ಪ್ರತಿಪಕ್ಷಗಳ ಒಕ್ಕೂಟಕ್ಕೆ ‘ಇಂಡಿಯಾ’ ಹೆಸರು ಬಳಕೆ ಮಾಡಿರುವುದನ್ನು ನಿಷೇಧಿಸುವಂತೆ ವಿರೋಧ ಪಕ್ಷದ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ಶುಕ್ರವಾರ(ಆಗಸ್ಟ್ 4) ಕೇಂದ್ರ, ಚುನಾವಣಾ ಆಯೋಗ ಮತ್ತು ಹಲವು ವಿರೋಧ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ವಿಭಾಗೀಯ ಪೀಠವು ವಕೀಲ ವೈಭವ್ ಸಿಂಗ್ ಮೂಲಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಸಲ್ಲಿಸಿದ ಅರ್ಜಿಗೆ ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕೋರಿತು.
ಅರ್ಜಿದಾರರ ಪರ ಹಿರಿಯ ವಕೀಲ ಅರುಣಾ ಶ್ಯಾಮ್ ವಾದ ಮಂಡಿಸಿದರು. ನಂತರ ನ್ಯಾಯಾಲಯವು ಅಕ್ಟೋಬರ್ 31 ರಂದು ಪ್ರಕರಣವನ್ನು ಹೆಚ್ಚಿನ ಪರಿಗಣನೆಗೆ ಪಟ್ಟಿ ಮಾಡಲು ತಿಳಿಸಿತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿ ಹೆಚ್ಚಿನ ಪರಿಗಣನೆಗೆ ಪಟ್ಟಿಗೆ ದಿನಾಂಕದ ಅವಧಿಯನ್ನು ಕಡಿಮೆ ಮಾಡಲು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಲೋಕಸಭೆಯಲ್ಲಿ ದೆಹಲಿ ಸೇವಾ ಮಸೂದೆ ಅಂಗೀಕಾರ; ವಿಪಕ್ಷಗಳ ಸಭಾತ್ಯಾಗ
ಆದಾಗ್ಯೂ, ಈ ವಿಷಯಗಳನ್ನು ಪರಿಗಣಿಸುವ ಅಗತ್ಯವಿದೆ ಮತ್ತು ಅದು ಚುನಾವಣಾ ಆಯೋಗ ಮತ್ತು ಇತರ ಪ್ರತಿವಾದಿಗಳ ವಾದ ಆಲಿಸುವ ಕಾರಣ ಸಮಯ ಬೇಕಾಗುತ್ತದೆ ಎಂದು ಪೀಠ ಹೇಳಿದೆ.
1950ರ ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 2 ಮತ್ತು 3 ರ ಅಡಿಯಲ್ಲಿ ಇಂಡಿಯಾ ಎಂಬ ಹೆಸರನ್ನು ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಹೇಳಿದ್ದಾರೆ.
“ಭಾರತೀಯ ಚುನಾವಣಾ ಆಯೋಗವು ಇಲ್ಲಿಯವರೆಗೆ ಪ್ರತಿವಾದಿ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಮೈತ್ರಿಗಾಗಿ ಇಂಡಿಯಾ ಎಂಬ ಸಂಕ್ಷಿಪ್ತ ರೂಪವನ್ನು ಬಳಸುವುದನ್ನು ತಡೆಯಲು ಯಾವುದೇ ಕ್ರಮ ಗೊಂಡಿಲ್ಲ, ಆದ್ದರಿಂದ ಅರ್ಜಿದಾರರು ಈ ರಿಟ್ ಅರ್ಜಿಯನ್ನು ಸಲ್ಲಿಸುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯನ್ನು ಹೊಂದಿಲ್ಲ” ಎಂದು ಮನವಿಯಲ್ಲಿ ತಿಳಿಸಲಾಗಿದೆ.