ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರ ವಿರುದ್ಧದ ಸಮನ್ಸ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ವಿರುದ್ಧ ಜಾರಿ ನಿರ್ದೇಶನಾಲಯದ ಮೇಲ್ಮನವಿಯನ್ನು ಪರಿಗಣಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಜಾರಿ ನಿರ್ದೇಶನಾಲಯವನ್ನು “ರಾಜಕೀಯ ಹೋರಾಟಗಳಿಗೆ” ಏಕೆ ಬಳಸಲಾಗುತ್ತಿದೆ ಎಂದು ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಇ.ಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು ವಿಚಾರಣೆ ನಡೆಸಿತು. “ರಾಜಕೀಯ ಕದನಗಳು ಚುನಾವಣಾ ಕ್ಷೇತ್ರದಲ್ಲಿರಲಿ. ನೀವು ಏಕೆ ಬಳಸುತ್ತೀರಿ?” ಎಂದು ಸುಪ್ರೀಂ ಕೋರ್ಟ್ ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
“ದಯವಿಟ್ಟು ನಮ್ಮನ್ನು ಬಾಯಿ ತೆರೆಯಲು ಕೇಳಬೇಡಿ. ಇಲ್ಲದಿದ್ದರೆ, ನಾವು ಇ.ಡಿ ಬಗ್ಗೆ ಕೆಲವು ಕಠಿಣ ಟೀಕೆಗಳನ್ನು ಮಾಡಬೇಕಾಗಿ ಬರುತ್ತದೆ. ದುರದೃಷ್ಟವಶಾತ್, ನನಗೆ ಮಹಾರಾಷ್ಟ್ರದಲ್ಲಿ ಸ್ವಲ್ಪ ಅನುಭವವಿದೆ. ನೀವು ಈ ರೀತಿಯ ಹಿಂಸಾಚಾರವನ್ನು ಮುಂದುವರಿಸಬೇಡಿ. ರಾಜಕೀಯ ಕದನಗಳು ಮತದಾರರ ಮುಂದೆ ನಡೆಸಲಿ. ನಿಮ್ಮನ್ನು ಏಕೆ ಇದಕ್ಕಾಗಿ ಬಳಸಲಾಗುತ್ತಿದೆ?” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಪ್ರಶ್ನಿಸಿ ಇ.ಡಿಯ ಮೇಲ್ಮನವಿಯನ್ನು ವಜಾಗೊಳಿಸಿದರು.