ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಬಂಧಿಸುವ ಎಐ (ಕೃತಕ ಬುದ್ದಿಮತ್ತೆ) ಆಧಾರಿತ ವಿಡಿಯೋವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೊ, ‘ಒಬಾಮಾ ಕಾನೂನಿಗಿಂತ ಮೇಲಿದ್ದಾರೆ’ ಎಂದು ಹೇಳುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಇದು ಅನೇಕ ಅಮೆರಿಕದ ರಾಜಕಾರಣಿಗಳು ‘ಯಾರೂ ಕಾನೂನಿಗಿಂತ ದೊಡ್ಡವರಲ್ಲ’ಎಂದು ಹೇಳುವುದನ್ನು ಒಳಗೊಂಡಿದೆ. ನಂತರದ ಕ್ಲಿಪ್, ಒಬಾಮಾ ಅವರು ಒಮ್ಮೆ ಅಧ್ಯಕ್ಷರಾಗಿದ್ದ ಅದೇ ಕಚೇರಿಯಲ್ಲಿ ಇಬ್ಬರು ಎಫ್‌ಬಿಐ ಏಜೆಂಟ್‌ಗಳಿಂದ ಕೈಕೋಳ ಹಾಕಿರುವ ಎಐ ಆಧಾರಿತ ವಿಡಿಯೊಗೆ ಬದಲಾಗುತ್ತದೆ. ಬಂಧನದ ಸಮಯದಲ್ಲಿ ಟ್ರಂಪ್ ನಗುತ್ತಾ ಕುಳಿತಿರುತ್ತಾರೆ.
ಈ ನಕಲಿ ವಿಡಿಯೋ ಒಬಾಮ ಜೈಲಿನೊಳಗೆ ಕಿತ್ತಳೆ ಬಣ್ಣದ ಜಂಪ್‌ಸೂಟ್ ಧರಿಸಿ ಕುಳಿತಿರುವ ದೃಶ್ಯಕ್ಕೆ ಕೊನೆಗೊಳ್ಳುತ್ತದೆ. ಒಬಾಮ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ ವಾರದ ನಂತರ ಈ ವಿಡಿಯೋ ಬಂದಿದೆ.
2016 ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಗೆಲುವಿನಲ್ಲಿ ರಷ್ಯಾದ ಪ್ರಭಾವವಿದೆ ಎಂಬ ಆರೋಪಗಳ ಮೇಲೆ ಒಬಾಮ ಆಡಳಿತವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿಕೆ ನೀಡಿದ್ದರು. ಅದಾದ, ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
“2016ರಲ್ಲಿ ಒಬಾಮ ಆಡಳಿತದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳು, ಗುಪ್ತಚರವನ್ನು ರಾಜಕೀಯಗೊಳಿಸಿದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ವರ್ಷಗಳ ಕಾಲ ನಡೆದ ದಂಗೆಗೆ ಅಡಿಪಾಯ ಹಾಕಿದರು. ಇದು ಅಮೆರಿಕದ ಜನರ ಇಚ್ಛೆಯನ್ನು ಬುಡಮೇಲು ಮಾಡಿತು ಮತ್ತು ನಮ್ಮ ಪ್ರಜಾಪ್ರಭುತ್ವ ಗಣರಾಜ್ಯವನ್ನು ದುರ್ಬಲಗೊಳಿಸಿತು. ಈ ಬಗ್ಗೆ ಅಮೆರಿಕನ್ನರಿಗೆ ಅಂತಿಮ ಸತ್ಯ ತಿಳಿಸಲು ವಿಚಾರಣೆ ನಡೆಸಬೇಕು” ಎಂದು ತುಳಸಿ ಗಬ್ಬಾರ್ಡ್ ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದರು.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಬಂಧನದ ನಕಲಿ ಎಐ ವಿಡಿಯೋ ಬಿಡಗಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಲವರು ಡೊನಾಲ್ಡ್ ಟ್ರಂಪ್ ಅವರ ಈ ಕೃತ್ಯವನ್ನು ಖಂಡಿಸಿದ್ದಾರೆ.
Donald J. Trump Truth Social 07.20.25 06:47 PM EST pic.twitter.com/Xf5LYzkZiI
— Fan Donald J. Trump Posts From Truth Social (@TrumpDailyPosts) July 20, 2025