ಇಸ್ರೇಲಿನ ನಿತ್ಯ ನಿರಂತರ ದಾಳಿಯು ಮನೆ ಮಸಣಗಳನ್ನು ಏಕವಾಗಿಸಿದೆ. ಅನ್ನವನ್ನು ಬೆಳೆಯುವ ಹಸಿರ ಹೊಲಗಳು ಎಂದೂ ಅಡಗದ ಧೂಳಿನ ಕಾರ್ಮೋಡಗಳಾಗಿ ಧ್ವಂಸಗೊಂಡಿವೆ. ಜಗತ್ತಿನ ಇತರೆಡೆಯಿಂದ ಗಾಝಾದತ್ತ ಹರಿಯುವ ನೆರವಿಗೆ ಅಡ್ಡಗಲ್ಲಾಗಿದೆ ಇಸ್ರೇಲ್. ಹೊಳೆಯಾಗಿ ಹರಿಯಬೇಕಿದ್ದ ನೆರವನ್ನು ಗುಟುಕು ಹನಿಗಳಿಗೆ ತಗ್ಗಿಸಿದೆ. ವಿಶ್ವಸಂಸ್ಥೆಯೇ ನೀಡಿರುವ ಭೀಭತ್ಸ ಚಿತ್ರಣವಿದು.
‘ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದೆಯೇನ್ರೀ’ ಎಂದು ಏಕಕಾಲಕ್ಕೆ ನೋವು ದಿಗ್ಭ್ರಾಂತಿ ವಿಷಾದದ ಮಿಶ್ರಭಾವದಲ್ಲಿ ನುಡಿದಿದ್ದರು ಚಿಂತಕ ಪೂರ್ಣಚಂದ್ರ ತೇಜಸ್ವಿ. ಕುರುಡು ದ್ವೇಷದ ಕುದಿಯಲ್ಲಿ ಮುಳುಗೇಳುತ್ತಿರುವ ಧರ್ಮಗಳು-ವರ್ಣಗಳು- ಜಾತಿಗಳು-ಛದ್ಮವೇಷದ ಸರ್ವಾಧಿಕಾರಿಗಳು ನಿಮಿಷ ಕಾಲ ನಿಂತು ಮನನ ಮಾಡಬೇಕಿರುವ ಮಾತುಗಳಿವು.
ಎಣೆಯಿಲ್ಲದ ಮಾನವ ಕ್ರೌರ್ಯಕ್ಕೆ ಗುರಿಯಾಗಿರುವ ಭೂಮಿಯ ಮೇಲಿನ ರೌರವ ನರಕವಾಗಿ ಪರಿಣಮಿಸಿದೆ ಪ್ಯಾಲೆಸ್ತೀನಿನ ಗಾಝಾ ಪಟ್ಟಿ ಪ್ರದೇಶ. ಮನುಷ್ಯರು ಮನುಷ್ಯರ ಮೇಲೆ ಹನಿ ಕರುಣೆಯನ್ನೂ ತೋರದಿರುವ ಅಮಾನುಷವಿದು. ನೆನ್ನೆ ಮೊನ್ನೆ ಹೊರಬಿದ್ದಿರುವ ವರದಿಗಳ ಪ್ರಕಾರ ಹಸಿವು ಬಾಯಾರಿಕೆ ಅಪೌಷ್ಟಿಕತೆಗಳನ್ನು ಗಾಝಾದ ಜನತೆಯ ಬೇಟೆಯಾಡಿವೆ. ಆಹಾರದ ಪೊಟ್ಟಣಗಳನ್ನು ನೀಡಲು ಕರೆದು ಗುಂಪುಗೂಡುವ ಅಮಾಯಕರ ಮೇಲೆ ಗುಂಡಿನ ಮಳೆ ಕರೆಯುವ ವಿಕಟ ವಿಕೃತಿಯನ್ನು ಮೆರೆದಿದೆ ಇಸ್ರೇಲ್. ಪ್ಯಾಲೆಸ್ತೀನನ್ನು ಧ್ವಂಸಗೊಳಿಸಿ ಮಸಣವಾಗಿಸಿದೆ. ಆಧುನಿಕ ಜಗತ್ತು ಈವರೆಗೆ ಅರಿಯದ ದುರಾಕ್ರಮಣವಿದು. ಹಿಟ್ಲರನು ನಡೆಸಿದ ಯಹೂದಿಗಳ ನರಮೇಧಗಳನ್ನೂ ನರಕಗಳನ್ನೂ ಮೀರಿಸಿರುವ ಕ್ರೌರ್ಯ. ಗಾಝಾದ ಮಾನವೀಯ ಬಿಕ್ಕಟ್ಟು ಮಹಾನಾಶವನ್ನು ಮುಟ್ಟಿವೆ. ಅತಿ ಭಯಾನಕ ಕ್ಷಾಮವು ಅನಾವರಣಗೊಳ್ಳುವ ಎಚ್ಚರಿಕೆಯನ್ನು ನೀಡಿದೆ ಸಮಗ್ರ ಆಹಾರಭದ್ರತಾ ವರ್ಗೀಕರಣ (ಐಪಿಸಿ). ಬರಗಾಲ ಬೇರೆ ಮತ್ತು ಕ್ಷಾಮ ಬೇರೆ. ಬರಗಾಲದ ಹತ್ತಾರು ಪಟ್ಟು ಉಗ್ರ ಸ್ಥಿತಿ ಕ್ಷಾಮ. ಐಪಿಸಿ ಪ್ರಕಾರ ಉತ್ತರ ಗಾಝಾದ ಶೇ.70ರಷ್ಟು ಜನಸಂಖ್ಯೆಯು ಮಹಾನಾಶದ ಮೃತ್ಯುವಿನ ತೆಕ್ಕೆಗೆ ಸಿಕ್ಕಿದೆ. ದಕ್ಷಿಣ ಗಾಝಾದ ರಫಾ, ಖಾನ್ ಯೂನಿಸ್ ಹಾಗೂ ಡೇಯ್ರ್ ಅಲ್ ಬಲಾಹ್ ಅನ್ನದ ತುರ್ತುಪರಿಸ್ಥಿತಿಯ ತಿರುಗಣಿಗೆ ಬಿದ್ದಿವೆ. ಪರಿಸ್ಥಿತಿ ಇನ್ನಷ್ಟು ಕೆಟ್ಟರೆ ಇಸ್ರೇಲ್ ನಿರ್ಮಿತ ಕ್ಷಾಮದ ದವಡೆಯಲ್ಲಿ ಜಜ್ಜಿ ಹೋಗುವ ದಿನಗಳು ದೂರವಿಲ್ಲ.
ಗಾಝಾ ನಗರದ ಐವರು ಮಕ್ಕಳಲ್ಲೊಂದು ಮಗು ಹಸಿವು-ಅಪೌಷ್ಟಿಕತೆಯಿಂದಾಗಿ ತೊಗಲು ಮೂಳೆಗಳ ಚಕ್ಕಳವಾಗಿ ಹೋಗಿದೆ. ಕಳೆದ ಮೂರು ತಿಂಗಳಲ್ಲಿ 20 ಸಾವಿರ ಮಕ್ಕಳು ಉಸಿರಾಡುವ ಅಸ್ಥಿಪಂಜರಗಳಾಗಿ ಪರಿಣಮಿಸಿವೆ.
ಇಸ್ರೇಲಿನ ನಿತ್ಯ ನಿರಂತರ ದಾಳಿಯು ಮನೆ ಮಸಣಗಳನ್ನು ಏಕವಾಗಿಸಿದೆ. ಅನ್ನವನ್ನು ಬೆಳೆಯುವ ಹಸಿರ ಹೊಲಗಳು ಎಂದೂ ಅಡಗದ ಧೂಳಿನ ಕಾರ್ಮೋಡಗಳಾಗಿ ಧ್ವಂಸವಾಗಿವೆ. ಜಗತ್ತಿನ ಇತರೆಡೆಯಿಂದ ಗಾಝಾದತ್ತ ಹರಿಯುವ ನೆರವಿಗೆ ಅಡ್ಡಗಲ್ಲಾಗಿದೆ ಇಸ್ರೇಲ್. ಹೊಳೆಯಾಗಿ ಹರಿಯಬೇಕಿದ್ದ ನೆರವನ್ನು ಗುಟುಕು ಹನಿಗಳಿಗೆ ತಗ್ಗಿಸಿದೆ. ವಿಶ್ವಸಂಸ್ಥೆಯೇ ನೀಡಿರುವ ಭೀಭತ್ಸ ಚಿತ್ರಣವಿದು.
