ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ಲೋಪ ಉಂಟಾಗುತ್ತಿದೆ. ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೆ ಟಿ ತಿಪ್ಪೇಸ್ವಾಮಿ ಆರೋಪಿಸಿದರು.
ಹಿರಿಯೂರು ನಗರದ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಸಮರ್ಪಕವಾಗಿ ಸರ್ಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸದಿರುವುದು ಮತ್ತು ಹಲವು ಇಲಾಖೆಗಳಲ್ಲಿ ಲಂಚದ ಹಾವಳಿ ಹೆಚ್ಚಾಗಿರುವುದನ್ನು ಖಂಡಿಸಿ ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಸಬ್ ರಿಜಿಸ್ಟರ್ ಆಫೀಸ್‌ಗಳಲ್ಲಿ ಎರಡ್ಮೂರು ತಿಂಗಳಾದರೂ ನೋಂದಣಿ ಆಗುತಿಲ್ಲ. ಕಂದಾಯ ಇಲಾಖೆಯಲ್ಲಿ ತಿಂಗಳಾದರೂ ಮರಣ ಪತ್ರಗಳನ್ನು ನೀಡುತ್ತಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ನಿಯಂತ್ರಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಆಹಾರ ಇಲಾಖೆಯಿಂದ ವಿತರಿಸುತ್ತಿರುವ ರಾಗಿ ಸಂಪೂರ್ಣ ಕಳಪೆಯಾಗಿದ್ದು, ಗ್ರಾಹಕರಿಗೆ ಸಮರ್ಪಕವಾಗಿ ಅಕ್ಕಿ ವಿತರಿಸುತ್ತಿಲ್ಲ. ಕೃಷಿ ಇಲಾಖೆಯಿಂದ ಕಳಪೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಮತ್ತು ಬೆಳೆನಷ್ಟ ನೋಂದಣಿಯಾಗಿರುವ ರೈತರಿಗೆ ಈವರೆಗೂ ಪರಿಹಾರ ಕೊಟ್ಟಿಲ್ಲ. ಬೆಳೆವಿಮೆ ರೈತರ ಖಾತೆಗೆ ಜಮಾ ಆಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಗ್ರಾಮೀಣ ಭಾಗದಲ್ಲಿ ಪ್ರತಿ ಹಳ್ಳಿಯಲ್ಲೂ ಮೂರ್ನಾಲ್ಕು ಕಡೆ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇಲಾಖೆ ಅಧಿಕಾರಿಗಳು ಬಾರ್ ಅಂಗಡಿಗಳಲ್ಲಿ ತಿಂಗಳ ಮಾಮೂಲಿ ವಸೂಲಿ ಮಾಡುತ್ತಾ ಅಕ್ರಮ ಮದ್ಯ ಮಾರಾಟಕ್ಕೆ ಪ್ರೇರೇಪಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು” ಎಂದು ಒತ್ತಾಯಿಸಿದರು.
“ಅರಣ್ಯ ಇಲಾಖೆಯಲ್ಲಿ ಸಸಿಗಳಿಗೆ ದುಬಾರಿ ಬೆಲೆ ನಿಗದಿ ಮಾಡಿರುವುದರಿಂದ ರೈತರು ಸಸಿಗಳನ್ನು ಕೊಂಡುಕೊಳ್ಳಲು ಆಗುತ್ತಿಲ್ಲ. ಬೆಸ್ಕಾಂ ಇಲಾಖೆಯಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ರೈತರಿಗೆ ಮೂರು ವರ್ಗವಾದರೂ ಪರಿಕರಗಳನ್ನು ವಿತರಿಸುತ್ತಿಲ್ಲ. ಕೆಟ್ಟು ಹೋದ ಪರಿಕರಗಳಿಗೆ ಲಂಚ ಕೊಟ್ಟು ತೆಗೆದುಕೊಳ್ಳಬೇಕಾಗುತ್ತದೆ” ಎಂದರು.
“ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಗರದ ಮುಖ್ಯ ರಸ್ತೆ ಕಿರಿದಾಗಿದ್ದು, ಹಲವು ಬಾರಿ ಮನವಿ ಮಾಡಿದರೂ ರಸ್ತೆ ಅಗಲೀಕರಣ ಆಗುತ್ತಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ತಾಲೂಕು ಕಚೇರಿ ಮುಂಭಾಗದಲ್ಲಿ ರಸ್ತೆ ಉಬ್ಬುಗಳನ್ನು ಹಾಕಲು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ದಲಿತರ ಅನುದಾನ ದುರ್ಬಳಕೆ; ಸರ್ಕಾರದ ನಡೆ ಖಂಡನೀಯ: ಸುರೇಶ ಚಲವಾದಿ
“ಎಲ್ಲ ಇಲಾಖೆಯ ಮುಖ್ಯಸ್ಥರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ ಅವರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾರ್ಯನಿರ್ವಹಿಸಬೇಕೆಂದು ತಾವುಗಳ ಆದೇಶಿಸಬೇಕು” ಎಂದು ತಹಶೀಲ್ದಾರರಿಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆಂಚಪ್ಪ ನಾಯಕ, ರಾಜಪ್ಪ ನಾಗರಾಜು, ವಿರೂಪಾಕ್ಷಪ್ಪ ಗೋವಿಂದಪ್ಪ, ಶಿವಣ್ಣ, ಮಹಾಲಿಂಗಪ್ಪ, ಮಂಜುನಾಥ್, ರಂಗಮ್ಮ, ತಿಮ್ಮಕ್ಕ ಸೇರಿದಂತೆ ಬಹುತೇಕ ರೈತ ಮುಖಂಡರು ಇದ್ದರು.