ಚಲನಚಿತ್ರ ನಟ, ಖ್ಯಾತ ನಿರ್ದೇಶಕ ಹಾಗೂ ಹಿರಿಯ ರಂಗ ಕಲಾವಿದ ಮಹೇಶ ವಿ.ಪಾಟೀಲ್ ಅವರಿಗೆ ಪ್ರಸಕ್ತ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಒಲಿದು ಬಂದಿದೆ.
ಜಿಲ್ಲೆಯಲ್ಲಿ ಪ್ರಖ್ಯಾತಿ ಪಡೆದಿದ್ದ ‘ದಮನ್’ ಹಿಂದಿ ದಿನಪತ್ರಿಕೆಯ ದಿ.ವಿಶ್ವನಾಥ ಪಾಟೀಲ್ ಅವರ ಪುತ್ರ ಮಹೇಶ ಪಾಟೀಲ್ ಅವರು 2025-26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಮೂಲತಃ ಕಮಲನಗರ ತಾಲೂಕಿನ ಹಕ್ಕಾಳ ಗ್ರಾಮದವರಾದ ಮಹೇಶ ಪಾಟೀಲ್ ಅವರು ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ. ಬಳಿಕ ರಂಗಭೂಮಿಯ ಕಡೆಗೆ ಮುಖ ಮಾಡಿ 1988–91ರಲ್ಲಿ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್‌ಎಸ್‌ಡಿ) ಡಿಪ್ಲೊಮಾ ಇನ್ ಡ್ರಮ್ಯಾಟಿಕ್ ಆರ್ಟ್ಸ್, ಸ್ಪೆಶಲೈಜೇಶನ್ ಇನ್ ಡಿಸೈನ್ ಅಂಡ್ ಡೈರೆಕ್ಷನ್, ವಿಡಿಯೋ ಫಿಲಂ, ಫಿಲಂ ಅಪ್ರಿಸಿಯೇಶನ್ ಕೋರ್ಸ್ ಸೇರಿದಂತೆ ವಿವಿಧ ಕೋರ್ಸ್ ಮುಗಿಸಿದರು.
1979ರಲ್ಲಿ ರಾಜ್ಯಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ, 1980ರಲ್ಲಿ ಅತ್ಯುತ್ತಮ ಏಕಪಾತ್ರಾಭಿನಯಕ್ಕೆ ಪ್ರಶಸ್ತಿ, 1982ರಲ್ಲಿ ಅತ್ಯುತ್ತಮ ಯುವ ನಿರ್ದೇಶಕ, 1998ರಲ್ಲಿ ಅತ್ಯುತ್ತಮ ನಿರ್ಮಾಣ, 2000ನೇ ಇಸ್ವಿಯಲ್ಲಿ ಅತ್ಯುತ್ತಮ ಸೃಜನಶೀಲ ಬರವಣಿಗೆಗೆ, 2001ರಲ್ಲಿ ಕಿರು ಸಾಕ್ಷ್ಯಚಿತ್ರಕ್ಕಾಗಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಕಲಬುರಗಿ ರಂಗಾಯಣದ ನಿರ್ದೇಶಕರಾಗಿಯೂ ಮಹೇಶ ಪಾಟೀಲ್ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಮನೆ ಮಹಡಿ ಮೇಲೆ ‘ಡ್ರ್ಯಾಗನ್ ಫ್ರೂಟ್’ ಬೆಳೆದ ಉಪನ್ಯಾಸಕ!
ಹಿರಿಯ ರಂಗ ಕಲಾವಿದ, ನಿರ್ದೇಶಕ ಮಹೇಶ ಪಾಟೀಲ್ ಅವರ ಸೇವೆಯನ್ನು ಗುರುತಿಸಿ ನಾಟಕ ಅಕಾಡೆಮಿಯು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಜಿಲ್ಲೆಯ ಕಲಾವಿದರನ್ನು ಮತ್ತೊಮ್ಮೆ ಗುರುತಿಸಿದಂತಾಗಿದೆ ಎಂದು ಜಿಲ್ಲೆಯ ಸಾಹಿತಿಗಳು, ಚಿಂತಕರು ಹಾಗೂ ಹಿರಿಯ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.