ಭಾವೈಕ್ಯ ಸಮಾಜ ಕಟ್ಟುವಲ್ಲಿ ಸೂಫಿ ಸಂತರು ಪ್ರಮುಖ ಪಾತ್ರ ವಹಿಸಿದ್ದಾರೆ. ಸರಿಯಾದ ದಿಕ್ಕಿನಲ್ಲಿ ಸಾಗಲು ಅವರ ಮಾರ್ಗದರ್ಶನ ಅವಶ್ಯವಾಗಿದೆ. ಎಲ್ಲರನ್ನೂ ಬೆಸೆಯುವ ಇಂತಹ ಸಮ್ಮೇಳನಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹಳೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸೂಫಿ ಸಂತರ ಸಮಾವೇಶದಲ್ಲಿ ಮಾತನಾಡಿದ ಅವರು, “ದೇಶ ಸ್ವಾತಂತ್ರ್ಯಗೊಳ್ಳಲು ಎಲ್ಲ ಸಮುದಾಯದವರೂ ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ಭಾವೈಕ್ಯ ನೆಲೆಸಲು ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು. ಹಿಂದೂ ಮುಸ್ಲಿಮರು ಒಂದಾಗಿ ಹೋರಾಟ ಮಾಡಿದಾಗ ಯಶಸ್ಸು ಗಳಿಸಲು ಸಾಧ್ಯ. ಅಂಬೇಡ್ಕರ್, ಬಸವೇಶ್ವರರ ಅನುಯಾಯಿಗಳು ಒಂದಾಗಬೇಕು” ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, “ದೇಶದ ಅಭಿವೃದ್ಧಿಗೆ ಕೋಮು ಸಾಮರಸ್ಯ ಅವಶ್ಯ. ದ್ವೇಷ ಬಿಟ್ಟು ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಬೇಕು ಎಂಬುದು ಈ ಸಮಾವೇಶದ ಸಂದೇಶವಾಗಿದೆ. ಈ ಭಾಗದ ಅನೇಕ ಸೂಫಿ ಸಂತರು ಕೋಮು ಸೌಹಾರ್ದ ನೆಲೆಸಲು ವಿಶೇಷ ಕೊಡುಗೆ ನೀಡಿದ್ದಾರೆ. ನಾವೆಲ್ಲ ಒಂದು ಎಂಬ ಸಂದೇಶ ಸಾರಿದ್ದಾರೆ. ಅದನ್ನು ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ” ಎಂದು ಅಭಿಪ್ರಾಯಪಟ್ಟರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, “ಬ್ರಿಟಿಷರು ಸಮಾಜದಲ್ಲಿ ಜಾತಿ ಬೀಜವನ್ನು ಬಿತ್ತಿದ್ದಾರೆ. ಅದನ್ನು ಕಿತ್ತೊಗೆಯಬೇಕಿದೆ. ಅಧಿಕಾರಕ್ಕಾಗಿ ಯಾರು ಏನು ಬೇಕಾದರೂ ಮಾತನಾಡುತ್ತಾರೆ. ಇಂತಹ ಸಮಾವೇಶದ ಮೂಲಕ ಅಂತವರನ್ನು ನಿಯಂತ್ರಿಸುವ ಕೆಲಸ ಆಗಬೇಕು ಎಂದರು.
ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, “ಜಾತಿ ಧರ್ಮ ನಮ್ಮ ಮನೆಯ ಹೊಸ್ತಿಲ ಒಳಗಿರಬೇಕು. ಮನೆಯಿಂದ ಹೊರಬಂದರೆ ನಾವೆಲ್ಲ ಭಾರತ ದೇಶದ ಸುಪುತ್ರರಂತೆ ಬದುಕಬೇಕು. ಮಾನವರೆಲ್ಲ ಒಂದು ಎಂಬ ಏಕತೆ ಮೂಡಬೇಕು. ದೇಶದಲ್ಲಿ ಸೂಫಿ ಸಂತರು, ಬಸವಾದಿ ಶರಣರು ಬಾರದೇ ಇದ್ದಿದ್ದರೆ ನದಿಗಳಲ್ಲಿ ನೀರಿನ ಬದಲು ರಕ್ತ ಹರಿಯುತ್ತಿತ್ತು. ಅವರೆಲ್ಲ ಭಾವೈಕ್ಯದ ಸಂದೇಶ ಸಾರಿದ್ದಾರೆ. ಸೂಫಿ ಸಂತರು ಎಲ್ಲ ಧರ್ಮಗಳ ಕೊಂಡಿಯಂತೆ ಕೆಲಸ ಮಾಡಿದ್ದಾರೆ. ದ್ವೇಷ ಬಿಡು ಪ‍್ರೀತಿ ಮಾಡು ಎಂಬ ಸಂದೇಶವನ್ನು ಐದು ಶತಮಾನಗಳ ಹಿಂದೆಯೇ ಫಕೀರೇಶ್ವರರು ನೀಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ಸರ್ಕಾರಗಳು ರೈತರ ಕಾಲು ಹಿಡಿಯುವ ಪರಿಸ್ಥಿತಿ ಬರಲಿದೆ: ಶಾಸಕ ಕೊತ್ತೂರು ಮಂಜುನಾಥ್
ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಮಾತನಾಡಿ, “ಸಿದ್ಧಾರೂಢರು ನಡೆದಾಡಿದ ನೆಲದಲ್ಲಿ ಹಿಂದೂ ಮುಸ್ಲಿಮರು ಸೌಹಾರ್ದದಿಂದ ಬದುಕುತ್ತಿದ್ದೇವೆ. ಈ ಒಗ್ಗಟ್ಟನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದರು.
ಈ ಸಂದರ್ಭದಲ್ಲಿ ನಾಡಿನ ಎಲ್ಲ ಲಿಂಗಾಯತ ಸ್ವಾಮೀಜಿ, ಸಂತರು, ಸೂಫಿಗಳು, ಇಸ್ಲಾಂ ಧರ್ಮ ಗುರುಗಳು, ಸಚಿವ ರಹೀಂ ಖಾನ್, ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್, ಹುಡಾ ಅಧ್ಯಕ್ಷ ಶಾಕೀರ ಸನದಿ, ಕಾಂಗ್ರೆಸ್ ಮುಖಂಡ ಜಿ ಎಸ್ ಪಾಟೀಲ, ಅನಿಲಕುಮಾರ ಪಾಟೀಲ, ಇಮ್ರಾನ್ ಯಲಿಗಾರ, ಅಲ್ತಾಫ್ ಕಿತ್ತೂರ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಇದ್ದರು.