ಶೌಚಾಲಯ ನಿರ್ಮಾಣದ ಹೆಸರಿನಲ್ಲಿ ಸರ್ಕಾರದ ಅನುದಾನವನ್ನು ದುರುಪಯೋಗ ಮಾಡಿಕೊಂಡು, ಹಗರಣ ನಡೆಸಿರುವ ಪ್ರಕರಣವೊಂದು ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ ಜಿಲ್ಲೆಯ ಅಂಕಲೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 1,906 ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದಾಗಿ ದಾಖಲೆ ಸೃಷ್ಟಿಸಿ, ಸುಮಾರು 2 ಕೋಟಿ ರೂ. ಹಣ ಲೂಟಿ ಮಾಡಲಾಗಿದೆ.
ಆರ್‌ಟಿಐ ಕಾರ್ಯಕರ್ತ, ನಿವೃತ್ತ ಶಿಕ್ಷಕ ಪ್ರವೀಣ್ ಮೋದಿ ಅವರು ಈ ಹಗರಣವನ್ನು ಬಯಲಿಗೆಳೆದಿದ್ದಾರೆ. ಪ್ರತಿ ಮನೆಗೂ ಶೌಚಾಲಯ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರವು ನೀಡಿದ್ದ ಅನುದಾನದಲ್ಲಿ ಪುರಸಭೆಯವರು ಅಕ್ರಮ ಎಸಗಿದ್ದಾರೆ. ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಹಣ ಲಪಟಾಯಿಸಿದ್ದಾರೆ ಎಂದು ಪ್ರವೀಣ್ ಮೋದಿ ಆರೋಪಿಸಿದ್ದಾರೆ.
“ಐದು ಖಾಸಗಿ ಟ್ರಸ್ಟ್‌ಗಳಾದ ಆನಂದ್ ಕಡಿ ಗ್ರಾಮೋಧ್ಯೋಗ್ ಟ್ರಸ್ಟ್, ನವಚೇತನ ವಿಕಾಸ್ ಟ್ರಸ್ಟ್, ಕಾಮದಾರ್ ಕಲ್ಯಾಣ್ ಮಂಡಲ್, ಮಹಾತ್ಮಾ ಗಾಂಧಿ ಗ್ರಾಮನಿರ್ಮಾಣ ಟ್ರಸ್ಟ್ ಹಾಗೂ ವಸುಂಧರಾ ಸಾರ್ವಜನಿಕ ಟ್ರಸ್ಟ್ ಮೂಲಕ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 1,906 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಅಂಕಲೇಶ್ವರ ಪುರಸಭೆಯ ದಾಖಲೆಗಳಲ್ಲಿ ವಿವರಿಸಲಾಗಿದೆ. ಆದರೆ, ದಾಖಲೆಗಳಲ್ಲಿ ಉಲ್ಲೇಖಿಸಿರುವ ಹಲವು ಸ್ಥಳಗಳಲ್ಲಿ ಯಾವುದೇ ಶೌಚಾಲಯವನ್ನು ನಿರ್ಮಿಸಲಾಗಿಲ್ಲ. ವಿವಾಹ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಸಮಯದಲ್ಲಿ ನೀಡಲಾಗಿದ್ದ ಆಧಾರ್ ಕಾರ್ಡ್‌ನಂತಹ ಗುರುತಿನ ಚೀಟಿಗಳನ್ನು ಪುರಸಭೆಯಲ್ಲಿ ಅಕ್ರಮಕ್ಕೆ ಬಳಸಿಕೊಳ್ಳಲಾಗಿದೆ” ಎಂದು ಪ್ರವೀಣ್ ಆಪಾದಿಸಿದ್ದಾರೆ.
ಗಮನಾರ್ಹ ವಿಚಾರವೆಂದರೆ, “ಐಷಾರಾಮಿ ಬಂಗಲೆಗಳಲ್ಲಿ ವಾಸಿಸುತ್ತಿರುವವರಿಗೂ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ದಾಖಲೆಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಉಲ್ಲೇಖಿತ ಐಷಾರಾಮಿ ಕುಟುಂಬಗಳು ಯಾವುದೇ ರೀತಿಯ ಸಹಾಯಧನಕ್ಕಾಗಿ ಅರ್ಜಿಗಳನ್ನೇ ಸಲ್ಲಿಸಿಲ್ಲ” ಎಂದು ಅವರು ವಿವರಸಿದ್ದಾರೆ.
ಈ ಲೇಖನ ಓದಿದ್ದೀರಾ?: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ದಿಢೀರ್ ರಾಜೀನಾಮೆ: ಅನುಮಾನ – ವಿವಾದಗಳದೇ ಮೇಲುಗೈ!
“2012ರಲ್ಲಿ ವಿವಾಹವಾಗಿದ್ದ ನೀರವ್ ಮತ್ತು ಕ್ರಿಮಾ ಹಜಾರಿವಾಲಾ ಅವರು ವಿವಾಹ ಪ್ರಮಾಣಪತ್ರಕ್ಕಾಗಿ ಆಧಾರ್ ಕಾರ್ಡ್ ಸಲ್ಲಿಸಿದ್ದರು. ಅದನ್ನು ದುರುಪಯೋಗ ಮಾಡಿಕೊಂಡು, ಶೌಚಾಲಯಕ್ಕೆ ಸಹಾಯಧನ ನೀಡಿರುವುದಾಗಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆದರೆ, ನೀರವ್ ಕುಟುಂಬವು ತಾವು ಯಾವುದೇ ಸಹಾಯಧನ ಪಡೆದಿಲ್ಲ. ಅದಕ್ಕಾಗಿ ಅರ್ಜಿಯನ್ನೂ ಸಲ್ಲಿಸಿಲ್ಲ. ಇದು ನಮ್ಮ ಗೌರವಕ್ಕೆ ಧಕ್ಕೆ ತಂದಿದೆ. ಪುರಸಭೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೀರವ್ ಒತ್ತಾಯಿಸಿದ್ದಾರೆ. ಇಂತಹ ಹಲವಾರು ವಿಚಾರಗಳಿಗಾಗಿ ಅರ್ಜಿ ಸಲ್ಲಿಸಿದ್ದವರ ಆಧಾರ್ ಕಾರ್ಡ್‌ಗಳ ದುರುಪಯೋಗವಾಗಿದ್ದು, ಅಕ್ರಮಕ್ಕೆ ಬಳಸಿಕೊಳ್ಳಲಾಗಿದೆ” ಎಂದು ಪ್ರವೀಣ್ ತಿಳಿಸಿದ್ದಾರೆ.
ಶೌಚಾಲಯದ ಸಹಾಯಧನ ಹಗರಣದ ಮೇಲೆ ತಕ್ಷಣವೇ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಬಯಲಿಗೆಳೆಯಬೇಕು ಎಂದು ಆರ್‌ಟಿಐ ಕಾರ್ಯಕರ್ತ ಪ್ರವೀಣ್ ಮೋದಿ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಡಿಎಸ್‌ಪಿಗೆ ಲಿಖಿತ ದೂರು ನೀಡಿದ್ದಾರೆ.