ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಲಿತ ಕಾರ್ಮಿಕ ಕುಟುಂಬಗಳು ನಿವೇಶನಕ್ಕಾಗಿ ಹೋರಾಟಕ್ಕಿಳಿದಿದ್ದು, ಸರ್ಕಾರಿ ಜಾಗದಲ್ಲಿ ಟೆಂಟ್ ನಿರ್ಮಿಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಜಯಪುರದಿಂದ 6 ಕಿ.ಮೀ. ದೂರದಲ್ಲಿರುವ ಸರ್ಕಾರಿ ಜಾಗದಲ್ಲಿ ವಾಸ ಮಾಡುವುದಕ್ಕಾಗಿ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ದಶಕಗಳಿಂದ ನಿವೇಶನಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಭೂಹೀನ ಹಾಗೂ ವಸತಿಹೀನರಾಗಿರುವ ಸುಮಾರು 40 ದಲಿತ ಎಸ್ಟೇಟ್ ಕಾರ್ಮಿಕ ಕುಟುಂಬಗಳು ಇದೀಗ ಸ್ವತಃ ತಾವೇ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸಲು ಮುಂದಾಗಿವೆ. ಈ ಹೋರಾಟಕ್ಕೆ ಕರ್ನಾಟಕ ಜನಶಕ್ತಿ ಸಂಘಟನೆ ಬೆಂಬಲ ವ್ಯಕ್ತಪಡಿಸಿದೆ.
ಸುಮಾರು ವರ್ಷಗಳಿಂದ ಭೂಮಿ, ವಸತಿ ಇಲ್ಲದೆ ಮಲೆನಾಡು ಭಾಗದಲ್ಲಿ ಅದೆಷ್ಟೋ ಬಡ ಕುಟುಂಬಗಳು ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣಕ್ಕೆ ಹೇರೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಎಲೆಮಡಲು ಗ್ರಾಮದ ದಲಿತ ಕಾರ್ಮಿಕ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಂಡಿದ್ದರು. ಈಗ ಅಧಿಕಾರಿಗಳಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಸರ್ಕಾರಿ ಜಾಗದಲ್ಲಿ ಟೆಂಟ್ ನಿರ್ಮಿಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಎಸ್ಟೇಟ್ ಕಾರ್ಮಿಕರು ಟೆಂಟ್ ನಿರ್ಮಿಸಿ ಹೋರಾಟಕ್ಕಿಳಿದ ವಿಚಾರ ತಿಳಿಯುತ್ತಿದ್ದಂತೆಯೇ, ಕೊಪ್ಪ ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು.

ಸುಮಾರು 40 ವರ್ಷದಿಂದ ಭೂಮಿ ಮತ್ತು ವಸತಿಗಾಗಿ ಪರಿಶಿಷ್ಟ ಜಾತಿ, ಪಂಗಡ, ಮುಂಡಾಲ್ ಸಮುದಾಯ ಒಟ್ಟಾರೆ ದಲಿತ ಸಮುದಾಯಕ್ಕೆ ಸೇರಿದ 40 ಕುಟುಂಬಕ್ಕಿಂತ ಹೆಚ್ಚು ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಿ ಜಾಗದಲ್ಲಿ ವಾಸ ಮಾಡುವುದಕ್ಕಾಗಿ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ದಶಕಗಳಿಂದ ನಿವೇಶನಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಭೂಹೀನ ಹಾಗೂ ವಸತಿಹೀನರಾಗಿರುವ ಎಸ್ಟೇಟ್ ಕಾರ್ಮಿಕ ಕುಟುಂಬಗಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು, ಇದೀಗ ಸ್ವತಃ ತಾವೇ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸಲು ಮುಂದಾಗಿದ್ದಾರೆ.

