ಕೆಎಂಎಫ್ ದುರಾಡಳಿತದಿಂದ ರೈತರು ಹೈನುಗಾರಿಕೆಯಿಂದ ದೂರ ಸರಿಯುತ್ತಿದ್ದಾರೆ. ರೈತಪರ ಕಾಳಜಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಎಂಎಫ್ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ. ಹಾಲು ಒಕ್ಕೂಟಗಳ ಉಳಿವು ಕೇವಲ ರೈತರ ದೃಷ್ಟಿಯಿಂದ ಮಾತ್ರವಲ್ಲದೆ ರಾಜ್ಯದ ಗ್ರಾಹಕರ ದೃಷ್ಟಿಯಿಂದಲೂ ಮುಖ್ಯವಾಗಿದೆ.
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಹಾಲಿನ ಬೆಲೆಯನ್ನು ಹೆಚ್ಚಿಸುವುದರ ಮೂಲಕ ಮೊದಲು ಸುದ್ದಿಯಾಗಿದ್ದ ಕೆಎಂಎಫ್, ನಂತರ ತಿರುಪತಿ ಲಡ್ಡುಗಳಿಗೆ ತುಪ್ಪ ಸರಬರಾಜು ನಿಲ್ಲಿಸಿದೆ ಎಂದು ವಿವಾದ ಹುಟ್ಟಿಕೊಂಡು ಸುದ್ದಿಯಾಗಿತ್ತು. ಅದರ ನಂತರ ಕೆಎಂಎಫ್ ಕಾರ್ಯಚಟುವಟಿಕೆಗಳ ಬಗ್ಗೆ ಹತ್ತಾರು ಮಾಹಿತಿ ಹೊರಬೀಳುತ್ತಿದ್ದು, ಅದಕ್ಕೆ ನಿಜವಾಗಿಯೂ ರೈತರ ಮತ್ತು ಗ್ರಾಹಕರ ಹಿತಾಸಕ್ತಿ ಕಾಯುವ ಉದ್ದೇಶವಿದೆಯೇ ಎನ್ನುವುದರ ಬಗ್ಗೆ ಅನುಮಾನಗಳು ಮೂಡಿವೆ.
ದೇಶದಲ್ಲಿಯೇ ಕರ್ನಾಟಕ ಅತಿ ಹೆಚ್ಚು ಹಾಲು ಉತ್ಪಾದಿಸುವ ಎರಡನೇ ರಾಜ್ಯವಾಗಿದೆ. ರಾಜ್ಯದಲ್ಲಿ16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿದ್ದು, 15,453 ಹಾಲಿನ ಡೇರಿಗಳಿವೆ. 26,44 ಕುಟುಂಬಗಳು ಹೈನುಗಾರಿಕೆಯನ್ನುಅವಲಂಬಿಸಿ ಬದುಕುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ರೈತರ ಮಟ್ಟಿಗೆ ಭಾರಿ ತ್ರಾಸದ ಹಾಗೂ ನಷ್ಟದ ವ್ಯವಹಾರವಾಗಿದೆ. ಹೆಚ್ಚಿನ ರೈತರು ಹೈನುಗಾರಿಕೆಯನ್ನು ಒಂದು ಉಪಕಸುಬಾಗಿ ಮಾಡುತ್ತಿದ್ದಾರೆ. ಆದರೆ, ಕಳೆದ ಏಳೆಂಟು ವರ್ಷಗಳಿಂದ ಹಾಲು ಉತ್ಪಾದನೆ ವಿಪರೀತ ದುಬಾರಿಯಾಗುತ್ತಾ ಬರುತ್ತಿದ್ದು, ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ರೈತರು ಇಂಥ ನಿರ್ಧಾರ ತಳೆಯುವಲ್ಲಿ ಹಾಲು ಒಕ್ಕೂಟಗಳ ಪಾತ್ರವೂ ಮುಖ್ಯವಾಗಿದೆ.
