- ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ
- ‘ತುಂಗಭದ್ರಾ ಜಲಾಶಯದಲ್ಲಿ 83 ಟಿಎಂಸಿ ನೀರು ಸಂಗ್ರಹವಾಗಿದೆ’
ರೈತರ ಬೇಡಿಕೆ ಹಿನ್ನೆಲೆಯಲ್ಲಿ ತುಂಗಭದ್ರಾ ಅಣೆಕಟ್ಟೆ ಮೂಲಕ ನೀರು ಹರಿಸುವಂತೆ ಜಿಲ್ಲಾ ಸಚಿವರು, ಶಾಸಕರು ಕೇಳುತ್ತಿದ್ದಾರೆ. ತುಂಗಾಭದ್ರಾದಿಂದ 5,575 ಕ್ಯೂಸೆಕ್ಸ್ ನೀರು ಹರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಿಳಿಸಿದರು.
ದೆಹಲಿ ಪ್ರವಾಸದಲ್ಲಿರುವ ಡಿಕೆ ಶಿವಕುಮಾರ್ ಗುರುವಾರ ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, “ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ತುಂಗಭದ್ರಾ ಅಣೆಕಟ್ಟೆ ಮೂಲಕ ನೀರು ಹರಿಸಲು ಒತ್ತಡ ಬಂದ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ” ಎಂದರು.
ತುಂಗಭದ್ರಾ ಜಲಾಶಯದಲ್ಲಿ 105 ಟಿಎಂಸಿ ನೀರು ಶೇಖರಣಾ ಸಾಮರ್ಥ್ಯವಿದ್ದು, ಈಗಾಗಲೇ 83 ಟಿಎಂಸಿ ನೀರು ಸಂಗ್ರಹವಾಗಿದೆ. ರೈತರಿಂದ ಬಹಳ ಬೇಡಿಕೆ ಇರುವ ಕಾರಣ 5,575 ಕ್ಯೂಸೆಕ್ಸ್ ನೀರನ್ನು ಹರಿಸಲು ಅನುಮತಿ ನೀಡಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ಧಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ: ಆರಗ ವಿರುದ್ಧ ಪ್ರಿಯಾಂಕ್ ಕಿಡಿ
ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಸಲಹಾ ಸಮಿತಿ
“ಸಚಿವ ಶಿವರಾಜ್ ತಂಗಡಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ತುಂಗಭದ್ರಾ ಸಲಹಾ ಸಮಿತಿ ರಚಿಸಲಾಗಿದೆ. ಬರುವ ದಿನಗಳಲ್ಲಿ ಇವರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಸಲಹಾ ಸಮಿತಿ ಸಭೆ ಮಾಡಿ, ರೈತರ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವ, ಯಾವ ಕಾಲಕ್ಕೆ ಎಷ್ಟು ನೀರು ಬಿಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು” ಎಂದರು.
“ಟಿಎಲ್‌ಬಿಸಿಗೆ ಸುಮಾರು 1300 ರಿಂದ 1500 ಕ್ಯೂಸೆಕ್ಸ್, ಆರ್ ಬಿಎಲ್ ಸಿಯಲ್ಲಿ 1200 ಕ್ಯೂಸೆಕ್ಸ್, ಆರ್ ಎಚ್ ಬಿಎಲ್ ಸಿಗೆ 1375 ಕ್ಯೂಸೆಕ್ ನೀರು ನೀಡಬೇಕಾಗಿದೆ. ಇದರ ಜತೆಗೆ ಆಂಧ್ರ ಪ್ರದೇಶದ ಪಾಲಿನ ನೀರನ್ನು ಬಿಡಬೇಕಾಗಿದ್ದು, ಒಟ್ಟು 5575 ಕ್ಯೂಸೆಕ್ಸ್ ನೀರು ಹರಿಸಲು ಅನುಮತಿ ನೀಡಲಾಗಿದೆ. ಈ ಮೂಲಕ ರೈತರ ಬೇಡಿಕೆಗೆ ಸ್ಪಂದಿಸಿದ್ದೇವೆ” ಎಂದರು.