ಮನರೇಗಾ ಯೋಜನೆಯು ಗ್ರಾಮೀಣ ಮಹಿಳೆಯರ ಜೀವನ ಹಸನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಯೋಜನೆಯ ಸದ್ಬಳಕೆಯಲ್ಲಿ ಎಲ್ಲರ ಸಹಭಾಗಿತ್ವ, ಸಹಕಾರ ಅತ್ಯಗತ್ಯ ಎಂದು ಎಡಿಪಿಸಿ ಕಿರಣ ಕುಮಾರ್ ಎಸ್.ಎಚ್ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. “ಮನರೇಗಾ ಯೋಜನೆಯಡಿ ನಡೆಯುವ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆಯನ್ನು ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
ಮನರೇಗಾ ಯೋಜನೆಯ ತಾಲೂಕು ಪಂಚಾಯತಿ ಐಇಸಿ ಸಂಯೋಜಕ ಮಂಜುನಾಥ ಹಳ್ಳದ ಮಾತನಾಡಿ, “ತಾಲೂಕಿನಲ್ಲಿಯೇ ಶಾಂತಗೇರಿ ಗ್ರಾಮ ಪಂಚಾಯತಿ ಮನರೇಗಾ ಯೋಜನೆಗೆ ಅತೀ ಕಡಿಮೆ ಮಹಿಳಾ ಪಾಲ್ಗೊಳ್ಳುವಿಕೆಯಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ತೊಡಸಿಕೊಳ್ಳಬೇಕು” ಎಂದು ಸೂಚಿಸಿದರು.
ಸಭೆಯಲ್ಲಿ ತಾಂತ್ರಿಕ ಸಹಾಯಕ ಉಮೇಶ ಜಕ್ಕಲಿ, ಬಿಎಫ್ ಟಿ ಜ್ಯೋತಿ ವಡ್ಡರ, ಎಚ್.ಎಸ್. ಪವಾಡಿಗೌಡ್ರ, ಡಿಇಒ ಪ್ರಕಾಶ ನರೇಗಲ್, ಗ್ರಾಮ ಕಾಯಕ ಮಿತ್ರ ಶಿವಗಂಗಾ ಹುಲ್ಲಣ್ಣವರ, ಪಂಚಾಯತ್ ಸಿಬ್ಬಂದಿಗಳಾದ ಶಾಂತಾ ಬಾಗೂರು, ಮರಿಯಪ್ಪ ಮಾದರ ಇತರರು ಇದ್ದರು.