ತಕ್ಷಣವೇ ಕದನವಿರಾಮ ಘೋಷಿಸಬೇಕು ಮತ್ತು ಅನಿರ್ಬಂಧಿತ ಮಾನವೀಯ ನೆರವಿಗೆ ಅವಕಾಶ ನೀಡಬೇಕೆಂದು ವಿಶ್ವಸಂಸ್ಥೆ ಮತ್ತಿತರೆ ನೆರವು ಸಂಸ್ಥೆಗಳು ಕರೆ ನೀಡಿವೆ. ನಿರ್ನಾಮ ಮಾಡಲಾಗಿರುವ ನೀರು, ನೈರ್ಮಲ್ಯ, ಸ್ವಾಸ್ಥ್ಯಗಳಂತಹ ಅತ್ಯಗತ್ಯ ಸೇವೆಗಳ ಮರುಪೂರಣ ಆಗಬೇಕೆಂದು ಆಗ್ರಹಿಸಿವೆ. ನೆರವು ನೀಡಲೆಂದು ಕಾರ್ಯಕ್ಷೇತ್ರದಲ್ಲಿರುವ ವಿಶ್ವಸಂಸ್ಥೆಯ ಸಿಬ್ಬಂದಿಯೇ ಹಸಿವಿನಿಂದ ಕಂಗೆಟ್ಟು ಮೂರ್ಛೆ ಹೋಗತೊಡಗಿವೆ. ನೆರವಿಗೆ ಅವಕಾಶ ಮಾಡಿಕೊಡಲೆಂದು ಇಸ್ರೇಲ್ ಅಲ್ಲಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೆ ಸಮಸ್ಯೆಯ ಪರ್ವತದ ಮುಂದೆ ಈ ಕ್ರಮ ಸಾಸಿವೆ ಕಾಳಿನೋಪಾದಿಯದು ಮಾತ್ರ ಎಂದು ನೆರವು ಸಂಸ್ಥೆಗಳು ಹೇಳಿವೆ.
ಗಾಝಾದಲ್ಲಿ ಜನ ಹಸಿವಿನಿಂದ ಸಾಯುತ್ತಿದ್ದಾರೆಂಬ ವರದಿಗಳನ್ನು ಇಸ್ರೇಲಿ ಪ್ರಧಾನಮಂತ್ರಿ ನೇತಾನ್ಯಹು ನಿರಾಕರಿಸಿದ್ದಾರೆ. ಅತಿರಂಜಿತ ಎಂದು ತಳ್ಳಿ ಹಾಕಿದ್ದಾರೆ. ಆದರೆ ಲಾಗಾಯಿತಿನಿಂದಲೂ ಇಸ್ರೇಲಿನ ಬೆನ್ನು ತಟ್ಟಿ ಹುರಿದುಂಬಿಸುತ್ತಲೂ, ಅದು ನಡೆಸುತ್ತಿರುವ ನೀಚ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಲೂ ಬಂದಿರುವ ದೇಶವಾದ ಅಮೆರಿಕೆಯ ಅಧ್ಯಕ್ಷ ಟ್ರಂಪ್ ಅವರೇ ಗಾಝಾದಲ್ಲಿ ಹಸಿವಿನ ತಾಂಡವವನ್ನು ವಾಸ್ತವವೆಂದು ಒಪ್ಪಿದ್ದಾರೆ. ಕ್ಷಾಮದ ಸ್ಥಿತಿ ಇದೆಯೆಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರ್ರೆಸ್ ಕೂಡ ಹೌದೆಂದು ಗೋಣು ಆಡಿಸಿದ್ದಾರೆ. ಗಾಝಾವನ್ನು ಹಸಿವಿನ ಜ್ವಾಲೆಗಳಿಗೆ ನೂಕಲೆಂದೇ ಇಸ್ರೇಲ್ ನಿರ್ಬಂಧಗಳನ್ನು ಹೇರಿದೆ ಎಂದು ವಿಶ್ವಸಂಸ್ಥೆಯ ಹಲವು ತಜ್ಞರು ಸೆರಗಿನ ಕೆಂಡವನ್ನು ಹೊರ ಸುರುವಿದ್ದಾರೆ.
