ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂಲಕ ಕದನ ವಿರಾಮ ಘೋಷಣೆ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಶ್ನಿಸಲು ಇಂಡಿಯಾ ಬಣ ಸಜ್ಜಾಗಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನ ನಾಳೆಯಿಂದ ಆರಂಭವಾಗಲಿದ್ದು, ಆಪರೇಷನ್ ಸಿಂಧೂರ್ ಕುರಿತು ಚರ್ಚೆ ನಡೆಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಆದರೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಚರ್ಚೆ ನಡೆಸಬೇಕೆಂಬ ಆಗ್ರಹವೂ ಬಂದಿತ್ತು. ಈ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ಹೇಳಿವೆ.
ಜುಲೈ 21ರಿಂದ ಪ್ರಾರಂಭವಾಗುವ ಮಳೆಗಾಲದ ಅಧಿವೇಶನ ಆಗಸ್ಟ್ 21ರಂದು ಮುಕ್ತಾಯಗೊಳ್ಳಲಿದೆ.
ವಿರೋಧ ಪಕ್ಷಗಳ ಇಂಡಿಯಾ ಬಣವು ತನ್ನ 24 ಘಟಕಗಳ ವರ್ಚುವಲ್ ಸಭೆಯನ್ನು ಶನಿವಾರ ನಡೆಸಿತು. ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂಲಕ ಕದನ ವಿರಾಮ ಘೋಷಣೆ, ಭಾರತದ ವಿದೇಶಾಂಗ ನೀತಿ ಮತ್ತು ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಲು ಸಭೆ ನಿರ್ಧರಿಸಿದೆ.
ಇದನ್ನೂ ಓದಿರಿ: ಶಾಂತಿಯುತ ಪ್ರತಿಭಟನೆ ಮಾಡಿದರೂ ಜೈಲಿಗೆ ಹಾಕುವ ಕಾಯ್ದೆ ತರುತ್ತಿದೆ ಬಿಜೆಪಿ!
ವರ್ಚುವಲ್ ಸಭೆಯಲ್ಲಿ ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಭಾಗವಹಿಸಿದ್ದರು. ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್; ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ; ಶಿವಸೇನೆ (ಯುಬಿಟಿ)ಯ ಉದ್ಧವ್ ಠಾಕ್ರೆ, ಸಂಜಯ್ ರಾವತ್; ಎನ್‌ಸಿಪಿ (ಎಸ್‌ಪಿ)ಯ ಶರದ್ ಪವಾರ್, ಜಯಂತ್ ಪಾಟೀಲ್; ನ್ಯಾಷನಲ್ ಕಾನ್ಫರೆನ್ಸ್‌ನ ಓಮರ್ ಅಬ್ದುಲ್ಲಾ; ಜೆಎಂಎಂನ ಹೇಮಂತ್ ಸೊರೆನ್; ಆರ್‌ಜೆಡಿಯ ತೇಜಸ್ವಿ ಯಾದವ್; ಡಿಎಂಕೆಯ ತಿರುಚಿ ಎನ್ ಶಿವ, ಸಿಪಿಐ, ಸಿಪಿಐ (ಎಂ) ಮತ್ತು ಸಿಪಿಐ (ಎಂಎಲ್) ಲಿಬರೇಶನ್ ಪರ ಕ್ರಮವಾಗಿ ಡಿ ರಾಜಾ, ಎಂ.ಎ. ಬೇಬಿ ಮತ್ತು ದೀಪಂಕರ್ ಭಟ್ಟಾಚಾರ್ಯ ಪ್ರತಿನಿಧಿಸಿದ್ದರು. ಕೇರಳ ಕಾಂಗ್ರೆಸ್ (ಎಂ) ಸಂಸದ ಜೋಸ್ ಕೆ.ಮಣಿ, ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್, ವಿಡುತಲೈ ಚಿರುತೈಗಲ್ ಕಚ್ಚಿಯ ತಿರುಮಾವಲವನ್ ಮತ್ತು ಐಯುಎಂಎಲ್‌ನ ಕೆ.ಎಂ. ಖಾದರ್ ಮೊಹಿದೀನ್ ಸಭೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿರಿ: ಜಾರಿ ನಿರ್ದೇಶನಾಲಯ ವಿರುದ್ಧ ಮದ್ರಾಸ್ ಹೈಕೋರ್ಟ್ ತರಾಟೆ
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 25 ಪ್ರವಾಸಿಗರು ಮತ್ತು ಸ್ಥಳೀಯ ಕುದುರೆವಾಲಾ ಸಾವನ್ನಪ್ಪಿದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಭಯೋತ್ಪಾದನಾ ಕೃತ್ಯದ ಬಳಿಕ ಭಾರತ ಸರ್ಕಾರವು ಆಪರೇಷನ್ ಸಿಂಧೂರ್ ನಡೆಸಿತ್ತು. ಭಾರತ- ಪಾಕಿಸ್ತಾನ ನಡುವಿನ ಕದನದಲ್ಲಿ ಟ್ರಂಪ್ ಮಧ್ಯ ಪ್ರವೇಶ, ಪಹಲ್ಗಾಮ್ ದಾಳಿ ಮೊದಲಾದವುಗಳ ಸಂಬಂಧ ವಿಶೇಷ ಅಧಿವೇಶನ ಕರೆಯುವಂತೆ ಪ್ರತಿಪಕ್ಷಗಳು ಆಗ್ರಹಿಸಿದ್ದವು.
