ರಾಜಸ್ಥಾನ ಸರ್ಕಾರ ತಡರಾತ್ರಿಯ ಆದೇಶದಲ್ಲಿ ಜೈಪುರ ಮಹಾನಗರ ಪಾಲಿಕೆ ಮೇಯರ್ ಮುನೇಶ್ ಗುರ್ಜಾರ್ ಅವರನ್ನು ಅಮಾನತುಗೊಳಿಸಿದೆ. ಈಕೆಯ ಪತಿ ಸುಶೀಲ್ ಗುರ್ಜರ್ ಅವರನ್ನು ನಿನ್ನೆ(ಆಗಸ್ಟ್ 5) ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು ಗುತ್ತಿಗೆ ನೀಡುವ ಕೆಲಸಕ್ಕೆ 2 ಲಕ್ಷ ರೂ. ಲಂಚ ಪಡೆದ ಆರೋಪದಲ್ಲಿ ಬಂಧಿಸಿತ್ತು.
ಜೈಪುರ ಮೇಯರ್ ನಿವಾಸದಲ್ಲಿ ಅವರ ಪತಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ಮೇಯರ್ ನಿವಾಸದಿಂದ 40 ಲಕ್ಷ ರೂ. ನಗದು ಕೂಡ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಮೇಯರ್ ಶಾಮೀಲಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಮೇಯರ್ ವಜಾಗೊಳಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಲಂಚ ಪಡೆದ ಪ್ರಕರಣದಲ್ಲಿ ಎಸಿಬಿ ಸುಶೀಲ್ ಗುರ್ಜಾರ್ ಸಹಿತ ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ. ಸುಶೀಲ್ ಗುರ್ಜರ್ ತನ್ನ ಸಹಾಯಕರಾದ ನಾರಾಯಣ್ ಸಿಂಗ್ ಮತ್ತು ಅನಿಲ್ ದುಬೆ ಮೂಲಕ ಪ್ಲಾಟ್‌ಗಾಗಿ ಗುತ್ತಿಗೆ ಅರ್ಜಿಯನ್ನು ತ್ವರಿತವಾಗಿ ಅಂಗೀಕರಿಸಲು ದೂರುದಾರರಿಂದ 2 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ‘ಇಂಡಿಯಾ’ ಮೂರನೇ ಸಭೆ
ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು ಮೇಯರ್ ಅವರ ಪತಿಯನ್ನು ಬಂಧಿಸಿರುವುದು ಭ್ರಷ್ಟಾಚಾರವನ್ನು ಹತ್ತಿಕ್ಕಲು ಸರ್ಕಾರ ಗಂಭೀರವಾಗಿದೆ ಎಂಬುದರ ಸೂಚನೆಯಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
“ರಾಜಸ್ಥಾನದಲ್ಲಿ ಮಾತ್ರ ಎಸಿಬಿ ಈ ರೀತಿ ಕೆಲಸ ಮಾಡುತ್ತದೆ. ಬೇರೆ ರಾಜ್ಯಗಳ ರೀತಿ ಅನುಮತಿ ಪಡೆದು ಕೆಲಸ ಮಾಡುವುದಿಲ್ಲ. ನಾವು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ರಾಜಸ್ಥಾನ ಲೋಕಸೇವಾ ಆಯೋಗದ ಸದಸ್ಯರನ್ನು ಮತ್ತು ಈಗ ಮೇಯರ್ ಅವರ ಪತಿಯನ್ನು ಬಂಧಿಸಿದ್ದೇವೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.