ಅನ್ಯರು ನಿಮ್ಮ ದೇಶಕ್ಕೆ ನುಗ್ಗಿ, ತಮ್ಮ ಸಾಮ್ರಾಜ್ಯ ಕಟ್ಟಿಕೊಂಡು ದಬ್ಬಾಳಿಕೆ ನಡೆಸಿ ನಿಮ್ಮದೇ ದೇಶದ ಕಾಲುಭಾಗಕ್ಕೆ ನಿಮ್ಮನ್ನು ಒತ್ತರಿಸಿ, ಅನುದಿನವೂ ಹಸಿವು ಹತ್ಯೆ ಅತ್ಯಾಚಾರ ದೌರ್ಜನ್ಯಗಳಿಗೆ ಈಡು ಮಾಡಿದರೆ, ಕಡೆಗೆ ನಿಮ್ಮ ಜನಾಂಗವನ್ನೇ ಅಳಿಸಿ ಹಾಕಿ, ಆ ದೇಶ ತಮಗೇ ಸೇರಿದ್ದೆಂದು ಚರಿತ್ರೆ ಬರೆದುಕೊಂಡರೆ ನಿಮಗೆ ಏನನಿಸೀತು ಕಲ್ಪಿಸಿಕೊಳ್ಳಿ.
ತೊರೆಯ ಮೇಲ್ಭಾಗದ ದಡದಲ್ಲಿ ನಿಂತ ತೋಳ, ಕೆಳಭಾಗದಲ್ಲಿ ನೀರು ಕುಡಿಯುತ್ತಿರುವ ಕುರಿ ಮರಿಯನ್ನು ‘ನಾನು ಕುಡಿಯುವ ನೀರನ್ನು ಎಂಜಲು ಮಾಡುತ್ತಿರುವ ನಿನ್ನನ್ನು ತಿನ್ನದೆ ಬಿಡಲಾರೆ’ ಎಂದು ಕೆಕ್ಕರಿಸುವ ಕುತಂತ್ರ. ತಾಯಿನಾಡಿನ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬೇರೊಬ್ಬರ ತಾಯಿನಾಡನ್ನು ಅಪಹರಿಸಿದ್ದಾರೆ. ಮಣ್ಣಿನ ಮಕ್ಕಳಾದ ಪ್ಯಾಲೆಸ್ತೀನೀಯರನ್ನು ವ್ಯವಸ್ಥಿತವಾಗಿ ಅವರ ನೆಲದಿಂದ ಉಚ್ಚಾಟಿಸುವ ನಿರಂತರ ಖೂಳ ಕೃತ್ಯವನ್ನು ಖುದ್ದು ಯಹೂದಿ ಚರಿತ್ರಕಾರರೇ ದಾಖಲಿಸಿದ್ದಾರೆ.
ಹದಿನೇಳು ತಿಂಗಳ ನಿತ್ಯ ಬಾಂಬು ದಾಳಿ, ಹತ್ಯೆಗಳು, ಬೆದರಿಕೆಗಳು, ಸೆರೆವಾಸ, ಉಪವಾಸ, ಕಾಯಿಲೆ-ಕಸಾಲೆಗಳು, ಕನಿಷ್ಠ 45 ಸಾವಿರ ಪ್ಯಾಲೆಸ್ತೀನಿಯರನ್ನು ಕೊಂದಿವೆ. ದೊಡ್ಡ ಸಂಖ್ಯೆಯ ಜನ ಅಂಗಹೀನರಾಗಿದ್ದಾರೆ. ಅಪಾರ ಕಷ್ಟನಷ್ಟಗಳ ಪರಂಪರೆಯನ್ನೇ ಎದುರಿಸಿದೆ ಈ ಜನಸಮುದಾಯ. ಪ್ಯಾಲೆಸ್ತೀನಿನ ಹೊರಗಿರುವ ಜಗತ್ತು ಈ ಜನಸಮುದಾಯ ಎದುರಿಸಿದ ನರಕವನ್ನು ಊಹಿಸಿಕೊಳ್ಳುವುದೂ ಅಸಾಧ್ಯ.
