ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಹೊರ ಪೊಲೀಸ್ ಠಾಣೆ ಹಿಂಭಾಗದ ಆಲೂರ, ಅರಸನಾಳ ಗ್ರಾಮಗಳಿಗೆ ಹೋಗುವ ರಸ್ತೆ ಬದಿಯ ಉದ್ದಕ್ಕೂ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಅಲ್ಲದೆ, ಈಗ ಮಳೆಯೂ ಬೀಳುತ್ತಿರುವದರಿಂದ ಕಸದ ರಾಶಿ ಮಗ್ಗಲು ಹಿಡಿದು ಇಲ್ಲಿ ಸಂಚರಿಸುವ ಸಾರ್ವಜನಿಕರ ಮೂಗಿಗೆ ದುರ್ವಾಸನೆ ಹರಡುತ್ತಿದೆ.
ಈ ರಸ್ತೆ ಬದಿಯಲ್ಲಿ ಪಟ್ಟಣ ಪಂಚಾಯಿತಿ ಸೇರಿದಂತೆ ಸಾರ್ವಜನಿಕರು ಕಸ ಎಸೆಯುವುದು ಸಾಮಾನ್ಯವಾಗಿದೆ. ಈ ನಡುವೆ ಇಲ್ಲಿ ಬಿಸಾಡಿದ ಕಸವನ್ನು ತೆರವು ಮಾಡದಿರುವುದರಿಂದ ಕಸ ರಾಶಿ ರಾಶಿಯಾಗಿ ಹರಡಿಕೊಂಡಿದೆ. ಕಸ ಕೊಳೆತು ವಾಸನೆ ಬರುತ್ತಿರುವುದರಿಂದ ರಸ್ತೆಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ನಾಲತವಾಡ ಪಟ್ಟಣ ಪಂಚಾಯತಿ ತ್ಯಾಜ್ಯ ಸಂಗ್ರಹಿಸುವ ವಾಹನಗಳನ್ನು ವಾರ್ಡ್‌ಗಳಲ್ಲಿ ನಾಗರಿಕರ ಮನೆಗಳ ಮುಂದಕ್ಕೆ ಕಳುಹಿಸಿದರು ಕೆಲವು ಜನರು ಅನಾಗರಿಕರಂತೆ, ನಾಲತವಾಡ ಪಟ್ಟಣಕ್ಕೂ ಸ್ವಚ್ಛತೆಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಪ್ರತಿದಿನ ರಾತ್ರಿ ವೇಳೆ ಪ್ಲಾಸ್ಟಿಕ್, ಮನೆಯ ಕಸ, ಕೊಳೆತ ಮಾಂಸ, ಮೀನುಗಳ ತ್ಯಾಜ್ಯ, ಹೋಟೆಲ್ ತ್ಯಾಜ್ಯ, ಅನುಪಯುಕ್ತ ತರಕಾರಿ ಮುಂತಾದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ತೆಗೆದುಕೊಂಡು ಬಂದು ಇಲ್ಲಿ ಎಸೆಯುತ್ತಿದ್ದಾರೆ.

ಇದೇ ಕಸದ ಗುಡ್ಡೆಯಿಂದ ಬಡ ವಿದ್ಯಾರ್ಥಿಗಳ ಬಿಸಿಎಂ ವಸತಿ ನಿಲಯ, ಪೋಲಿಸ್ ಠಾಣೆ ಸೇರಿದಂತೆ ಇಲ್ಲಿ ವಾಸಿಸುವವರಿಗೆ ದುರ್ವಾಸನೆ ಕಾಡುತ್ತಿದೆ. ಅಲ್ಲದೆ ಬೀದಿ ನಾಯಿಗಳು, ಬೀಡಾಡಿ ದನಗಳು ರಸ್ತೆ ಬದಿಯಲ್ಲಿ ಬಿಸಾಡಿದ ಚೀಲಗಳನ್ನ ಕಚ್ಚಿ ಎಳೆದು ರಸ್ತೆಯ ಮಧ್ಯೆ ತಂದು ಬಿಡುತ್ತಿದೆ. ಅಲ್ಲದೇ, ಹಾಸ್ಟೆಲ್ ಸನಿಹವು ಕೂಡ ಎಳೆದೊಯ್ದು ಚೀಲದಲ್ಲಿದ್ದ ಕಸವನ್ನು ಚೆಲ್ಲಾಪಿಲ್ಲಿ ಮಾಡುತ್ತಲೇ ಇವೆ. ಇದು ಇಲ್ಲಿ ಸಂಚರಿಸುವವರಿಗೆ ಮತ್ತು ರಸ್ತೆ ಸನಿಹವೇ ಇರುವ ವಿದ್ಯಾರ್ಥಿಗಳಿಗೆ, ವಾಸಿಸುವವರಿಗೆ ವಾಸನೆ ಆಸನೀಯವಾಗಿ ಪರಿಣಮಿಸಿದೆ. ಕಸ ಬೀದಿಯಲ್ಲಿ ಹರಡುವುದರಿಂದ, ಅದರ ದುರ್ನಾಥದಿಂದ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯು ಎದುರಾಗಿದೆ.
