕೆ ಜಾಗ ಬಿಡಲು ಅವಕಾಶವಿಲ್ಲದ 55 ಚದರ ಮೀಟರ್‌ನಿಂದ ಎರಡು ಸಾವಿರ ಚದರ ಮೀಟರ್‌ವರೆಗಿನ ನಿವೇಶನಗಳಲ್ಲಿರುವ ಕಟ್ಟಡಗಳು ಮಾರ್ಗಸೂಚಿ ದರದ ಶೇ 5ರಷ್ಟು ಶುಲ್ಕವನ್ನು ‘ಪಾರ್ಕ್ ಫೀ’ ಎಂದು ಪಾವತಿಸುವುದು ಕಡ್ಡಾಯವಾಗಿದೆ.
ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆ ಸೆಕ್ಷನ್ 13–ಇಗೆ ತಿದ್ದುಪಡಿ ತಂದು, ಪರಿಷ್ಕೃತ ಮಾಸ್ಟರ್ ಪ್ಲಾನ್–2015ರ ವಲಯ ನಿಯಮಗಳನ್ನು ಬದಲಾಯಿಸಿ ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿದೆ.
ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಎರಡು ಸಾವಿರ ಚದರ ಮೀಟರ್‌ನಿಂದ 10 ಸಾವಿರ ಚದರ ಮೀಟರ್‌ವರೆಗಿನ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌ಗಳು ಶೇ 15ರಷ್ಟು ಭೂಮಿಯನ್ನು ಉದ್ಯಾನವನ್ನಾಗಿ ಅಭಿವೃದ್ಧಿಪಡಿಸುವುದು ಕಡ್ಡಾಯವಾಗಿದೆ.