ಪ್ಯಾಲೆಸ್ತೀನ್ ಉಗ್ರರ ಸಂಘಟನೆ ‘ಹಮಾಸ್’ ಈವರೆಗೆ ಎಸಗಿರುವ ಅತಿ ಕೆಟ್ಟ ಕೃತ್ಯವನ್ನು ಹೆಸರಿಸಿ ಬೇಕಾದರೆ ಅದನ್ನು ಸಾವಿರ ಸಂಖ್ಯೆಯಲ್ಲಿ ಗುಣಾಕಾರ ಮಾಡಿರಿ. ಈ ಅಗಾಧ ಸಂಖ್ಯೆ ಕೂಡ, ಪ್ಯಾಲೆಸ್ತೀನೀ ಜನಾಂಗವನ್ನೇ ಅಳಿಸಿ ಹಾಕುವ ಇಸ್ರೇಲಿ ರಕ್ತದಾಹವನ್ನು ಸರಿಗಟ್ಟಲಾರದು ಎಂಬ ಮಾತನ್ನು ನಿಷ್ಪಕ್ಷಪಾತಿ ಯಹೂದಿಗಳೇ ಆಡಿದ್ದಾರೆ.
ಗಾಝಾ ಪಟ್ಟಿಯನ್ನು ಕಾಂಕ್ರೀಟ್ ಕಸದ ರಾಶಿಗಳ ನರಕದ ನೆಲವಾಗಿಸಿದೆ ಇಸ್ರೇಲ್. ಶೇ.90ರಷ್ಟು ಮನೆಗಳು ನೆಲಸಮವಾಗಿವೆ. ಶೇ.80ರಷ್ಟು ವ್ಯಾಪಾರ ವಹಿವಾಟು ಅಳಿಸಿ ಹೋಗಿದೆ. ಶೇ.68ರಷ್ಟು ಕೃಷಿ ಭೂಮಿ ನಾಶವಾಗಿ ಹೋಗಿದೆ. ಕುಡಿಯುವ ನೀರಿಲ್ಲ, ಚರಂಡಿ ವ್ಯವಸ್ಥೆ ಉಳಿದಿಲ್ಲ, ವಿದ್ಯುಚ್ಛಕ್ತಿ, ಇಂಧನದ ಸುಳಿವಿಲ್ಲ. ಶಾಲೆ, ಆಸ್ಪತ್ರೆಯಿಲ್ಲ. ಅರ್ಥವ್ಯವಸ್ಥೆ ಹೇಳಹೆಸರಿಲ್ಲದಾಗಿದೆ. ರೋಗರುಜಿನಗಳು ಹಸಿವು ನೀರಡಿಕೆಗಳು ರಾಜ್ಯವಾಳಿವೆ. ಇಸ್ರೇಲಿ ಬಾಂಬುಗಳ ನಂಜುಭರಿತ ರಾಸಾಯನಿಕಗಳು ಗಾಳಿಯಲ್ಲಿ, ಅಂತರ್ಜಲದಲ್ಲಿ ಬೆರೆತು ವಿಷಮಯ ಮಾಡಿವೆ. ಕುಟುಂಬಗಳು ಛಿದ್ರಗೊಂಡಿವೆ. ಮಕ್ಕಳು ತಬ್ಬಲಿಗಳಾಗಿದ್ದಾರೆ. ಗಾಝಾ ಮರುನಿರ್ಮಾಣವು ಕನಸೇ ಆಗಿದೆ. ಅಸಾಧ್ಯವಾಗಿ ಕಾಣತೊಡಗಿರುವ ಈ ಕನಸನ್ನು ಒಂದು ವೇಳೆ ನನಸು ಮಾಡುವುದೇ ಆದಲ್ಲಿ, ಮೊದಲು ಕೈಗೊಳ್ಳಬೇಕಿರುವ ಕೆಲಸ 450 ಲಕ್ಷ ಟನ್ನುಗಳಷ್ಟು ಕಾಂಕ್ರೀಟ್ ಕಸದರಾಶಿಯನ್ನು ಬಳಿದು ಸಾಗಿಸುವುದು. ತಜ್ಞರ ಪ್ರಕಾರ ಈ ಕೆಲಸಕ್ಕೆ ಕನಿಷ್ಠ ಹತ್ತು ವರ್ಷಗಳಾದರೂ ಬೇಕಿದೆ.
ತನ್ನನ್ನು ತಾನು ಮನುಷ್ಯ ಕುಲ ಎಂದು ಬಣ್ಣಿಸಿಕೊಳ್ಳುವ ನರಲೋಕದಲ್ಲಿ ಮಾನವೀಯತೆಯ ತುಸುವಾದರೂ ಪಸೆ ಉಳಿದಿದ್ದರೆ, ಗಾಝಾದ ನರಮೇಧಕ್ಕೆ ಮೌನಸಮ್ಮತಿಯನ್ನು ಮುರಿಯಬೇಕಿದೆ.