“ಕಳೆದ 40 ವರ್ಷಗಳಿಂದ ನಾವು ನಿವೇಶನಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಅರ್ಜಿಗಳನ್ನು ಸಲ್ಲಿಸುತ್ತಲೇ ಇದ್ದೇವೆ. ಪ್ರತಿ ವರ್ಷವೂ ಗ್ರಾಮ ಪಂಚಾಯತ್‌ಗಳಿಗೆ ಅರ್ಜಿಗಳನ್ನು ಹಾಕಿದ್ದೇವೆ, ಆದರೆ ಯಾವುದೇ ಫಲಿತಾಂಶ ಸಿಕ್ಕಿಲ್ಲ. ಸರ್ಕಾರದಿಂದ ನಮಗೆ ಯಾವುದೇ ಸೌಲಭ್ಯಗಳು ಸಿಗಲಿಲ್ಲ. ಹಾಗಾಗಿ, ಇಲ್ಲಿ ಸುಮಾರು ಎರಡು ಎಕರೆ ಕಂದಾಯ ಜಾಗವಿದೆ ಎಂದು ತಿಳಿದುಬಂದಿದೆ. ನಾವು ಮೊದಲು ಇಲ್ಲಿ ಶೆಡ್‌ಗಳನ್ನು ಹಾಕಿಕೊಂಡು, ಮುಂದಿನ ದಿನಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಯೋಜಿಸಿದ್ದೇವೆ” ಎಂದು ಸ್ಥಳೀಯ ನಿವಾಸಿ ಮಂಜು ತಮ್ಮ ನೋವನ್ನು ಈದಿನ.ಕಾಮ್ ಜೊತೆ ಹಂಚಿಕೊಂಡಿದ್ದಾರೆ.

“ಇಲ್ಲಿಯವರೆಗೆ ನಾವೆಲ್ಲರೂ ಎಸ್ಟೇಟ್‌ಗಳಲ್ಲಿ ನೀಡಿದ ವಸತಿಗಳಲ್ಲಿ ವಾಸಿಸುತ್ತಿದ್ದೇವೆ. ಆದರೆ, ಕೆಲವರು ನಿವೃತ್ತಿ ಹೊಂದಿದ್ದು, ಎಸ್ಟೇಟ್ ಮಾಲೀಕರು ವಾಸಿಸಲು ಅವಕಾಶ ನೀಡುತ್ತಿಲ್ಲ. ತಿಂಗಳಿಗೆ 5000 ರೂಪಾಯಿ ಮನೆ ಬಾಡಿಗೆ ಕಟ್ಟಿ ಬದುಕುವುದು ನಮಗೆ ಅಸಾಧ್ಯ” ಎಂದು ಸಾವಿತ್ರಮ್ಮ ಈದಿನ. ಕಾಮ್ ಜೊತೆ ಮಾತಾಡಿದ್ದಾರೆ.

ಸ”ರ್ಕಾರವು ವಸತಿ ಇಲ್ಲದವರಿಗೆ ವಸತಿ ಮತ್ತು ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂದು ಹೇಳುತ್ತದೆ. ಆದರೆ, ಇಲ್ಲಿನ ನಮ್ಮ ಜನರಿಗೆ ಇನ್ನೂ ನಿವೇಶನ ಸಿಕ್ಕಿಲ್ಲ. ಕೊಪ್ಪ ಕ್ಷೇತ್ರದ ಶಾಸಕ ರಾಜೇಗೌಡ ಅವರನ್ನು ಈ ಬಗ್ಗೆ ಕೇಳಿದಾಗ, “ಜಾಗ ಸಿಕ್ಕರೆ ನಿವೇಶನ ಕೊಡುತ್ತೇನೆ” ಎಂದು ಹೇಳಿದ್ದಾರೆ. ಈಗ ಜಾಗ ಸಿಕ್ಕಿರುವುದರಿಂದ, ಶಾಸಕರು ಈ ಜಾಗವನ್ನು ನಮಗೆ ದೊರಕುವಂತೆ ಮಾಡಬೇಕು ಎಂದು ಕುಟುಂಬಗಳು ಆಗ್ರಹಿಸಿವೆ. ಈ ಸಂಬಂಧ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರ್ ಗಮನಕ್ಕೆ ತರಲಾಗಿದೆ. ಹಾಗೆಯೇ,ಈ ಹೋರಾಟಕ್ಕೆ ಕರ್ನಾಟಕ ಜನಶಕ್ತಿ ಬೆಂಬಲ ವ್ಯಕ್ತಪಡಿಸಿದೆ” ಎಂದು ಕರ್ನಾಟಕ ಜನಶಕ್ತಿ ಕೆ ಎಲ್ ಅಶೋಕ್ ತಿಳಿಸಿದ್ದಾರೆ.

