ಸಿರವಾರ ತಾಲ್ಲೂಕಿನ ಹಿರೇದಿನ್ನಿ ಗ್ರಾಮದ ರೈತ ಕರಿಯಪ್ಪ ಅವರ ಕುಟುಂಬಕ್ಕೆ ಭೂಸ್ವಾಧೀನ ಪರಿಹಾರವಾಗಿ ನಿಗದಿಯಾದ ರೂ.16.30 ಲಕ್ಷ ಹಣ ವಿತರಿಸಲು ನೀರಾವರಿ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡಿದ ಹಿನ್ನೆಲೆ, ನ್ಯಾಯಾಲಯದ ಆದೇಶದಂತೆ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿ (ವಿಭಾಗ-4), ಸಿರವಾರ ಪಟ್ಟಣದಲ್ಲಿ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.
ಮಾನ್ವಿಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಆದೇಶದನ್ವಯ ನ್ಯಾಯಮೂರ್ತಿ ನೇತೃತ್ವದಲ್ಲಿ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ್ದು, ಕೆಲಸಕ್ಕಾಗಿ ಬಳಸುತ್ತಿದ್ದ ಕಂಪ್ಯೂಟರ್‌ಗಳು, ಮೇಜು, ಕುರ್ಚಿ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದರು.

ಘಟನೆ ವಿವರ; ಸಿರವಾರ ತಾಲ್ಲೂಕಿನ ಹಿರೇಬಾದರದಿನ್ನಿ ಗ್ರಾಮದ ಸರ್ವೇ ನಂ.113 ರಲ್ಲಿನ 15 ಗುಂಟೆ ಜಮೀನನ್ನು, 1976 ರಲ್ಲಿ ಬಾಗಲವಾಡ ಗ್ರಾಮದಿಂದ ಗೊಲ್ಲದಿನ್ನಿ ಗ್ರಾಮವರೆಗೆ ಆಯಾಕಟ್ಟು ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಲಾಗಿತ್ತು. ಭೂಮಿ ಕಳೆದುಕೊಂಡ ಹಲವಾರು ರೈತರಿಗೆ ಪರಿಹಾರ ಹಣವನ್ನು ಸರಕಾರ ನೀಡಿದರೂ, ತಾಂತ್ರಿಕ ದೋಷದಿಂದಾಗಿ ಹದಿನೈದು ಗುಂಟೆ ಭೂಮಿ ಕಳೆದುಕೊಂಡ ರೈತ ಕರಿಯಪ್ಪ ಅವರ ಕುಟುಂಬವು ಇದುವರೆಗೂ ಪರಿಹಾರದಿಂದ ವಂಚಿತರಾಗಿದ್ದಾರೆ.
ನಿನ್ನೆ ನ್ಯಾಯಾಲಯದ ಆದೇಶದಂತೆ ಸಿರವಾರ ಪಟ್ಟಣದ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರ ಕಚೇರಿ (ವಿಭಾಗ-4)ಯಲ್ಲಿ ಪೀಠೋಪಕರಣಗಳನ್ನು ಜಪ್ತಿ ಮಾಡಲಾಯಿತು. ಕಂಪ್ಯೂಟರ್‌ಗಳು, ಸೇರಿದಂತೆ ಕಚೇರಿಯ ವಿವಿಧ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮರ ಬಿದ್ದು ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ ಗಾಯ
ನ್ಯಾಯಾಲಯವು ಈ ಹಿಂದೆಯೇ 3-4 ಬಾರಿ ಜಪ್ತಿಗೆ ಆದೇಶ ನೀಡಿದರೂ ಇಲಾಖೆಯ ಅಧಿಕಾರಿಗಳು ರೈತನಿಗೆ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಒಟ್ಟು ರೂ.16,30,323 ಪರಿಹಾರ ಮೊತ್ತವನ್ನು ರೈತ ಕರಿಯಪ್ಪ ಅವರ ಕುಟುಂಬಕ್ಕೆ ನೀಡಬೇಕೆಂದು ಆದೇಶಿಸಲಾಗಿದೆ. ಪರಿಹಾರ ನೀಡದೇ ಕಾರಣಕ್ಕೆ ಜಪ್ತಿ ಕ್ರಮ ಕೈಗೊಳ್ಳಲಾಯಿತು,” ಎಂದು ರೈತ ಪರ ವಕೀಲ ಶಿವರಾಜ ಪಾಟೀಲ ತಿಳಿಸಿದರು.

