ಒಂದು ಪ್ರದೇಶದ ಜನರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ಆರಗ ಜ್ಞಾನೇಂದ್ರ ಯಾವ ಮುಖವನ್ನಿಟ್ಟುಕೊಂಡು ಶಾಸನ ಸಭೆಗೆ ಹೋಗುತ್ತಾರೆ? ಅಲ್ಲಿ ಆ ಭಾಗದ ಜನರ ವಿಚಾರ ಬಂದಾಗ ಇವರ ಪ್ರತಿಕ್ರಿಯೆ ಏನಾಗಿರುತ್ತದೆ? ಇವರ ಮನಸ್ಥಿತಿ ಇಷ್ಟೊಂದು ಕೀಳು ಮಟ್ಟದಾಗಿರುವಾಗ ಶಾಸನಸಭೆಯಲ್ಲಿರಲು ಯೋಗ್ಯರಲ್ಲ. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು
ಕರ್ನಾಟಕದಲ್ಲಿ 2023ರ ಚುನಾವಣೆ ನಂತರ ಆಡಳಿತಾರೂಢ ಬಿಜೆಪಿ ಪಕ್ಷ ಹೀನಾಯ ಸೋಲು ಕಂಡ ನಂತರ ಆ ಪಕ್ಷದ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತಿಸುತ್ತಿರುವುದು ಎಲ್ಲೆಡೆ ಕಾಣುತ್ತಿದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ಬೇಕಾದಂತಹ ಸಿದ್ದತೆಯನ್ನು ಮಾಡಿಕೊಂಡು ಒಂದಾದ ಮೇಲೆ ಒಂದು ಯೋಜನೆ ಅನುಷ್ಠಾನಗೊಳಿಸುತ್ತಿದ್ದಾರೆ. ಈ ಯೋಜನೆಗಳನ್ನು ವಿರೋಧಿಸಬೇಕಾ? ಅಥವಾ ಬೆಂಬಲಿಸಬೇಕಾ ಅನ್ನುವ ಸ್ಪಷ್ಟತೆ ಇಲ್ಲದ ಬಿಜೆಪಿ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಒಬ್ಬರು ರಾಜ್ಯದ ಆರ್ಥಿಕ ಸ್ಥಿತಿ ಕೆಟ್ಟು ಹೋಗುತ್ತದೆ ಅಂದರೆ, ಮತ್ತೊಬ್ಬರು ಇದನ್ನು ಯಾವುದೇ ಶರತ್ತು ಇಲ್ಲದೇ ಜಾರಿಗೊಳಿಸಬೇಕು ಎನ್ನುತ್ತಾರೆ. ದೇಶದ ಪ್ರಧಾನಿ ವಿವಿಧ ರಾಜ್ಯಗಳಲ್ಲಿ ಹೋಗಿ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ, ಅವರ ಘನತೆ ಮೀರಿ ಟೀಕಿಸುತ್ತಿರುವುದು ಆಶ್ಚರ್ಯಕರವಾಗಿದೆ.
ಇದೇ ಭರದಲ್ಲಿ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕರಾದ ಆರಗ ಜ್ಞಾನೇಂದ್ರ ಅವರು ಕಸ್ತೂರಿ ರಂಗನ ವರದಿ ಕುರಿತು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಆ ಭಾಗದ ಜನರಿಗೆ ನೀಡಿರುವದು ಅವರಿಗೆ ಏನು ಗೊತ್ತು ಮರ, ಗಿಡ, ನೆರಳು, ಅವುಗಳನ್ನು ನೋಡಿಯೇ ಇಲ್ಲ. ಬಿಸಿಲಿಗೆ ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಮಲ್ಲಿಕಾರ್ಜುನ ಖರ್ಗೆಯವರನ್ನು ನೋಡಿದರೆ ಗೊತ್ತಾಗುತ್ತೇ ಎಂದು ಹೀಯಾಳಿಸಿ ಮಾತನಾಡಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ವಿಷಯ. ಇಂತಹವರು ಈ ರಾಜ್ಯದ ಗೃಹ ಸಚಿವರಾಗಿದ್ದರು ಎನ್ನುವುದೇ ವಿಪರ್ಯಾಸ.
