ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದು, ಕೇಂದ್ರ ಗೃಹ ಇಲಾಖೆಗೆ ರವಾನಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಜಗದೀಪ್ ಧನಕರ್ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದರು. ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ತಕ್ಷಣವೇ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ” ಎಂದು ಪತ್ರದಲ್ಲಿ ತಿಳಿಸಿದ್ದರು.
ತಮಗೆ ಸಹಕಾರ ನೀಡಿದ ರಾಷ್ಟ್ರಪತಿ, ಪ್ರಧಾನಿ ಮತ್ತು ಸಚಿವರಿಗೂ ಧನ್ಯವಾದ ತಿಳಿಸಿದ್ದರು. ಎಲ್ಲ ಸಂಸದರಿಂದ ನಾನು ಪಡೆದ ಗೌರವ, ವಿಶ್ವಾಸವನ್ನು ಸದಾ ನೆನಪಿಸಿಕೊಳ್ಳುತ್ತೇನೆ. ನಮ್ಮ ಪ್ರಜಾಪ್ರಭುತ್ವದಲ್ಲಿ ಉಪರಾಷ್ಟ್ರಪತಿಯಾಗಿ ನಾನು ಪಡೆದ ಅನುಭವಗಳು ಮತ್ತು ಒಳನೋಟಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರತಿಭಟಿಸಿದರೆ ಸಾಕು ಜೈಲು ಶಿಕ್ಷೆ; ಇದು ಬಿಜೆಪಿಯ ಅಸಲಿ ಮುಖವೇ?
ಜಗದೀಪ್ ಧನಕರ್ ಅವರು 2022ರ ಆಗಸ್ಟ್ ತಿಂಗಳಲ್ಲಿ ಭಾರತದ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಹೃದಯ ಸಂಬಂಧಿ ಕಾಯಿಲೆಗಳ ನಂತರ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ 4 ದಿನಗಳ ಕಾಲ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಾರತದ ಉಪರಾಷ್ಟ್ರಪತಿ ರಾಜೀನಾಮೆ ನೀಡಿದ್ದರಿಂದ ಖಾಲಿಯಾದ ಆ ಹುದ್ದೆಯನ್ನು ಭರ್ತಿ ಮಾಡಲು ಈ ರಾಜೀನಾಮೆ ನೀಡಿದ 60 ದಿನಗಳ ಒಳಗೆ ಔಪಚಾರಿಕ ಚುನಾವಣೆಯನ್ನು ನಡೆಸಬೇಕು. ಸಂಸತ್ತಿನ ಎರಡೂ ಸದನಗಳ ಎಲ್ಲ ಸದಸ್ಯರು ಮತದಾರರಾಗಿರುತ್ತಾರೆ. ಸಂವಿಧಾನದ ಪ್ರಕಾರ, ಉಪರಾಷ್ಟ್ರಪತಿಗಳ ಹುದ್ದೆ ಖಾಲಿಯಾದರೆ ರಾಜ್ಯಸಭೆಯ ಉಪಸಭಾಪತಿಗಳು ಮೇಲ್ಮನೆಯ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಪ್ರಸ್ತುತ, ಆ ಸ್ಥಾನವನ್ನು ಹರಿವಂಶ್ ನಾರಾಯಣ್ ಸಿಂಗ್ ಹೊಂದಿದ್ದಾರೆ. ಅವರು ತಾತ್ಕಾಲಿಕವಾಗಿ ಅಧಿಕಾರ ನಿರ್ವಹಿಸುತ್ತಾರೆ.