- ರಾಹುಲ್ ಗಾಂಧಿ ಹೋರಾಟಕ್ಕೆ ಮತ್ತಷ್ಟು ಬಲ: ಸಿದ್ದರಾಮಯ್ಯ
- ಮಹಾತ್ಮ ಗಾಂಧಿ ತತ್ವ ಸಿದ್ದಾಂತಕ್ಕೆ ಸಿಕ್ಕ ಜಯ: ಬಿಕೆ ಹರಿಪ್ರಸಾದ್
ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿ ಅಹ್ಮದಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಈ ಆದೇಶದಿಂದ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ದುರ್ಬಲರ ಪರವಾದ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. “ಸತ್ಯ ಮೇವ ಜಯತೇ”” ಎಂದು ಹೇಳಿದ್ದಾರೆ.
ಹಾಗೆಯೇ ವಿಧಾನ ಪರಿಷತ್ ಹಿರಿಯ ಸದಸ್ಯ ಬಿಕೆ ಹರಿಪ್ರಸಾದ್ ಕೂಡ ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಮಾತನಾಡಿ, “ನಮ್ಮ ನಾಯಕ ರಾಹುಲ್ ಗಾಂಧಿ ಕುರಿತ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮಹಾತ್ಮ ಗಾಂಧಿಯವರ ತತ್ವ ಸಿದ್ದಾಂತಕ್ಕೆ ಸಿಕ್ಕ ಜಯ” ಎಂದು ಹೇಳಿದ್ದಾರೆ.
“ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದ ಆಧಾರದ ಮೇಲೆ ಗುಜರಾತ್ ಕೋರ್ಟ್ ತೀರ್ಪು ಕೊಟ್ಟಿತ್ತು. ರಾಹುಲ್ ಗಾಂಧಿ ಅವರನ್ನು ತರಾತುರಿಯಲ್ಲಿ ಸಂಸದ ಸ್ಥಾನದಿಂದಲೂ ಕೈ ಬಿಡಲಾಗಿತ್ತು. ಎರಡು ವರ್ಷ ಜೈಲು ಶಿಕ್ಷೆ ನೀಡಿರುವುದರ ಹಿಂದೆ ದ್ವೇಷ ರಾಜಕಾರಣವಿತ್ತು. ಇದರ ವಿರುದ್ಧ ಇಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ತೀರ್ಪು ನೀಡಿರುವುದು ಸತ್ಯಕ್ಕೆ ಸಂದ ಜಯ” ಎಂದಿದ್ದಾರೆ.
ಅಸತ್ಯದ ಸಿದ್ದಾಂತಕ್ಕೆ ಸೋಲು
“ಬಿಜೆಪಿಯವರ ಸುಳ್ಳು ಮತ್ತು ಅಸತ್ಯದ ಸಿದ್ದಾಂತಕ್ಕೆ ಸೋಲಾಗಿದೆ. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಸಿದ್ದಾಂತ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅರ್ಥ, ಸುಳ್ಳು ತುಂಬಾ ದಿನ ಇರಲ್ಲ ಎನ್ನುವುದಕ್ಕೆ ಸಾಕ್ಷಿ. ಬಿಲ್ಕಿಸ್ ಭಾನು ಪ್ರಕರಣ ಗುಜರಾತ್ ಮಾದರಿಯದ್ದು, ರಾಹುಲ್ ಗಾಂಧಿ ಅವರನ್ನ ಅನರ್ಹ ಮಾಡಿದ್ದು ಕೂಡ ಗುಜರಾತ್ ಮಾದರಿ ರಾಜಕೀಯದ ಉದಾಹರಣೆಗಳು” ಎಂದು ಹೇಳಿದ್ದಾರೆ.
ಲೋಕಸಭೆ ಸ್ಪೀಕರ್ ಕ್ರಮ ಏನು?
“ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವಕ್ಕಾಗಿ ಆಗ್ರಹ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಒಳ್ಳೆಯ ಕ್ರಮ ವಹಿಸಲಿದ್ದಾರೆ ಅಂತ ಭಾವಿಸಿದ್ದೇವೆ. ಲೋಕಸಭೆ ಸ್ಪೀಕರ್ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆ ನೋಡಬೇಕಿದೆ” ಎಂದಿದ್ದಾರೆ.