ಅತ್ಯಾಚಾರಕ್ಕೆ ಮರಣದಂಡನೆ; ಪಶ್ಚಿಮ ಬಂಗಾಳದ ಮಸೂದೆಗೆ ಕೇಂದ್ರದ ತಕರಾರೇನು?

Date:

Advertisements
ಬಿಎನ್‌ಎಸ್‌ನ ಶಿಕ್ಷೆಗಳ ಮಾದರಿಯಲ್ಲೂ ಬದಲಾವಣೆಯನ್ನು ತರುವಂತೆ ಪ್ರಸ್ತಾವಿತ ಮಸೂದೆ ಕೇಳುತ್ತಿದೆ ಎಂಬುದು ಗೃಹ ಸಚಿವಾಲಯದ ತಕರಾರು

ಅತ್ಯಾಚಾರಕ್ಕೆ ಮರಣದಂಡನೆಯನ್ನು ಪ್ರಸ್ತಾಪಿಸಿದ್ದ ಪಶ್ಚಿಮ ಬಂಗಾಳದ ಹೊಸ ಮಸೂದೆಗೆ ಕೇಂದ್ರ ಸರ್ಕಾರ ತಗಾದೆ ತೆಗೆದಿದೆ ಮತ್ತು ತಿದ್ದುಪಡಿಗಳನ್ನು ಮಾಡುವಂತೆ ರಾಜ್ಯ ಸರ್ಕಾರಕ್ಕೂ ಸೂಚಿಸಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯೆಯ ಮೇಲಾದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ದೇಶಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಟೀಕಾಪ್ರಹಾರಗಳಿಂದ ಬಚಾವಾಗಲು ಯತ್ನಿಸಿತು. ಅದರ ಮುಂದುವರಿದ ಭಾಗವಾಗಿ ‘ಅಪರಾಜಿತಾ ಮಹಿಳೆ ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಅಪರಾಧ ಕಾನೂನುಗಳ ತಿದ್ದುಪಡಿ) ಮಸೂದೆ, 2024’ ರೂಪಿಸಿ ಸೆಪ್ಟೆಂಬರ್‌ನಲ್ಲಿ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕರಿಸಿತು.

ಮೂರು ದಿನಗಳ ನಂತರ, ಅಂದರೆ ಕಳೆದ ವರ್ಷದ ಸೆಪ್ಟೆಂಬರ್ 6ರಂದು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಈ ಮಸೂದೆಯನ್ನು ಪರಿಶೀಲಿಸುವುದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದರು. ಆದರೆ ಕೇಂದ್ರ ಸರ್ಕಾರವು ಪರಿಶೀಲನೆ ಮಾಡಿದ ಬಳಿಕ ಮಸೂದೆಯನ್ನು ವಾಪಸ್ ಕಳುಹಿಸಿದೆ ಎಂದು ಟಿಎಂಸಿ ಟೀಕಿಸಿದೆ.

Advertisements

“ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಸೂದೆಯ ಹಿಂದಿನ ಪ್ರೇರಕ ಶಕ್ತಿ. ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಭಾಗಿಯಾಗಿರುವ ಜನರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಅವರು ಬಯಸುತ್ತಿದ್ದರೂ, ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ. ಈ ಮಸೂದೆಯನ್ನು ಹಿಂತಿರುಗಿಸುವ ಮೂಲಕ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ” ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದ್ದಾರೆ.

ಇದನ್ನೂ ಓದಿರಿ: 2006 ಮುಂಬೈ ರೈಲು ಸ್ಫೋಟ | 12 ಮಂದಿ ಖುಲಾಸೆ: ಮುಸ್ಲಿಮರಾದರೆ ಭಯೋತ್ಪಾದಕ ಹಣೆಪಟ್ಟಿಯೇ?