“ಆ ಭಾಗದ ಜನ ಬಿಸಿಲಿಗೆ ಸುಟ್ಟು ಕರಕಲಾಗಿರುತ್ತಾರೆ”ಎಂದು ಕಲ್ಯಾಣ ಕರ್ನಾಟಕ ಭಾಗದ ಜನ ಮನುಷ್ಯರೇ ಅಲ್ಲ ಎನ್ನುವ ರೀತಿ ವರ್ತಿಸಿರುವುದು ಜನಾಂಗೀಯ ನಿಂದನೆಗೆ ಸಮ. ಯಾವ ಉದ್ದೇಶಕ್ಕೆ ಪ್ರತಿಭಟನೆ ಮಾಡುತ್ತಿದ್ದರೋ ಆ ವಿಷಯದ ಗಂಭೀರತೆಯನ್ನೇ ಕಳೆದುಕೊಂಡು, ತೀರಾ ವೈಯಕ್ತಿಕ ನಿಂದನೆ ಏಷ್ಟು ಸರಿ? ಕಸ್ತೂರಿ ರಂಗನ್ ವರದಿ ಜಾರಿ ಮಾಡಬೇಕೋ ಇಲ್ಲವೋ ಎನ್ನುವದು ರಾಷ್ಟ್ರಮಟ್ಟದ ವಿಚಾರ. ಅದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ. ಕಸ್ತೂರಿ ರಂಗನ ವರದಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಂಬಂದಪಟ್ಟ ವಿಚಾರ. ಇದಕ್ಕೂ ಮೊದಲು ಮಾಧವ ಗಾಡ್ಗೀಳ್ ವರದಿಯೂ ಸಹ ಇದೆ. ನಿಮಗೆ ವಿರೋಧ ಮಾಡುವುದಾದರೆ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ಮಾಡಬೇಕು. ರಾಜ್ಯಗಳಿಗೆ ಆ ವರದಿ ಅನುಷ್ಠಾನ ಮಾಡಲು ಯಾವ ಅಧಿಕಾರ ಇದೆ ಎನ್ನುವ ಕನಿಷ್ಠ ತಿಳಿವಳಿಕೆಯೂ ಸಚಿವರಾಗಿ ಕೆಲಸ ಮಾಡಿದ ಈ ಮಹನೀಯರಿಗೆ ಗೊತ್ತಿಲ್ಲರುವುದು ವಿಷಾದದ ಸಂಗತಿ. ಒಬ್ಬ ಗೃಹ ಸಚಿವರಾಗಿ ಒಮ್ಮೆಯೂ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗೆ ಭೇಟಿ ನೀಡದ ಈ ಮಹಾಶಯ ರಾಜ್ಯದ ಗೃಹ ಸಚಿವರಾಗಿದ್ದರು ಎನ್ನುವುದೇ ವಿಪರ್ಯಾಸ.
ಹೌದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ಜಾಸ್ತಿ ಇದೆ. ಮಳೆ ಕಮ್ಮಿ ಇದೆ, ಅದಕ್ಕೆ ಈ ಭಾಗದ ಜನ ಜವಾಬ್ದಾರರೇ? ಒಬ್ಬ ಮನುಷ್ಯ ಯಾಕಾಗಿ ಕಪ್ಪಾಗುತ್ತಾನೆ? ಯಾವಾಗ ಮನುಷ್ಯ ಬಿಸಿಲಿನಲ್ಲಿ ಕಷ್ಟಪಟ್ಟು ದುಡಿದು ಬದುಕುತ್ತಾನೆ. ಅದಕ್ಕಾಗಿ ಸಾಮಾನ್ಯವಾಗಿ ಕಪ್ಪಾಗುತ್ತಾನೆ. ಇದು ಹೀಯಾಳಿಸುವ ವಸ್ತುವೇ? ಅರಗ ಜ್ಞಾನೇಂದ್ರ ಅವರಿಗೆ ದಮ್ಮು ತಾಕ್ಕತ್ತು ಇದ್ದರೆ ಬೇಸಿಗೆಯಲ್ಲಿ ಈ ಭಾಗದಲ್ಲಿ ಬಂದು ಒಂದು ತಿಂಗಳು ವಾಸವಿದ್ದು ಹೋಗಲಿ. ಯಾಕೆ ಈ ಭಾಗದ ಜನ ಕಪ್ಪಾಗಿರುತ್ತಾರೆ ಎಂದು ಗೊತ್ತಾಗುತ್ತದೆ. ತಮ್ಮ ಪಕ್ಷದ ಸೋಲನ್ನು ಅರಗಿಸಿಕೊಳ್ಳಲಾಗದ ಇವರು, ರಾಜಕೀಯ ಹೋರಾಟ ಮಾಡಲು ಹೋಗಿ ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ಅವಮಾನ ಮಾಡಿದ್ದಾರೆ. ಒಬ್ಬ ಶಾಸಕರಾಗಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಒಂದು ಪ್ರದೇಶದ ಜನರ ಬಗ್ಗೆ ಇಷ್ಟು ಕೀಳುಮಟ್ಟದ ಅಭಿಪ್ರಾಯವಿಟ್ಟುಕೊಂಡರೆ, ಇವರ ಮನಸ್ಥಿತಿ ಯಾವ ರೀತಿ ಇರಬಹುದು? ಇಂಥವರು ಶಾಸನ ಸಭೆಯಲ್ಲಿ ಇರಲು ಯೋಗ್ಯರೇ? ಇಂತಹವರನ್ನು ಆಯ್ಕೆ ಮಾಡಿದ ಜನರಿಗೆ ಏನನ್ನಿಸಬಹುದು?
ಇವರ ಪಕ್ಷದ ರಾಷ್ಟ್ರೀಯ ನಾಯಕರು ಪಂಡಿತ ಜವಾಹರಲಾಲ ನೆಹರು, ಇಂದಿರಾ ಗಾಂಧಿ, ಮನಮೋಹನ ಸಿಂಗ್, ಸೋನಿಯಾ ಗಾಂಧಿ ಸೇರಿದಂತೆ ಬಹುತೇಕ ರಾಷ್ಟ್ರೀಯ ನಾಯಕರನ್ನು ಹೀಯಾಳಿಸಿದ ಇತಿಹಾಸವಿದೆಯಲ್ಲವೇ. ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಮನೋಭಾವನೆ. ದಿನ ಬೆಳಗಾದರೆ ಮುಸ್ಲಿಮರನ್ನು ಬಯ್ಯುವ ಚಾಳಿ ಇವರ ಪಕ್ಷಕ್ಕೆ ಇದೆ. ಅದೇ ಭರಾಟೆಯಲ್ಲಿ ಇಡೀ ಕಲ್ಯಾಣ ಕರ್ನಾಟಕದ ಜನೆತೆಗೆ ಅವಮಾನವಾಗುವ ರೀತಿಯಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ ಆರಗ ಜ್ಞಾನೇಂದ್ರ.
ಹಿಂದೆ ಗೃಹ ಸಚಿವರಾಗಿದ್ದುಕೊಂಡು ತನ್ನದೇ ಇಲಾಖೆಯ ಅಧಿಕಾರಿಗಳನ್ನು “ಪೊಲೀಸರು ಎಂಜಲು ಕಾಸು ತಿನ್ನುವ ನಾಯಿಗಳು” ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲದೇ ಮೈಸೂರಿನಲ್ಲಿ ಗ್ಯಾಂಗ್ ರೇಪ್ ಘಟನೆಗೆ ಸಂಬಂದಪಟ್ಟಂತೆ, “ರಾತ್ರಿ ಹೊತ್ತು ಹೆಣ್ಣು ಮಕ್ಕಳು ಹೊರಗೆ ಯಾಕೆ ಬರಬೇಕು” ಎನ್ನುವ ಮಾತನಾಡಿದ್ದರು. “ಅಲ್ಲಿ ಮೈಸೂರಿನಲ್ಲಿ ರೇಪ್ ಆಗಿದೆ, ಆದರೆ ಈ ಕಾಂಗ್ರೆಸ್‍ನವರು ಇಲ್ಲಿ ನನ್ನನ್ನೇ ರೇಪ್ ಮಾಡುತ್ತಿದ್ದಾರೆ” ಎಂದು ಹೇಳಿದ್ದರು. ಇದೆಲ್ಲ ಗಮನಿಸಿದರೆ, ಇವರ ಮಾನಸಿಕ ಸ್ಥಿತಿ ಸರಿಯಿಲ್ಲ ಎನ್ನುವದು ಸ್ಪಷ್ಟವಾಗುತ್ತದೆ.
