- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ, ಡಿಸಿಎಂ ಹಾಗೂ ಸಚಿವರು ಭಾಗಿ
- ಸಭೆಗೆ ಸುಮಾರು 20 ಸಾವಿರ ಜನರು ಆಗಮಿಸುವ ನಿರೀಕ್ಷೆ: ಪ್ರಿಯಾಂಕ್ ಖರ್ಗೆ
ಗೃಹಜ್ಯೋತಿ ಯೋಜನೆಗೆ ಶನಿವಾರ ಕಲುಬುರಗಿಯಿಂದ ಲೋಕಾರ್ಪಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಹತ್ವ ಪೂರ್ಣ ಗೃಹಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯದ ಒಟ್ಟು 1,41,23,240 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ 4,69,029 ಫಲಾನುಭವಿಗಳು ಇದ್ದಾರೆ” ಎಂದರು.
“ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಗೊಳ್ಳುವ ಹಂತದಲ್ಲಿದ್ದು ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಯುವನಿಧಿ ಯೋಜನೆ ಈ ಸಲದ ಶೈಕ್ಷಣಿಕ ವರ್ಷ ಮುಗಿದ ನಂತರ ಜಾರಿಯಾಗಲಿದೆ. ನಾವು ಮಾತು ಕೊಟ್ಟಂತೆ ಎಲ್ಲ ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದೇವೆ” ಎಂದು ಹೇಳಿದರು.
“ಗೃಹಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಹಾಗೂ ಇಂಧನ ಸಚಿವ ಕೆಜೆ ಜಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆ. ಈ ಸಭೆಗೆ ಸುಮಾರು 20 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಸಮಾರಂಭದಲ್ಲಿ 10 ಜನರಿಗೆ ಸಾಂಕೇತಿಕವಾಗಿ ಶೂನ್ಯ ಬಿಲ್ ಕೊಡಲಾಗುವುದು. ಈ ಯೋಜನೆ ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ” ಎಂದು ಸಚಿವರು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? SCSP/TSP ಅನುದಾನ ಫಲಾನುಭವಿ ಆಧಾರಿತ ಕಾರ್ಯಕ್ರಮಗಳಿಗೆ ಹಂಚಿಕೆ: ಎಚ್ ಸಿ ಮಹದೇವಪ್ಪ
ಗ್ಯಾರಂಟಿ ಯೋಜನೆಗಳಿಂದ ಇತರೆ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಲಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಜನರಿಗೆ ಅಗತ್ಯ ಯೋಜನೆಗಳ ಜಾರಿಗೆ ಬೇಕಾಗವಷ್ಟು ಅನುದಾನವನ್ನು ಈಗಾಗಲೇ ತೆಗೆದಿರಿಸಲಾಗಿದೆ. ಯಾವುದೇ ಪ್ರಮುಖ ಯೋಜನೆಗಳಿಗೆ ಗ್ಯಾರಂಟಿಗಳಿಂದ ಆರ್ಥಿಕವಾಗಿ ತೊಂದರಯಾಗುವುದಿಲ್ಲ. ಇದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಅಸಹನೀಯವಾಗಿದೆ ಅಷ್ಟೇ” ಎಂದು ಕಿಡಿಕಾರಿದರು.
ಮೃತರ ಕುಟುಂಬಕ್ಕೆ ಪರಿಹಾರ
“ಜಿಲ್ಲೆಯಲ್ಲಿ ಹಾನಿಗೊಳಗಾದ ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವುದರ ಜೊತೆಗೆ ಶಾಲೆಗಳಿಗೆ ಮೂಲಭೂತ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯ ಒದಗಿಸಲು ಸರ್ಕಾರ ಸಿದ್ದವಾಗಿದೆ. ಇತ್ತೀಚಿಗೆ ಮಳೆಬಂದ ಸಂದರ್ಭದಲ್ಲಿ ನೀರಿನ ಕುಳಿಗಳಲ್ಲಿ ಬಿದ್ದು ಇಬ್ಬರು ಬಾಲಕರು ಮುಳುಗಿ ಮೃತರಾಗಿರುವುದು ಕಾಮಗಾರಿ ಗುತ್ತಿಗೆ ಪಡೆದಿರುವ ಎಲ್ ಅಂಡ್ ಟಿ ಕಂಪನಿ ಹಾಗೂ ಕಾರ್ಪೊರೇಷನ್ ಜೊತೆಗೆ ನಾನೂ ಕೂಡಾ ಜವಾಬ್ದಾರನಾಗಿದ್ದೇನೆ. ಈ ಬಗ್ಗೆ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ಎಲ್ ಅಂಡ್ ಟಿ ಕಂಪನಿಯ ಕಡೆಯಿಂದ ಪರಿಹಾರ ಕೊಡಿಸಲಾಗಿದೆ. ಜೊತೆಗೆ ಇತರೆ ಸರ್ಕಾರಿ ಕಾಮಗಾರಿ ನಡೆಯುತ್ತಿರುವ ಕಡೆಗೆ ಈ ರೀತಿ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
“ಅಫಜಲಫುರ್ ತಾಲೂಕಿನ ಅವರಾದ (ಕೆ) ಗ್ರಾಮವನ್ನು ನೆರೆ ಪೀಡಿತ ಗ್ರಾಮ ಎಂದು ಪರಿಗಣಿಸಿ ಸ್ಥಳಾಂತರ ಮಾಡಲಾಗಿದೆ ಆದರೆ ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ಕುರಿತು ಶಾಸಕರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾಳೆ (ಶನಿವಾರ) ಕಲಬುರಗಿ ನಗರದ ಎನ್‌ವಿ ಕಾಲೇಜು ಮೈದಾನದಲ್ಲಿ ನಡೆಯಲಿರುವ ಗೃಹಜ್ಯೋತಿ ಯೋಜನೆಯ ಉದ್ಘಾಟನಾ ಸಮಾರಂಭದ ವೇದಿಕೆ ಹಾಗೂ ಇತರೆ ತಯಾರಿಗಳನ್ನು ಪ್ರಿಯಾಂಕ್ ಖರ್ಗೆ ಶುಕ್ರವಾರ ಪರಿಶೀಲಿಸಿದರು.