ಸಿಎಂ ಮಮತಾ ಬ್ಯಾನರ್ಜಿಯವರ ಆದೇಶದ ಮೇರೆಗೆ ರಚಿಸಲಾದ ಈ ಮಸೂದೆಯು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 64, 65, 66, 70 ಮತ್ತು 71 ರಲ್ಲಿ ಕೆಲವು ಬದಲಾವಣೆ ಆಗಬೇಕೆಂದು ಕೋರುತ್ತದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಪೋಕ್ಸೋ ಕಾಯ್ದೆ 2012ರ ವಿವಿಧ ವಿಭಾಗಗಳಿಗೆ ತಿದ್ದುಪಡಿಗಳನ್ನು ಈ ಮಸೂದೆಯು ಪ್ರಸ್ತಾಪಿಸುತ್ತದೆ.

ಬಿಎನ್‌ಎಸ್‌ನ ಸೆಕ್ಷನ್ 64ರ ಪ್ರಕಾರ ಅತ್ಯಾಚಾರಕ್ಕೆ ಶಿಕ್ಷೆ ‘10 ವರ್ಷಗಳಿಗಿಂತ ಕಡಿಮೆಯಿರಬಾರದು’, ಸೆಕ್ಷನ್ 65ರ ಪ್ರಕಾರ 16 ವರ್ಷದೊಳಗಿನವರ ಮೇಲೆ ಅತ್ಯಾಚಾರ ಎಸಗಿದರೆ ‘20 ವರ್ಷಗಳಿಗಿಂತ ಕಡಿಮೆ ಇಲ್ಲದಂತಹ ಶಿಕ್ಷೆ’ ಇರುತ್ತದೆ. ಮಹಿಳೆಯನ್ನು ಹತ್ಯೆ ಮಾಡಿದರೆ ಅಥವಾ ಮಾರಣಾಂತಿಕ ಗಾಯಕ್ಕೆ ಒಳಪಡಿಸಿದರೆ ಮರಣದಂಡನೆ ಅಥವಾ ಕನಿಷ್ಠ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಬಹುದೆಂದು ಸೆಕ್ಷನ್ 66 ಹೇಳುತ್ತದೆ; ಸಾಮೂಹಿಕ ಅತ್ಯಾಚಾರಕ್ಕೆ ಕನಿಷ್ಠ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಬೇಕೆಂದು ಸೆಕ್ಷನ್ 70 ತಿಳಿಸುತ್ತದೆ. ಸೆಕ್ಷನ್‌ 64 ಅಥವಾ 65 ಅಥವಾ 66 ಅಥವಾ 67ರ ಅಡಿಯಲ್ಲಿ ಈ ಹಿಂದೆ ಶಿಕ್ಷೆಗೊಳಗಾದರೂ ಅಪರಾಧ ಪುನರಾವರ್ತನೆ ಮಾಡಿದ್ದಲ್ಲಿ ಮರಣದಂಡನೆ ಅಥವಾ ಉಳಿದ ಜೀವತಾವಧಿವರೆಗೂ ಜೈಲು ಶಿಕ್ಷೆ ವಿಧಿಸಲಾಗುವುದೆಂದು ಸೆಕ್ಷನ್ 71 ಹೇಳುತ್ತದೆ.