ಬೆಳಗ್ಗೆ ಶುದ್ಧ ಗಾಳಿ ಪಡೆಯಲು ಗುಡಿಯೊಣಿ, ಬಜಾರದ ಕಸಬ ಪೇಟಿಯ ಸಾರ್ವಜನಿಕರು ವಾಕಿಂಗ್ ಹೋಗುತ್ತಾರೆ. ಶುದ್ಧ ಗಾಳಿಗಾಗಿ ತೆರಳುವವರಿಗೆ ಈ ರಸ್ತೆಯಲ್ಲಿ ತಿರುಗಾಡಿದರೆ ರೋಗ ಹರಡಿತು ಎಂಬ ಆತಂಕ ವಾಯು ವಿಹಾರಿಗಳಿಗೆ ಕಾಡುತ್ತಿದೆ. ರೈತರ ಹೊಲಗಳು, ತೋಟಗದ್ದೆ ಇದೇ ತಿಪ್ಪೆ ಮಾರ್ಗದಲ್ಲಿ ಇವೆ. ರೈತರು ಈ ರಸ್ತೆಯಲ್ಲಿ ಹೋಗುವಾಗ ಮೂಗು ಮುಚ್ಚಿಕೊಂಡು ತಿರುಗಾಡುತ್ತಿದ್ದಾರೆ.
ಮಳೆ ಬಂದರೆ ಮಳೆ ನೀರಿನ ಜೊತೆ ಕಸದ ಕೊಳೆತ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಈ ಸ್ಥಳವು ಹಂದಿಗಳ, ನಾಯಿಗಳು ಹಾಗೂ ಬೀಡಾಡಿ ದನಗಳ ತಾಣವಾಗಿದ್ದು, ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ.

ಕಸದ ನಿರ್ವಹಣೆ ಹಾಗೂ ವಿಲೇವಾರಿ ಸರಿಯಾಗಿ ನಡೆಯದಿರುವುದರಿಂದ ಪಟ್ಟಣದ ಹೆಣ್ಣು ಮಕ್ಕಳ ಪಕ್ಕದ ತಿಪ್ಪೆ, ದೇಶಮುಖರ ಓಣಿ ಶಾಲೆ ಮಕ್ಕಳು ತಿರುಗಾಡುವ ರಸ್ತೆಯ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಂದಿಗಳು ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಜಗದೇವ ನಗರ ಬಡಾವಣೆಯ ಸರ್ಕಾರಿ ಶಾಲೆ ಸಮೀಪ ಸೇರಿದಂತೆ ಹಲವಡೆ ಇರುವ ಕಸದ ತಿಪ್ಪೆಗಳು ಹಂದಿ, ನಾಯಿಗಳಿಗೆ ಆಹಾರದ ತಾಣವಾಗಿವೆ. ಸದಾ ಅಲ್ಲೇ ಬೀಡು ಬಿಡುವ ಪ್ರಾಣಿಗಳಿಂದಾಗಿ, ಒಬ್ಬರೇ ಆ ರಸ್ತೆಯಲ್ಲಿ ಓಡಾಡುವುದಕ್ಕೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು.
ನಾಲತವಾಡ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ನಿರ್ವಹಣೆ ನಿಗದಿಪಡಿಸಿದ ಹೊಸ ಜಮೀನಿಗೆ ಸಾಗಿಸಬೇಕು. ಇಲ್ಲಿ ಸಂಚರಿಸುವವರಿಗೆ ಮತ್ತು ಅಕ್ಕಪಕ್ಕದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ, ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ನಿತ್ಯ ಬೆಳಗ್ಗೆ ಮನೆ ಬಳಿ ಬರುವ ಕಸದ ಆಟೋಗಳಿಗೆ ಕಸ ನೀಡಿದರೆ ಹಾಗೂ ಮೂಲದಲ್ಲಿ ಕಸ ವಿಂಗಡಿಸದೆ ನೀಡಿದರೆ ದೊಡ್ಡ ಮೊತ್ತದ ದಂಡ ವಿಧಿಸಲು ಪಟ್ಟಣ ಪಂಚಾಯಿತಿ ಕಾನೂನು ರೂಪಿಸಬೇಕು. ಎಲ್ಲಾ ವಾರ್ಡ್ಗಳಿಗೆ ಸಿ ಸಿ ಕ್ಯಾಮೆರಾ ಅಳವಡಿಸಲು ಪಟ್ಟಣ ಪಂಚಾಯಿತಿ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುತ್ತಾರೆ ದಲಿತ ಸಂಘಟನೆಯ ಯುವ ಮುಖಂಡರಾದ ಗುಂಡಪ್ಪ ಛಲವಾದಿ.
ಇದನ್ನು ಓದಿದ್ದೀರಾ? ಯಾದಗಿರಿ | ದಲಿತರ ಮೇಲೆ ಸುಳ್ಳು ಕೇಸು: ಸುರಪುರ ಇನ್ಸ್‌ಪೆಕ್ಟರ್ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ
ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರು ಅವರನ್ನು ಮಾತನಾಡಿಸಿದಾಗ, ಪಟ್ಟಣದ ಕಸ ಸಂಗ್ರಹಣೆಗೆ ಈಗಾಗಲೇ ಬೇರೆ ಕಡೆ ಸ್ಥಳ ಗುರುತಿಸಲಾಗಿದೆ. ತ್ಯಾಜ್ಯ ವಿಲೇವಾರಿ, ಸಂಸ್ಕರಿಸುವ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಆರಂಭವಾಗುತ್ತದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವುದು ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಎಲ್ಲದರ ಮಧ್ಯೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಹಾಗೂ ಪಪಂ ಅಧಿಕಾರಿಗಳಾಗಲಿ ಕಸ ವಿಲೇವಾರಿ ಅಂತಹ ಸಮಸ್ಯೆಯನ್ನು ಗಮನಹರಿಸಿ ಸಮಸ್ಯೆಯನ್ನು ಪರಿಹರಿಸುವವರೇ ಎಂದು ಕಾದು ನೋಡಬೇಕಿದೆ.