- ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ಹಿಮಾಚಲ ಪ್ರದೇಶದಿಂದ ಬೆಂಗಳೂರಿಗೆ ಓದಲು ಬಂದಿದ್ದ ಆರ್ಯಕುಮಾರ್
ಖಾಸಗಿ ಕಾಲೇಜಿನ ಕಾನೂನು ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರ್ಯಕುಮಾರ್(23) ಸಾವನ್ನಪ್ಪಿದ ದುರ್ದೈವಿ. ಇವರು ಮೂಲತಃ ಹಿಮಾಚಲ ಪ್ರದೇಶದವರು. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ 3ನೇ ವರ್ಷದ ಕಾನೂನು ಪದವಿಯಲ್ಲಿ ಓದುತ್ತಿದ್ದರು. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಡಿ.ಗ್ರೂಪ್ ಲೇಔಟ್ ಸಮೀಪದ ಶ್ರೀಗಂಧ ಕಾವಲು ಬಡಾವಣೆಯಲ್ಲಿ ಪಿಜಿಯಲ್ಲಿ ನೆಲೆಸಿದ್ದರು.
ಪಿಜಿಯ ಕೊಠಡಿಯಲ್ಲಿ ಯಾರೂ ಇಲ್ಲದಿದ್ದಾಗ ಆರ್ಯಕುಮಾರ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಈ ಘಟನೆ ನಡೆದಿದ್ದು, ಸ್ನೇಹಿತರು ಪಿಜಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆರ್ಯಕುಮಾರ್ ಓದಿನ ಸಲುವಾಗಿ ಹಿಮಾಚಲ ಪ್ರದೇಶದಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇವರು ತೀವ್ರ ಮೈಗ್ರೇನ್‌ನಿಂದ ಬಳಲುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೌಡಿಶೀಟರ್ ಕೊಲೆ | 11 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ತನಿಖೆ ವೇಳೆ ಸಾವಿಗೆ ಯಾವುದೇ ಕಾರಣ ಪತ್ತೆಯಾಗಿಲ್ಲ. ಹಾಗಾಗಿ, ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಈ ಘಟನೆ ಸಂಬಂಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.