ಬಿಎನ್‌ಎಸ್‌ನ ಈ ಶಿಕ್ಷೆಗಳ ಮಾದರಿಯಲ್ಲೂ ಬದಲಾವಣೆಯನ್ನು ತರುವಂತೆ ಪ್ರಸ್ತಾವಿತ ಮಸೂದೆ ಕೇಳುತ್ತಿದೆ ಎಂಬುದು ಕೇಂದ್ರ ಗೃಹ ಸಚಿವಾಲಯದ ತಕರಾರು. ಕೋಲ್ಕತ್ತಾದ ರಾಜಭವನದ ಅಧಿಕಾರಿಯೊಬ್ಬರ ಪ್ರತಿಕ್ರಿಯೆಯನ್ನು ‘ದಿ ಹಿಂದೂ’ ವರದಿ ಮಾಡಿದ್ದು ಕೇಂದ್ರ ಸರ್ಕಾರದ ತಕರಾರುಗಳನ್ನು ಉಲ್ಲೇಖಿಸಿದ್ದಾರೆ. “ಬಿಎನ್‌ಎಸ್‌ನ ಸೆಕ್ಷನ್ 64ರ ಅಡಿಯಲ್ಲಿನ ಅತ್ಯಾಚಾರದ ಶಿಕ್ಷೆಯನ್ನು ಹೆಚ್ಚಿಸುವಂತೆ ಪ್ರಸ್ತಾವಿತ ಮಸೂದೆ ತಿಳಿಸುತ್ತದೆ. ಈ ಸೆಕ್ಷನ್ ಅಡಿಯಲ್ಲಿ ವಿಧಿಸಲಾಗುವ ಕನಿಷ್ಠ 10 ವರ್ಷಗಳ ಶಿಕ್ಷೆಯನ್ನು ಜೀವನಪೂರ್ತಿ ಜೈಲು ಶಿಕ್ಷೆಗೆ ಅಥವಾ ಮರಣದಂಡನೆವರೆಗೆ ಏರಿಸಬೇಕಾಗುತ್ತದೆ. ಈ ಬದಲಾವಣೆಯು ಅತಿಯಾಗಿದ್ದು, ಕಠಿಣ ಮತ್ತು ಅಸಮಾನವಾಗಿದೆ ಎಂಬುದು ಗೃಹಸಚಿವಾಲಯದ ಆಕ್ಷೇಪ” ಎಂದಿದ್ದಾರೆ ಅಧಿಕಾರಿಗಳು.

ಮುಂದುವರಿದು, “ಸಂತ್ರಸ್ತೆ ಸಾವನ್ನಪ್ಪಿದ ಅಥವಾ ನಿಷ್ಕ್ರಿಯ ಸ್ಥಿತಿಗೆ ತಲುಪಿದಂತಹ ಪ್ರಕರಣಗಳಲ್ಲಿ ಬಿಎನ್‌ಎಸ್‌ನ ಸೆಕ್ಷನ್ 66ರ ಅಡಿಯಲ್ಲಿ ಮರಣದಂಡನೆಯನ್ನು ಕಡ್ಡಾಯಗೊಳಿಸುವಂತೆ ಮಸೂದೆ ಒತ್ತಾಯಿಸುತ್ತದೆ. ಅಂತಹ ಪ್ರಕರಣಗಳಲ್ಲಿ ನ್ಯಾಯಾಂಗದ ವಿವೇಚನೆಯನ್ನು ತೆಗೆದುಹಾಕುವ ಬಗ್ಗೆ ಗೃಹ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ” ಎಂದಿದ್ದಾರೆ.

“ಮಸೂದೆಯು ಬಿಎನ್‌ಎಸ್‌ನ  ಸೆಕ್ಷನ್ 65ನ್ನು ಅಳಿಸಲು ಪ್ರಸ್ತಾಪಿಸುತ್ತದೆ. ಆ ಮೂಲಕ 16 ವರ್ಷದೊಳಗಿನ ಮತ್ತು 12 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಶಿಕ್ಷೆಗಳಲ್ಲಿ ವ್ಯತ್ಯಾಸಗಳಿರುವುದನ್ನು ತೆಗೆದುಹಾಕುತ್ತದೆ. ಅಂತಹ ವರ್ಗೀಕರಣವನ್ನು ತೆಗೆದುಹಾಕುವುದು ಶಿಕ್ಷೆ ವಿಧಿಸುವಲ್ಲಿನ ಅನುಪಾತದ ತತ್ವವನ್ನು ಉಲ್ಲಂಘಿಸುತ್ತದೆ ಎಂಬುದು ಸಚಿವಾಲಯದ ಅಭಿಪ್ರಾಯ” ಎಂದಿದ್ದಾರೆ ಅಧಿಕಾರಿಗಳು.

