ಆಪರೇಷನ್ ಸಿಂಧೂರ ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿ ಕುರಿತು ಲೋಕಸಭೆಯಲ್ಲಿ 16 ಗಂಟೆಗಳ ಚರ್ಚೆ ನಡೆಸಲು ಕೊನೆಗೂ ಸರ್ಕಾರ ಅಸ್ತು ಎಂದಿದೆ. ಮುಂದಿನ ವಾರ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಆದರೆ ಈ ವಿಚಾರದಲ್ಲಿ ಚರ್ಚೆ ಈ ವಾರದಲ್ಲೇ ನಡೆಯಬೇಕು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿವೆ. ಆದರೆ ಪ್ರಧಾನಿ ಮೋದಿ ಈ ವಾರ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಹಾಗಾಗಿ ಮುಂದಿನ ವಾರ ಮಾತ್ರ ಚರ್ಚೆ ಸಾಧ್ಯ ಎಂದು ಸರ್ಕಾರ ತಿಳಿಸಿರುವಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಮುಂಗಾರು ಅಧಿವೇಶನದ ವೇಳೆಯೇ ಮೋದಿ ವಿದೇಶ ಪ್ರವಾಸ: ವಿಪಕ್ಷಗಳ ಎದುರಿಸಲಾಗದೆ ಪಲಾಯನವೇ?
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂಧೂರ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಬೇಕು ಎಂದು ಈ ಹಿಂದೆ ಹಲವು ಬಾರಿ ವಿಪಕ್ಷಗಳು ಆಗ್ರಹಿಸಿವೆ. ಆದರೆ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಲ್ಲ.
ಮುಂಗಾರು ಅಧಿವೇಶನದ ಬಗ್ಗೆ ಈ ವಾರ ಸರ್ಕಾರದ ಕಾರ್ಯಸೂಚಿಯಲ್ಲಿ ಈ ವಿಷಯದ ಕುರಿತು ಚರ್ಚೆ ಪ್ರಸ್ತಾಪವಿಲ್ಲ ಎಂದು ವಿರೋಧ ಪಕ್ಷದ ಸದಸ್ಯರು ಪ್ರತಿಭಟಿಸಿದ್ದರು. ಹಾಗೆಯೇ ಚರ್ಚೆ ವೇಳೆ ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಸಹ ಹಾಜರಿರಬೇಕು ಎಂದು ಆಗ್ರಹಿಸಿದ್ದರು. ಇದೀಗ ಕೊನೆಗೂ ಕೇಂದ್ರ ಚರ್ಚೆಗೆ ಅಸ್ತು ಎಂದಿದೆ.
ಸಂಸತ್ತಿನ ಮುಂಗಾರು ಅಧಿವೇಶನವು ಸೋಮವಾರ ಆರಂಭವಾಗಿದ್ದು, ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮಣಿಪುರದ ಪರಿಸ್ಥಿತಿಯ ಕುರಿತು ಚರ್ಚೆಗೆ ಕೆಲವು ವಿರೋಧ ಪಕ್ಷದ ಸಂಸದರು ಆಗ್ರಹಿಸಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ಗೆ ಪಾಕಿಸ್ತಾನ ಮೂಲದ ಭಯೋತ್ಪಾದಕರು ನುಗ್ಗಿ 26 ಪ್ರವಾಸಿಗರನ್ನು ಕೊಂದಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ವಾಯು ದಾಳಿ ನಡೆಸಿದ್ದು ಸುಮಾರು 100 ಉಗ್ರರು ಸಾವನ್ನಪ್ಪಿದ್ದಾರೆ.
