25 ಕೆಜಿ ಬಟಾಣಿ ಕದ್ದ ಆರೋಪದ ಮೇಲೆ ನಾಲ್ವರು ಬಾಲಕರನ್ನು ಕಟ್ಟಿ ಹಾಕಿ ಥಳಿಸಿ ಬಳಿಕ ಊರಿನಲ್ಲಿ ಮೆರವಣಿಗೆ ಮಾಡಿದ ಘಟನೆ ಶನಿವಾರ ಬಿಹಾರದ ಮುಂಗೇರ್‌ನ ಜೋವಾಬಹಿಯಾರ್ ಗ್ರಾಮದಲ್ಲಿ ನಡೆದಿದೆ. ಸದ್ಯ 20 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಬಾಲಕರು ಕಣ್ಣೀರು ಹಾಕುತ್ತಿರುವುದು ಕಂಡುಬಂದಿದೆ. ಗುಂಪೊಂದು ಬಾಲಕರ ಕೈಕಟ್ಟಿ ಹಾಕಿ ಅವರನ್ನು ಹಳ್ಳಿಯ ಮೂಲಕ ಮೆರವಣಿಗೆ ಮಾಡಿದೆ. ಓರ್ವ ಬಾಲಕ ಕಳ್ಳತನವನ್ನು ಒಪ್ಪಿಕೊಂಡಿದ್ದು, ಇತರ ಮೂವರು ಆರೋಪಿಗಳೆಂದು ಹೇಳಿದ್ದಾನೆ. ಇದಾದ ಬಳಿಕ ಗುಂಪೊಂದು ನಾಲ್ವರಿಗೂ ಥಳಿಸಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? 500 ರೂ. ಕದ್ದ ಆರೋಪ; ಮಗನನ್ನೇ ಹೊಡೆದು ಕೊಂದ ತಂದೆ
ಆದರೆ ಈ ವೇಳೆ ನಾಲ್ವರು ಬಾಲಕರಲ್ಲಿ ಯಾವುದೇ ಬಾಲಕರ ಕುಟುಂಬಸ್ಥರಾಗಲಿ ಅಥವಾ ಗ್ರಾಮಸ್ಥರಾಗಲಿ ಮಧ್ಯಪ್ರವೇಶಿಸಿಲ್ಲ. ಇನ್ನು ಕೆಲವು ಸ್ಥಳೀಯ ಅಂಗಡಿಯವರು ಮತ್ತು ನಿವಾಸಿಗಳು ಈ ಬಾಲಕರ ಮೇಲೆ ಬೇರೆ ಕಳ್ಳತನದ ಆರೋಪವನ್ನೂ ಹೊರಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಕಳ್ಳತನವನ್ನು ತಡೆಯಬೇಕಾದರೆ ನಾವು ಈ ರೀತಿ ಕ್ರಮಕೈಗೊಳ್ಳುವುದು ಅತಿ ಮುಖ್ಯ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಸೈಯದ್ ಇಮ್ರಾನ್ ಮಸೂದ್, “ಅಧಿಕಾರಿಗಳಿಗೆ ವಿಡಿಯೋ ಲಭ್ಯವಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.
