ಮುಡಾ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥ ಆದ ಹಿನ್ನೆಲೆ, ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೈಸೂರಿನ ಅರಮನೆ ರಸ್ತೆ ಬಳಿ ಇರುವ ಶ್ರೀ ಭಗವಾನ್ ಮಾರುತಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆದಿದ್ದು, ಈ ವೇಳೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
“ಕರ್ನಾಟಕ ರಾಜ್ಯದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಆಡಳಿತ ನಡೆಸಿ ಇಡೀ ದೇಶದಲ್ಲಿ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಹೆಸರು ಗಳಿಸಿರುವ ಸಿದ್ದರಾಮಯ್ಯನವರಿಗೆ ಹಾಗೂ ಅವರ ಕುಟುಂಬಕ್ಕೆ ಕಪ್ಪು ಚುಕ್ಕೆ ತರಲು ಯತ್ನಿಸಿದ ಬಿಜೆಪಿ, ಜೆಡಿಎಸ್ ನಾಯಕರ ಕುತಂತ್ರ ಹಾಗೂ ಅಪಪ್ರಚಾರಕ್ಕೆ ಸರ್ವೋಚ್ಚ ನ್ಯಾಯಾಲಯ ಸೂಕ್ತ ತೀರ್ಪು ನೀಡಿದೆ. ಇದುವರೆಗೂ ಯಾವುದೇ ರಾಜಕೀಯಕ್ಕೆ ಹಾಗೂ ಸಭೆ ಸಮಾರಂಭಗಳಲ್ಲಿ ಬಹಿರಂಗವಾಗಿ ಭಾಗವಹಿಸದ ಗೃಹಿಣಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿಗೆ ಕಳಂಕ ತರಿಸಲು ಮಾಡಿರುವ ಪ್ರಯತ್ನವನ್ನು ಸುಪ್ರೀ ಹುಸಿಗೊಳಿಸಿದೆ. ಈ ಹಿನ್ನೆಲೆ ಸಿದ್ದರಾಮಯ್ಯನವರಿಗೆ ಹೆಚ್ಚಿನ ಶಕ್ತಿ ಕರುಣಿಸಲಿ ಹಾಗೂ ಅವರ ಧರ್ಮಪತ್ನಿಯವರಿಗೆ ಹಾಗೂ ಕುಟುಂಬದವರಿಗೆ ನೆಮ್ಮದಿ ಕರುಣಿಸಲಿ ಎಂದು ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಲಾಗಿದೆ” ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.

“ಸಿದ್ದರಾಮಯ್ಯ ಅವರ ಅಧಿಕಾರದಲ್ಲಿ ಇಡೀ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಪಕ್ಷ ’ನುಡಿದಂತೆ ನಡೆಯುತ್ತಿದೆ’. ಈಗಾಗಲೇ ಇಡಿ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರನ್ನು ಷಡ್ಯಂತರದಲ್ಲಿ ಸಿಲುಕಿಸಲು ಯತ್ನಿಸಿ ವಿಫಲವಾಗಿರುವ ಕೇಂದ್ರ ಸರ್ಕಾರ ಈಗ ಮತ್ತೆ ಅದೇ ಇಡಿ ಮೂಲಕ ಇಡೀ ದೇಶದಲ್ಲಿ ವಿರೋಧ ಪಕ್ಷವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಅವರ ಎಲ್ಲಾ ಪ್ರಯತ್ನಗಳು ಹುಸಿಯಾಗುತ್ತಿವೆ. ಈ ಹಿನ್ನೆಲೆ ನೈತಿಕ ಹೊಣೆ ಹೊತ್ತು ಇಡಿ ಮೂಲಕ ರಾಜಕೀಯ ಲಾಭಗಳಿಸಲು ಯತ್ನಿಸಿದ ಬಿಜೆಪಿ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮೈಸೂರು | ಅನ್ನಭಾಗ್ಯಕ್ಕೆ 12 ವರ್ಷದ ಸಂಭ್ರಮ; ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಅನ್ಯಾಯ

ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಎ ಆನಂದ್ ಪ್ರಕಾಶ್, ಚಂದ್ರಶೇಖರ್, ಆನಂದ್ ಕುಮಾರ್, ಕುಶಲ್ ಅರುವೆಗೌಡ, ನವೀನ್ ಪುಟ್ಟರಾಜು, ನವೀನ್ ಸುಂಕದಕಟ್ಟೆ, ಚಿನ್ನಿ ಪ್ರಕಾಶ್, ಹೋಬಳೇಶ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.