ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದು, ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜಮಗಿ ಶಾಲೆಯ ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಜಮಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ನಾಲ್ವರು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ನಾಲ್ಕು ವಿಷಯಗಳನ್ನು ಬೋಧಿಸಲು ಶಿಕ್ಷಕಿಲ್ಲದಂತಾಗಿದೆ. ಬೇರೆ ಶಿಕ್ಷಕನ್ನೂ ಶಾಲೆಗೆ ನಿಯೋಜಿಸಿಲ್ಲ. ಹೀಗಾಗಿ, ತರಗತಿಗಳು ನಡೆಯದಂತಾಗಿದೆ. ಶಿಕ್ಷಣದಲ್ಲಿ ಹಿಂದುಳಿಯುವ ಸಾಧ್ಯತೆ ಇದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರೌಢಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದೇವೆ. ಆದರೆ, ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಮತ್ತು ಗಣಿತ ಶಿಕ್ಷಕರು ಮಾತ್ರವೇ ಇದ್ದಾರೆ. ಉಳಿದ ಯಾವುದೇ ವಿಷಯ ಶಿಕ್ಷಕರಿಲ್ಲ. ಕಳೆದ ಹದಿನೈದು ದಿನಗಳಿಂದ ಬೇರೆ ಶಿಕ್ಷಕರು ಬರ್ತಾರೆ ಅಂತ ಹೇಳ್ತಾನೇ ಇದ್ದಾರೆ. ಆದರೆ, ಯಾವುದೇ ಶಿಕ್ಷಕರು ಬಂದಿಲ್ಲ ಎಂದು ಕಿಡಿಕಾರಿದ್ದಾರೆ.
“ಶಾಲೆಗೆ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಉಳಿದ ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತದೆ” ಎಂದು ಔರಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್ ನಗನೂರ ಈದಿನ.ಕಾಮ್‌ಗೆ ತಿಳಿಸಿದ್ದಾರೆ.