2019-2020 ರಿಂದ 2022-2023ನೇ ಸಾಲಿನವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳು, ಈಗ ನಡೆಯುತ್ತಿರುವ ಕಾಮಗಾರಿಗಳು, ಮುಗಿದಿರುವ ಕಾಮಗಾರಿಗಳು ಸೇರಿದಂತೆ ಪ್ರತಿಯೊಂದು ಕಾಮಗಾರಿಗಳ ನೈಜತೆ ಪರಿಶೀಲನೆಗಾಗಿ ಅಗತ್ಯ ಮಾಹಿತಿ ನೀಡುವಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
“ಕಾಮಗಾರಿಗಳ ಬಾಕಿ ಬಿಲ್ ಅನ್ನು ಗುತ್ತಿಗೆದಾರರಿಗೆ ಪಾವತಿಸಬೇಕಿದೆ. ಹಾಗಾಗಿ, ಕಾಮಗಾರಿಗಳ ನೈಜ್ಯತೆ ಪರಿಶೀಲನೆ ಮಾಡಬೇಕಿದೆ. ಪಾಲಿಕೆ ವತಿಯಿಂದ ನಾನಾ ಅನುದಾನದಡಿ ರಸ್ತೆ ಅಭಿವೃದ್ಧಿ, ರಾಜಕಾಲುವೆಗಳು, ಕೆರೆಗಳು, ಕಟ್ಟಡಗಳು ಸೇರಿದಂತೆ ವಾರ್ಡ್ ಮಟ್ಟದ ಕಾಮಗಾರಿಗಳ ಬಾಕಿ ಬಿಲ್ ಅನ್ನು ಪಾವತಿ ಮಾಡಬೇಕಿದೆ. ಹಾಲಿ ಕಾಮಗಾರಿಯ ವಸ್ತು ಸ್ಥಿತಿಯ ಛಾಯಾಚಿತ್ರ ಸೇರಿದಂತೆ ಕಾಮಗಾರಿಯ ಸಂಪೂರ್ಣ ವಿವರ ನೀಡಬೇಕು” ಎಂದು ಹೇಳಿದ್ದಾರೆ.
“ಈ ಕಾಮಗಾರಿ ನಡೆಸಲು ಅನುಮತಿ ನೀಡಿದವರು ಯಾರು? ಸ್ಥಳ ಪರಿಶೀಲನೆ ನಡೆಸಿ, ಅದರ ಅವಶ್ಯಕತೆ ಕುರಿತು ತಾಂತ್ರಿಕ ವರದಿ ನೀಡಿದ ದಿನಾಂಕ, ವರದಿ ತಯಾರಿಸಿದ ಎಂಜಿನಿಯರ್ ಹೆಸರು, ಹುದ್ದೆ, ಕಾಮಗಾರಿಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿದ ಯೋಜನಾ ಸಮಾಲೋಚಕ ಸಂಸ್ಥೆಯ ಹೆಸರು, ಟೆಂಡರ್ ಆಹ್ವಾನಿಸಿದ ದಿನಾಂಕ ಸೇರಿದಂತೆ ಸಂಪೂರ್ಣ ವರದಿಯನ್ನು ನೀಡುವಂತೆ” ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆಗೆ ನುಗ್ಗಿ ದರೋಡೆ ಮಾಡಿದ ದುಷ್ಕರ್ಮಿಗಳು
”ಕಾಮಗಾರಿಗಳ ಬಿಲ್ ಪಾವತಿ ಸಂದರ್ಭದಲ್ಲಿ ಕಾಮಗಾರಿಗಳಿಗೆ ಬಳಸಿದ ಸಾಮಗ್ರಿಗಳ ಗುಣಮಟ್ಟ, ಸ್ಥಳ ಪರಿಶೀಲನೆ ನಡೆಸಿ ನ್ಯೂನತೆಗಳನ್ನು ನಮೂದಿಸಿರುವುದು, ಅನುಪಾಲನಾ ವರದಿ, ಕಾಮಗಾರಿಯ ಗುಣಮಟ್ಟದ ಕುರಿತು ದೃಢೀಕರಿಸಿದ ಅಧಿಕಾರಿಗಳ ವಿವರ, ಪ್ರಯೋಗಾಲಯಗಳ ಪರೀಕ್ಷಾ ವರದಿ, ಬಿಲ್ ಪಾವತಿಯ ಮಾಹಿತಿಯನ್ನು ಒದಗಿಸಬೇಕು” ಎಂದು ಸೂಚನೆ ನೀಡಿದ್ದಾರೆ.