ದಾಯಾದಿ ದ್ವೇಷದ ಕಾರಣ ಸಂಬಂಧಿಯೊಬ್ಬನ ಹತ್ಯೆಗೆ ಯತ್ನಿಸಿದ ದುಷ್ಕರ್ಮಿಗಳು, ಆತನ ಮೇಲೆ ಮಾರಕಾಸ್ತ್ರದಿಂದ ಗಂಭೀರ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬೆಟ್ಟಗೊಂಡನಹಳ್ಳಿಯಲ್ಲಿ ನಡೆದಿದೆ.
ಬೆಟ್ಟಗೊಂಡನಹಳ್ಳಿ ವೆಂಕಟಪ್ಪ(58) ಎಂಬುವವರು ಹಲ್ಲೆಗೊಳಗಾದವರಾಗಿದ್ದಾರೆ. ಅವರು ಸದ್ಯ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಕ್ಷ್ಮಣ ಎನ್ನುವವರು ಅವರ ದೊಡ್ಡಪ್ಪನ ಮಗನಾಗಿದ್ದ ವೆಂಕಟಪ್ಪ ಎಂಬುವವರ ಮೇಲೆ ಹಲ್ಲೆ ಮಾಡಲು ಸಂಚು ನಡೆಸಿದ್ದರು. ಆರೋಪಿ ಲಕ್ಷ್ಮಣ ಮತ್ತು ಈತನ ಮಗ ಗಿರೀಶ ಆಗಸ್ಟ್ 04ರ ನಡುರಾತ್ರಿ ಸಂತ್ರಸ್ತರ ಮನೆ ಮತ್ತು ಬೀದಿ ದೀಪದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹತ್ಯೆ ಮಾಡಲು ಅವಿತು ಕೂತಿದ್ದರು. ವೆಂಕಟಪ್ಪ ಅಂದು ನಡುರಾತ್ರಿ ಮೂತ್ರ ವಿಸರ್ಜಿಸಲು ಹೊರಗೆ ಬಂದಾಗ ದಾಯಾದಿ ಸಹೋದರ ಲಕ್ಷ್ಮಣ ಮತ್ತು ಮಗ ಗಿರೀಶ ಏಕಾಏಕಿ ವೆಂಕಟಪ್ಪನವರ ಮೇಲೆ ಎರಗಿ ಸದ್ದು ಮಾಡದಂತೆ ಗಂಟಲನ್ನು ಒತ್ತಿ ಹಿಡಿದು ಗಂಟಲನ್ನು ಹಿಸುಕಿ ತಲೆಗೆ ಮಾರಕಾಸ್ತ್ರದಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಮತ್ತು ಕುಟುಂಬಸ್ಥರು ದೂರು ದಾಖಲಿಸಿದ್ದು, ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನೆ ನಡೆದ ಐದಾರು ಗಂಟೆ ಒಳಗೆ ಆರೋಪಿಗಳಾದ ಲಕ್ಷ್ಮಣ ಮತ್ತು ಮಗ ಗಿರೀಶನ್ನು ಬಂಧಿಸುವಲ್ಲಿ ಅಬ್ಬಿನಹೊಳೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ ಮಹಾವೀರ ಜೈನ್ ಯಾರು ಗೊತ್ತೇ?
ಗಾಯಾಳು ವೆಂಕಟಪ್ಪ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳಾದ ಅಪ್ಪ-ಮಗನ ಉಪಟಳದಿಂದ ಬೇಸತ್ತಿದ್ದ ಸ್ಥಳೀಯರು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಘಟನೆ ಕುರಿತು ಅಬ್ಬಿನಹೊಳೆ ಪಿಎಸ್‌ಐ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಆರೋಪಿಗಳು ತಮ್ಮ ದಾಯಾದಿ ಸಹೋದರನ ಮೇಲೆ ಹಲ್ಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದರು.