ಮಹಾರಾಷ್ಟ್ರ ವಿಧಾನ ಭವನದಲ್ಲಿ ನಡೆದ ಘರ್ಷಣೆ ವಿಚಾರದಲ್ಲಿ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಶುಕ್ರವಾರ ಬಿಜೆಪಿಯನ್ನು ಟೀಕಿಸಿದ್ದಾರೆ. ಗಂಭೀರ ಕ್ರಿಮಿನಲ್ ಹಿನ್ನೆಲೆಯ ಜನರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ರಾವತ್ ಆರೋಪಿಸಿದ್ದಾರೆ.
ಗುರುವಾರ ಮಹಾರಾಷ್ಟ್ರ ಶಾಸಕಾಂಗ ಸಂಕೀರ್ಣದೊಳಗೆ ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್ ಮತ್ತು ಎನ್‌ಸಿಪಿ(ಎಸ್‌ಪಿ) ಶಾಸಕ ಜಿತೇಂದ್ರ ಅವಾದ್ ಅವರ ಬೆಂಬಲಿಗರು ಘರ್ಷಣೆ ನಡೆಸಿದ್ದರು. ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡ ಬಳಿಕ ಭದ್ರತಾ ಸಿಬ್ಬಂದಿಗಳು ತಡೆದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಇದು ಜನರ ತೀರ್ಪಲ್ಲ, ಮತಪತ್ರ ಬಳಸಿ ಮತ್ತೆ ಚುನಾವಣೆ ನಡೆಯಲಿ: ಸಂಜಯ್ ರಾವತ್
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಾವತ್, “ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸರ್ಕಾರವನ್ನು ವಿಸರ್ಜಿಸಬೇಕು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕು” ಎಂದೂ ರಾವತ್ ಆಗ್ರಹಿಸಿದ್ದಾರೆ.
“ವಿಧಾನ ಭವನದಲ್ಲಿ ಒಂದು ಗ್ಯಾಂಗ್ ವಾರ್ ಆಗಿದೆ. ಕೊಲೆ, ದರೋಡೆ ಅಥವಾ ಕಠಿಣ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವಂತಹ, ಗಂಭೀರ ಕ್ರಿಮಿನಲ್ ಅಪರಾಧಗಳನ್ನು ಹೊಂದಿರುವವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ” ಎಂದು ರಾವತ್ ಆರೋಪಿಸಿದರು.
“ಅಪರಾಧ ಹಿನ್ನೆಲೆಯ ಜನರನ್ನು ಪ್ರತಿದಿನ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಂಸ್ಕೃತಿಯೇ? ಅಪರಾಧ ಹಿನ್ನೆಲೆಯ ಜನರನ್ನು ಸೇರಿಸಿಕೊಳ್ಳುವುದು ಬಿಜೆಪಿಯ ಸಂಸ್ಕೃತಿಗೆ ಸರಿಹೊಂದುತ್ತದೆಯೇ” ಎಂದು ಶಿವಸೇನೆ(ಯುಬಿಟಿ) ನಾಯಕ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ : ಮಹಾ ವಿಕಾಸ್ ಅಘಾಡಿಯ ಐಕಾನ್ ಉದ್ಧವ್ ಠಾಕ್ರೆ!
“ಇದು ದುರದೃಷ್ಟಕರ, ನೋವಿನ ಅಥವಾ ಆಘಾತಕಾರಿ ಘಟನೆ ಮಾತ್ರವಲ್ಲ. ಮಹಾರಾಷ್ಟ್ರದ ರಾಜಕೀಯ ಸಂಸ್ಕೃತಿಗೆ ನಾಚಿಕೆಗೇಡಿನ ಸಂಗತಿ. ಹಾಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಶಿವಸೇನೆ (ಯುಬಿಟಿ) ಭಾವಿಸುತ್ತದೆ. ಮಹಾರಾಷ್ಟ್ರದಲ್ಲಿ ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೆ, ಫಡ್ನವೀಸ್ ರಾಜ್ಯ ಸರ್ಕಾರವನ್ನು ವಿಸರ್ಜಿಸುವಂತೆ ಒತ್ತಾಯಿಸುತ್ತಿದ್ದರು. ಅವರು ಆತ್ಮಾವಲೋಕನ ಮಾಡಿಕೊಂಡರೆ, ಅವರ ಸರ್ಕಾರವನ್ನು ವಿಸರ್ಜಿಸಬೇಕು ಎಂಬ ಮನವರಿಕೆ ಅವರಿಗೆ ಆಗುತ್ತದೆ” ಎಂದಿದ್ದಾರೆ.
“ಪ್ರತಿದಿನ, ಮಹಾರಾಷ್ಟ್ರದ ಪ್ರತಿಷ್ಠೆಗೆ ಹೊಸ ಮಸಿ ಬರುತ್ತಿದೆ. ಅದು ಭ್ರಷ್ಟಾಚಾರ, ಅನೈತಿಕ ನಡವಳಿಕೆ ಅಥವಾ ಹನಿಟ್ರ್ಯಾಪ್, ಶಾಸಕರಿಂದ ಹಲ್ಲೆ ಅಥವಾ ಸಚಿವರ ವಿಡಿಯೋಗಳು ಆಗಿರಬಹುದು. ರಾಜ್ಯಪಾಲರು ನಿಜವಾಗಿಯೂ ಕಾನೂನಿನ ಪಾಲಕರಾಗಿದ್ದರೆ, ಗೃಹ ಇಲಾಖೆಯಿಂದ ವರದಿ ಪಡೆದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.
