“ಕವಿತೆ ಚರಿತ್ರೆ ಇಲ್ಲದವರ ಚರಿತ್ರೆಯನ್ನು ಕಟ್ಟಿಕೊಡುವ, ಭರವಸೆ ತುಂಬುವ, ಕೆಲಸವನ್ನು ಅನಾದಿ ಕಾಲದಿಂದಲೂ ಕವಿತೆ ಮಾಡುತ್ತಿದ್ದು, ಆ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕಾಲದ ಸಂಕಟಕ್ಕೆ, ನೋವುಗಳಿಗೆ ಸ್ಪಂದಿಸದಿದ್ದರೆ, ಪರಕೀಯರಾಗಿ ಉಳಿದುಕೊಳ್ಳುವ ಅಪಾಯ ನಮಗೆ ಇರುತ್ತದೆ. ಹಾಗಾಗಿ ಪರಕೀಯತೆಯನ್ನು ನಾವು ಯಾವತ್ತಿಗೂ ತಲುಪಬಾರದು. ನಮ್ಮೊಳಗೆ ಜೀವಂತಿಕೆ ಸಂಕಟಕ್ಕೆ, ನೋವಿಗೆ ಸದಾ ತುಡಿತ ಇರಬೇಕು” ಎಂದು ಕವಿಗೋಷ್ಠಿ ಅಧ್ಯಕ್ಷತೆಯನ್ನು ಉದ್ದೇಶಿಸಿ ಯುವ ಕವಿ ದೇವರಾಜ್ ಹುಣಸಿಕಟ್ಟಿ ಹೇಳಿದರು.
ಬೆಳಗಾವಿ ಪಟ್ಟಣದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕನ್ನಡ ಭವನ ಸಹಯೋಗದಲ್ಲಿ ಯುವ ಕವಿಗೋಷ್ಠಿಯಲ್ಲಿ ಮಾತನಾಡಿದರು.
“ಮನುಜ ಕುಲ, ಮನುಜ ಜಾತಿ ತಾನೊಂದೆ ವಲಂ’ ಎಂದ ಪಂಪನ ಗ್ರಹಿಕೆ ಈ ನೆಲದ ಸಾಹಿತ್ಯದ ಗ್ರಹಿಕೆ ಅಷ್ಟೇ ಅಲ್ಲ, ಜೀವನ ಗ್ರಹಿಕೆ. ಅದಕ್ಕೆ ಈಡಾದಾಗಲೆಲ್ಲ ಕವಿ ಮಾತನಾಡಬೇಕಾಗುತ್ತದೆ. ಅನಾದಿ ಕಾಲದಿಂದಲ್ಲೂ ಆಯಾ ಕಾಲ ಘಟ್ಟದಲ್ಲಿ ವಚನಕಾರರು, ಸಾಹಿತಿಗಳು, ಲೇಖಕರು ಪ್ರಗತಿಪರ ಚಿಂತಕರು ಮಾಡಿಕೊಂಡು ಬಂದಿರುವರು. ಮುಂದುವರೆದು ಆ ಮಹತ್ತರ ಜವಾಬ್ದಾರಿಯನ್ನು ಈ ಕಲಾಘಟ್ಟದ, ನನ್ನ ಕಾಲದ ಕವಿಗಳು ಕೂಡಾ ಅತ್ಯಂತ ಎಚ್ಚರದಿಂದ ಮಾಡುತ್ತಿರುವುದಕ್ಕೆ ಈ ಕವಿಗೋಷ್ಠಿ ಸಾಕ್ಷಿಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸುರತ್ಕಲ್ ಎನ್‌ಐಟಿಕೆಯಲ್ಲಿ ಕೃಷ್ಣಾ ನದಿ ಜಲಾನಯನ ನಿರ್ವಹಣಾ ಅಧ್ಯಯನಗಳ ಕುರಿತು ಕಾರ್ಯಾಗಾರ
“ಇಲ್ಲಿಯ ಕವಿಗಳ ಕವಿತೆಗಳಲ್ಲಿ ವ್ಯವಸ್ಥೆಯಲ್ಲಿರುವ ಹುಳುಕಿಗೆ ಕನ್ನಡಿ ಹಿಡಿಯುವಂತಿವೆ. ಭಾಷೆ ಬಳಕೆಯ ಸೊಗಡು ಮತ್ತು ಕಟ್ಟುವಿಕೆಯ ಭಿನ್ನತೆಯಿಂದ ಎರಡು ಕವಿತೆಗಳು ನನ್ನ ಗಮನ ಸೆಳೆದಿವೆ. ಸುಮಿತ್ ಮೇತ್ರಿ ಅವರ ‘ಹಲಸಂಗಿ’ ಮತ್ತು ಶಿವರಾಜ ಕಾಂಬಳೆ ಅವರ ಇನ್ನೂ ಆರದ ಬೆವರ ನೆತ್ತವು’ ಕವಿತೆಗಳು ಭಾಷೆಯ ಬಳಕೆಯಲ್ಲಿ ಅತ್ಯಂತ ಸಮರ್ಥ ಹಾಗೂ ಭಿನ್ನವಾಗಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕವಿಗೋಷ್ಠಿಯಲ್ಲಿ ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ, ಧಾರವಾಡದ ಯುವ ಕವಿಗಳು ಕವಿತೆಗಳನ್ನು ವಾಚಿಸಿದರು.