ಒಟ್ಟಾರೆಯಾಗಿ ರಾಜ್ಯ ಸರ್ಕಾರದ ಮರುಪರಿಶೀಲನೆಗಾಗಿ ಮಸೂದೆಯನ್ನು ಹಿಂತಿರುಗಿಸಲಾಗಿದೆ. ಭಾರತೀಯ ದಂಡ ಸಂಹಿತೆಗೆ ಬದಲಾಗಿ ಬಂದಿರುವ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 63, 64, 65ರ ನಡುವೆ ಮಸೂದೆಯು ಘರ್ಷಣೆ ನಡೆಸುತ್ತದೆ ಎಂಬುದಂತೂ ಎದ್ದು ಕಾಣುತ್ತಿದೆ.

ಇದನ್ನೂ ಓದಿರಿ: ಜಾತಿ ಗಣತಿ: ಆರ್. ಅಶೋಕ್ ಬೂಟಾಟಿಕೆಗಳಿಗೆ ಮಿತಿ ಇಲ್ಲವೇ?

ಕ್ರಿಮಿನಲ್ ಕಾನೂನುಗಳು ಸಮವರ್ತಿ ಪಟ್ಟಿಯ ಅಡಿಯಲ್ಲಿ ಬರುವುದರಿಂದ, ರಾಜ್ಯ ಮತ್ತು ಕೇಂದ್ರ ಶಾಸಕಾಂಗಗಳು ತಿದ್ದುಪಡಿಗಳನ್ನು ಮಾಡುವ ಅಧಿಕಾರವನ್ನು ಹೊಂದಿವೆ ಎಂದು ಸಂವಿಧಾನ ಹೇಳುತ್ತದೆ. ಕೇಂದ್ರ ಶಾಸನಗಳೊಂದಿಗೆ ಯಾವುದೇ ಸಂಘರ್ಷವಾಗದಂತೆ ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ಜಾರಿಗೆ ತರಬಹುದು. ಸಂಘರ್ಷ ಇದ್ದಲ್ಲಿ ಕೇಂದ್ರದ ಕಾನೂನು ಆದ್ಯತೆಯನ್ನು ಪಡೆಯುತ್ತದೆ. ಆದಾಗ್ಯೂ, ಕೇಂದ್ರ ಶಾಸನದೊಂದಿಗೆ ಸಂಘರ್ಷ ಹೊಂದಿರುವ ರಾಜ್ಯ ಕಾನೂನು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದರೆ, ಅದು ಆ ರಾಜ್ಯದೊಳಗೆ ಜಾರಿಗೆ ಬರುತ್ತದೆ ಎಂದು ಸಂವಿಧಾನ ತಿಳಿಸುತ್ತದೆ. ಹೀಗಾಗಿ ಪ್ರಸ್ತಾವಿತ ಮಸೂದೆಯು ರಾಜ್ಯ ಹಾಗೂ ಕೇಂದ್ರದ ನಡುವೆ ತಿಕ್ಕಾಟಕ್ಕೂ ಕಾರಣವಾಗುತ್ತಿದೆ.

ಕೇಂದ್ರ ರಾಜ್ಯ ಸಚಿವ ಮತ್ತು ಬಂಗಾಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಸುಕಾಂತ ಮಜುಂದಾರ್ ಪ್ರತಿಕ್ರಿಯಿಸಿ, ಟಿಎಂಸಿ ನಾಯಕ ಕುನಾಲ್ ಘೋಷ್ ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. “ಮರಣದಂಡನೆಯನ್ನು ಸೂಚಿಸುವ ಸ್ವತಂತ್ರ ಕಾನೂನುಗಳನ್ನು ಜಾರಿಗೊಳಿಸಲು ಸಂವಿಧಾನವು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವುದಿಲ್ಲ. ಒಂದು ರಾಜ್ಯದ ಕಾನೂನು ಕೇಂದ್ರದ ಕಾನೂನಿಗೆ ವ್ಯತಿರಿಕ್ತವಾಗಿದ್ದಾಗ, ಕೇಂದ್ರ ಸರ್ಕಾರದ್ದೇ ಮೇಲುಗೈ ಸಾಧಿಸುತ್ತದೆ ಎಂದು ಸಂವಿಧಾನ ಹೇಳುತ್ತದೆ. ಟಿಎಂಸಿಗಿಂತ ಭಿನ್ನವಾಗಿ, ನಾವು ಸಂವಿಧಾನವನ್ನು ಪಾಲಿಸುತ್ತೇವೆ” ಎಂದಿದ್ದಾರೆ ಮಜುಂದಾರ್.

“ಮಸೂದೆಯು ತ್ವರಿತ ತನಿಖೆ, ತ್ವರಿತ ಶಿಕ್ಷೆ ಮತ್ತು ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ” ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ವಿಧಾನಸಭೆಯಲ್ಲಿ ಹೇಳಿದ್ದರು. ಬಿಜೆಪಿ ಮಸೂದೆಯನ್ನು ಬೆಂಬಲಿಸಿತು. ಆದರೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಪ್ರತಿಕ್ರಿಯಿಸಿ, ಮಸೂದೆಯನ್ನು ರೂಪಿಸುವಾಗ ರಾಜ್ಯವು ಸಾಂವಿಧಾನಿಕ ಮಾನದಂಡಗಳನ್ನು ಅನುಸರಿಸಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಮಮತಾ ಅವರು, “ದಯವಿಟ್ಟು ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಳುಹಿಸಲು ರಾಜ್ಯಪಾಲರಿಗೆ ಸಹಿ ಹಾಕಲು ಹೇಳಿ. ಅದರ ನಂತರವೂ ಕಾನೂನನ್ನು ಹೇಗೆ ರೂಪಿಸಲಾಗುವುದಿಲ್ಲ ಎಂದು ನಾವು ನೋಡುತ್ತೇವೆ” ಎಂದಿದ್ದರು. ಈ ಮಸೂದೆ ತರುವಲ್ಲಿ ರಾಜಕೀಯ ಒತ್ತಡಗಳು ಇದ್ದದ್ದು ಸುಳ್ಳಲ್ಲ. ರಾಜ್ಯದಲ್ಲಿ ಹೆಚ್ಚು ಮಕ್ಕಳಿಗೆ ರಕ್ಷಣೆ ಇಲ್ಲ ಎಂದು ಪ್ರತಿಪಕ್ಷವು ತೀವ್ರವಾಗಿ ದಾಳಿ ನಡೆಸಿದಾಗ ಟಿಎಂಸಿ ಸರ್ಕಾರ ಟೀಕಾಕಾರರ ಬಾಯಿ ಮುಚ್ಚಿಸಲು ಗರಿಷ್ಠ ಶಿಕ್ಷೆಯ ಕಾನೂನು ರೂಪಿಸುವ ಒತ್ತಡಕ್ಕೆ ಸಿಲುಕಿದಂತೆ ಕಾಣುತ್ತದೆ. ಆದರೆ ಇಂತಹ ಶಿಕ್ಷೆಗಳು ಎಂದಿಗೂ ಚರ್ಚಾ ವಿಷಯಗಳೇ ಆಗಿವೆ. ರಾಜಕೀಯವಾಗಿ ನೋಡದೆ ಸಾಮಾಜಿಕ ಕಾಳಜಿಯಿಂದ ವಿಶ್ಲೇಷಿಸುವಂತಹ ಕಾನೂನು ತಜ್ಞರು ಇಂತಹ ಮಸೂದೆಗಳ ಬಗ್ಗೆ ಹೆಚ್ಚು ಮಾತನಾಡಬೇಕಾಗುತ್ತದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X