ಇದನ್ನು ಓದಿ ಈ ದಿನ ಸಂಪಾದಕೀಯ | ಕ್ಯಾಂಪಸ್ಸುಗಳಲ್ಲಿ ಜಾತಿ ನಿಂದನೆ- ಬಿಗಿ ಕಾಯಿದೆ ಜಾರಿಯಾಗಲಿ
ತಾವು ಮಾತನಾಡಿದ್ದು ತಪ್ಪಾಗಿದೆ ಎಂದು ಗೊತ್ತಾದ ತಕ್ಷಣ “ಯಾರಿಗಾದರೂ ನೋವಾದರೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಸಮಾಜಾಯಿಷಿ ನೀಡಿದ್ದಾರೆ. ಇಲ್ಲಿ ವಿಷಯ ವಿಷಾದ ವ್ಯಕ್ತಪಡಿಸುವದಷ್ಟೇ ಅಲ್ಲ, ಯಾಕೆಂದರೆ ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖಂಡ್ರೆಯವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಇಡೀ ಕಲ್ಯಾಣ ಕರ್ನಾಟಕದ ಜನತೆಗೆ ಸಂಬಂಧಿಸಿದ್ದು. ಆ ಭಾಗದ ಜನ ಬಿಸಿಲಿಗೆ ಸುಟ್ಟು ಕರಕಲಾಗಿರುತ್ತಾರೆ ಎಂದರೆ ಅವರು ಮನುಷ್ಯರೇ ಅಲ್ಲ ಅನ್ನುವ ರೀತಿ ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಈ ರಾಜ್ಯದ ಅವಿಭಾಜ್ಯ ಅಂಗ. ಇಂತಹ ಪ್ರದೇಶದ ಜನರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿರುವ ಅರಗ ಜ್ಞಾನೇಂದ್ರ ಯಾವ ಮುಖವನ್ನಿಟ್ಟುಕೊಂಡು ಶಾಸನ ಸಭೆಗೆ ಹೋಗುತ್ತಾರೆ? ಶಾಸನ ಸಭೆಯಲ್ಲಿ ಈ ಭಾಗದ ಜನರ ವಿಚಾರ ಬಂದಾಗ ಇವರ ಪ್ರತಿಕ್ರಿಯೆ ಏನಾಗಿರುತ್ತದೆ? ಇವರ ಮನಸ್ಥಿತಿ ಇಷ್ಟೊಂದು ಕೀಳು ಮಟ್ಟದಾಗಿರುವಾಗ, ಇವರು ಶಾಸನ ಸಭೆಯಲ್ಲಿ ಯಾವ ರೀತಿ ಕಾನೂನು ರಚನೆ ಮಾಡುತ್ತಾರೆ. ಇದು ಕಾಣುವಷ್ಟು ಸರಳ ವಿಷಯವಲ್ಲ. ಅರಗ ಜ್ಞಾನೇಂದ್ರ ಅಂತಹವರು ಶಾಸನ ಸಭೆಯಲ್ಲಿ ಇರಲು ಯೋಗ್ಯರಲ್ಲ. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದು ಅವಶ್ಯಕ. ರಾಜ್ಯಪಾಲರು ಹಾಗೂ ವಿಧಾನಸಭೆಯ ಅಧ್ಯಕ್ಷರು ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಡಾ ರಝಾಕ್ ಉಸ್ತಾದ್
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಯಚೂರು
Correct. He should be arrested for insulting a Dalit & that too a national level leader