ಹೈಕೋರ್ಟ್ ಮಧ್ಯಂತರ ಆದೇಶದ ಅನ್ವಯ ಕೆಲದಿನಗಳಿಂದ ನಿರ್ಬಂಧಕ್ಕೆ ಒಳಗಾಗಿದ್ದ ಈದಿನ (eedina) ಯೂಟ್ಯೂಬ್ ಚಾನೆಲ್, ಮತ್ತೆ ಸಕ್ರಿಯವಾಗಿದೆ. ಮಧ್ಯಂತರ ಆದೇಶ ತೆರವು ಮಾಡಿದ ಬಳಿಕ ಗೂಗಲ್ ಮತ್ತು ಯೂಟ್ಯೂಬ್ ಸಂಸ್ಥೆಗಳಿಗೆ ಕೋರ್ಟ್ ಸೂಚನೆಯನ್ನು ನೀಡಿತ್ತು. ಅದರಂತೆ ಇಂದಿನಿಂದ ಚಾನೆಲ್ unblock ಆಗಿದೆ.
ಸತ್ಯ, ನ್ಯಾಯ, ಪ್ರೀತಿಯ ಸಂಕೇತವಾಗಿರುವ ನಿಮ್ಮ ಈದಿನ ಯೂಟ್ಯೂಬ್, ಜನಪರ ವಿಚಾರಗಳ ದಿಟ್ಟ ದನಿ. ಇನ್ನು ಮುಂದೆ ಎಂದಿನಂತೆ ಈದಿನ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊಗಳನ್ನು ನೋಡಿ, ಶೇರ್ ಮಾಡಿರಿ. ಜೊತೆಗೆ ಈದಿನ ಟಿವಿ (Eedina TV) ಚಾನೆಲ್ ಕೂಡ ಚಾಲ್ತಿಯಲ್ಲಿರುತ್ತದೆ. ಈದಿನಕ್ಕೆ ನಿಮ್ಮೆಲ್ಲರ ಬೆಂಬಲ ಸದಾ ಹೀಗೇ ಇರಲಿ.
ಈ ದಿನ ಸೇರಿದಂತೆ ಎಲ್ಲ ಜನಪರ ಡಿಜಿಟಲ್ ಮಾಧ್ಯಮಗಳು ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿ ಸುದ್ದಿಗಳನ್ನು ಪ್ರಕಟಿಸಲು ನಿರ್ಧರಿಸಿವೆ. “ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಹಾಗೂ ಧರ್ಮಸ್ಥಳದ ಸುತ್ತಮುತ್ತ ನಡೆಯಿತೆನ್ನಲಾದ ಸರಣಿ ಕೊಲೆಗಳನ್ನು ವರದಿ ಮಾಡುವ ವಿಚಾರದಲ್ಲಿ ನ್ಯಾಯಾಲಯಗಳ ಆದೇಶ ಎಂದಿಗೂ ಉಲ್ಲಂಘಿಸುವುದಿಲ್ಲ. ಸದರಿ ಆದೇಶಗಳನ್ನು ನ್ಯಾಯಾಲಯದಲ್ಲೇ ಪ್ರಶ್ನಿಸುವ ನಮ್ಮ ಹಕ್ಕನ್ನು ಉಳಿಸಿಕೊಳ್ಳುತ್ತಾ, ಈ ಸದ್ಯ ಕೆಳಹಂತದ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ಆದೇಶಗಳನ್ನು ನಾವು ಪಾಲಿಸಲು ಬದ್ಧರಿದ್ದೇವೆ” ಎಂದು ನಿರ್ಣಯಿಸಿರುವ ಡಿಜಿಟಲ್ ಮಾಧ್ಯಮಗಳ ಪೈಕಿ ಈದಿನವೂ ಒಂದಾಗಿದೆ.
ಇದನ್ನೂ ಓದಿರಿ: ಈದಿನ ಯೂಟ್ಯೂಬ್ ಬ್ಲಾಕ್ ತೆರವುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ
“ಆದೇಶದಲ್ಲೇ ಸೂಚಿಸಿರುವ ಹಾಗೆ ಮತ್ತು ನಮ್ಮ ಪತ್ರಿಕಾಧರ್ಮಕ್ಕೆ ಬದ್ಧರಾಗಿದ್ದುಕೊಂಡು, ಯಾರದ್ದೇ ಮೇಲೆ ಆಧಾರರಹಿತವಾದ, ಮಾನನಷ್ಟಕ್ಕೆ ಕಾರಣವಾಗುವ ಸುದ್ದಿ ಅಥವಾ ವಿಶ್ಲೇಷಣೆಗಳನ್ನು ನಾವು ಪ್ರಕಟಿಸುವುದಿಲ್ಲ; ಅದೇ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳಿಗೆ ಸಂಬಂಧಿಸಿದಂತೆ ಯಥಾವತ್ ಸುದ್ದಿಗಳನ್ನು ಪ್ರಕಟಿಸುವ ನಮ್ಮ ಹಕ್ಕನ್ನು ನ್ಯಾಯಾಲಯವು ನಿರ್ಬಂಧಿಸಿಲ್ಲದಿರುವುದನ್ನೂ ನಾವು ಅರಿತಿದ್ದೇವೆ. ಹೀಗಾಗಿ ಸುದ್ದಿಗಳನ್ನು ಪ್ರಕಟಿಸುವ ಮತ್ತು ಈ ಹೊತ್ತು ಎತ್ತಬೇಕಾದ ಪ್ರಶ್ನೆಗಳನ್ನು ಎತ್ತುವ ನಮ್ಮ ಹಕ್ಕನ್ನು ಚಲಾಯಿಸುತ್ತೇವೆ ಮತ್ತು ಆ ಮೂಲಕ ನಮ್ಮ ಕರ್ತವ್ಯವನ್ನು ಪಾಲಿಸಲು ನಾವು ಬದ್ಧರಾಗಿದ್ದೇವೆ” ಎಂದು ಮಾಧ್ಯಮಗಳು ನಿಲುವು ತಾಳಿವೆ.