ದಶಕಗಳ ಹಿಂದೇ ಇದೇ ರೀತಿ ಬದುಕು ಕಟ್ಟಿಕೊಳ್ಳಲು ಶೆಡ್ ನಿರ್ಮಾಣ ಮಾಡಿ ಮಳೆ, ಚಳಿ ಎನ್ನದೆ ಹೋರಾಟ ಮಾಡಿದಾಗ ಹಿಂದೆ ಇದ್ದ ಎ ಸಿ ಅವರೇ ಸ್ಥಳಕ್ಕೆ ಭೇಟಿ ನೀಡಿ ನಿಮಗೆಭೂಮಿ ಮತ್ತು ನಿವೇಶನ ಕೊಡುತ್ತೇವೆಂದು ಆಶ್ವಾಸನೆ ಕೊಟ್ಟು ಬೇರೆಡೆ ವರ್ಗಾವಣೆ ಆದರೂ ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿಲ್ಲ. ನಮ್ಮನ್ನು ಕಡೆಗಣಿಸುತ್ತುಲೇ ಬಂದಿದ್ದಾರೆ. ಶ್ರೀಮಂತರಿಗೊಂದು ನ್ಯಾಯ ಬಡವರಿಗೊಂದು ನ್ಯಾಯವೇ? ಎಂದು ದಲಿತ ಸಮುದಾಯದ ಜನರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸ್ಥಳೀಯ ಭೂಮಾಲೀಕರಾದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹೆಬ್ಬಾರು ಮನೆತನದವರು ದಲಿತ ಕುಟುಂಬಗಳಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ. ಹಾಗೆಯೇ, “ಮೊದಲು ಅವರು ಬೇರೆಯವರಿಗೆ ಸೈಟ್ ಕೊಟ್ಟಿದ್ದೇವೆ ಎಂದು ಬೆದರಿಸಿದರು. ಈ ಜಾಗದಲ್ಲಿ ಎರಡು ದಿನಗಳ ಹಿಂದೆ ಬಾಳೆ ಗಿಡಗಳನ್ನು ನೆಟ್ಟು ಹೋಗಿದ್ದಾರೆ. ಆದರೆ, ಇದು ನಿಜಕ್ಕೂ ಸರ್ಕಾರಿ ಜಾಗ. ನಮಗೆ ಬೆದರಿಕೆ ಹಾಕಲು ಬಂದಿರುವರುವ ಭೂಮಾಲೀಕರಿಗೆ ಈಗಾಗಲೇ ನೂರಾರು ಎಕರೆ ಜಮೀನು ಇದೆ. ಅವರ ಮನೆಯಲ್ಲಿ ಹಿಂದೆ ಹಲವು ದಲಿತರು ಕೂಲಿಯಾಳುಗಳಾಗಿ ದುಡಿದಿದ್ದರೂ ಸರಿಯಾಗಿ ಸಂಬಳ ನೀಡಿಲ್ಲ. ಸ್ಥಳೀಯರನ್ನು ಹೆದರಿಸಿ ಕಡಿಮೆ ಹಣಕ್ಕೆ ಹಲವರ ಜಮೀನನ್ನು ಸಹ ಖರೀದಿಸಿದ್ದಾರೆ” ಎಂದು ಭೂ, ವಸತಿಹೀನರು ಆರೋಪಿಸಿದ್ದಾರೆ.

“ಸರ್ಕಾರಿ ಜಾಗದಲ್ಲಿ ಯಾರು ಕೂಡ ನೆಲೆಯೂರಲು ಅವಕಾಶ ಇಲ್ಲ. ಈ ಜಾಗದಲ್ಲಿ ಮೊದಲು ಸರ್ವೇ ನಡೆದ ನಂತರ ಯಾವ ಇಲಾಖೆಗೆ ಬರುತ್ತೆ ಎಂದು ತಿಳಿದು, ಆ ಜಾಗದಲ್ಲಿ 2 ಎಕರೆ ಭೂಮಿ ಇದಿಯೋ ಇಲ್ಲವೋ ಎಂದು ತಿಳಿಯಬೇಕು. ಕಾನೂನು ನಿಯಮದಂತೆ ನಾವು ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೂ ಜನರು ಕೂಡ ಸಹಕರಿಸಬೇಕು” ಎಂದು ಕೊಪ್ಪ ತಾಲೂಕಿನ ತಹಶೀಲ್ದಾರ್ ಲಿಖಿತಾ ಮೋಹನ್ ಈದಿನ.ಕಾಮ್ ಗೆ ಮಾಹಿತಿ ತಿಳಿಸಿದ್ದಾರೆ.

ಸುಮಾರು ತಿಂಗಳ ಹಿಂದೆ ಸ್ಥಳದ ಜಿಪಿಎಸ್ ಮಾಡಿಕೊಂಡು ಹೋಗಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ. “4-5 ತಿಂಗಳ ಹಿಂದೆ ಜಿಪಿಎಸ್ ಮಾಡಲಾಗಿದೆ. ಆದರೆ 40 ವರ್ಷಗಳಿಂದ ನಾವು ಮನೆ ಮತ್ತು ಜಾಗವಿಲ್ಲದೆ ಅರ್ಜಿ ಹಾಕುತ್ತಲೇ ಇದ್ದೇವೆ. ಈಗ ಎಸ್ಟೇಟ್‌ನಲ್ಲಿ ಕೆಲವರು ನಿವೃತ್ತರಾಗಿದ್ದಾರೆ. ಇನ್ನು ಕೆಲವರು ಸದ್ಯದಲ್ಲೇ ನಿವೃತ್ತರಾಗಲಿದ್ದಾರೆ. ಅನಾರೋಗ್ಯದಿಂದ ಮನೆಯಲ್ಲಿ ಕುಳಿತರೆ ಎಸ್ಟೇಟ್ ಮಾಲೀಕರು ಜಾಗ ಖಾಲಿ ಮಾಡುವಂತೆ ಬೆದರಿಸುತ್ತಿದ್ದಾರೆ” ಎಂದು ಗ್ರಾಮಸ್ಥೆ ಸರಿತಾ ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.

“ನಾವೆಲ್ಲರೂ ಬಾಳೆಹೊನ್ನೂರು ಹಾಗೂ ಸುತ್ತಮುತ್ತಲಿನ ಟೀ ಎಸ್ಟೇಟ್‌ನಲ್ಲಿ ದುಡಿಯುತ್ತಿದ್ದೇವೆ. ಶತಮಾನದಿಂದ ನಮಗೆ ಮನೆ ಎಂಬುದೇ ಇಲ್ಲ. ನಾವೆಲ್ಲ ಬಡವರು. ಇದಕ್ಕಾಗಿ ನಾಗರಿಕರು. ಸಂಘಟನೆಗಳು ನಮಗೆ ಬೆಂಬಲ ನೀಡಬೇಕು. ನಮ್ಮದೇ ಎಂದು ಒಂದು ಜಾಗವಿರಲಿಲ್ಲ. ಈಗಲಾದರೂ ನಾವು ಸ್ವತಂತ್ರವಾಗಿ ಬದುಕಲು ಇಲ್ಲಿ ಜಾಗ ಕೊಡಬೇಕು” ಎಂದು ದಲಿತ ಕುಟುಂಬಗಳು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಹಣ ದುರುಪಯೋಗ ಮತ್ತು ಕರ್ತವ್ಯ ಲೋಪ ಆರೋಪ: ಗ್ರಾ ಪಂ ಪಿಡಿಒ ಅಮಾನತು
ಜಯಪುರ ಪೊಲೀಸರು, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಧ್ಯಕ್ಷರು ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ದಾಖಲಾತಿಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.