ಹಾಲು ಉತ್ಪಾದನೆಯ ಖರ್ಚು ಹೆಚ್ಚಾಗಿರುವುದರಿಂದ ಹಾಲಿನ ದರವನ್ನೂ ಏರಿಸಬೇಕೆಂದು ರೈತರು ಹಲವು ತಿಂಗಳಿನಿಂದ ಕೇಳುತ್ತಲೇ ಬಂದಿದ್ದರು. ಆದರೆ, ನಮ್ಮ ಒಕ್ಕೂಟಗಳು ಹಾಲಿನ ದರ ಏರಿಸುವುದಿರಲಿ, ರೈತರಿಂದ ಸಂಗ್ರಹಿಸುವ ಹಾಲಿನ ದರವನ್ನು ಕಡಿಮೆ ಮಾಡುತ್ತಾ ಬರತೊಡಗಿದ್ದವು. ಕೆಲವೇ ವಾರಗಳ ಹಿಂದೆ ಬೆಂಗಳೂರು ಒಕ್ಖೂಟ 1.50 ರೂಪಾಯಿ ಇಳಿಕೆ ಮಾಡಿದ್ದರೆ, ಮಂಡ್ಯ ಒಕ್ಕೂಟ 1 ರೂಪಾಯಿ ಇಳಿಸಿತ್ತು.
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಾಲು ಖರೀದಿ ದರ ಇಳಿಕೆ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಕ್ಕೂಟಗಳಿಗೆ ಎಚ್ಚರಿಕೆ ನೀಡಿದ್ದರು. ಬೆಲೆ ಹೆಚ್ಚಳದ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿಯೂ ಆಗ ಅವರು ಭರವಸೆ ನೀಡಿದ್ದರು. ಬೆಲೆ ಏರಿಕೆಯ ಮುನ್ಸೂಚನೆ ಸಿಕ್ಕೊಡನೆಯೇ ಕೆಲವು ಒಕ್ಕೂಟಗಳು ಮುಖ್ಯಮಂತ್ರಿಗಳ ಎಚ್ಚರಿಕೆಯನ್ನೂ ಧಿಕ್ಕರಿಸಿ ಬೆಲೆ ಇಳಿಕೆ ಮಾಡಿಬಿಟ್ಟವು. ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ಜುಲೈ 16ರಿಂದ ಜಾರಿಗೆ ಬರುವಂತೆ ಲೀಟರ್ ಹಾಲಿನ ಬೆಲೆಯನ್ನು 2.50 ರೂಪಾಯಿ ಇಳಿಸಿತ್ತು. ಅದಕ್ಕೆ ಹಾಲು ಸಂಗ್ರಹಣೆ ಹೆಚ್ಚಾಗಿರುವ ಕಾರಣ ಬೆಲೆ ಇಳಿಕೆ ಮಾಡಲಾಗಿದೆ ಎನ್ನುವ ಸಮರ್ಥನೆ ನೀಡಲಾಗಿತ್ತು.
ಸಿದ್ದರಾಮಯ್ಯನವರು ತಾವು ಭರವಸೆ ನೀಡಿದಂತೆ, ಆಗಸ್ಟ್ ಒಂದರಿಂದ ಜಾರಿಗೆ ಬರುವಂತೆ ಹಾಲಿನ ಬೆಲೆಯನ್ನು ಮೂರು ರೂಪಾಯಿ ಹೆಚ್ಚಿಸಿದರು. ಹಾಗೆ ಹೆಚ್ಚಿಸುವಾಗ, ಹೆಚ್ಚಳವಾಗುವ ಮೂರು ರೂಪಾಯಿ ರೈತರಿಗೇ ಸಿಗುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಒತ್ತಿ ಹೇಳಿದ್ದರು. ಆದರೆ, ಅದಾಗಲೇ ಕೆಲವು ಒಕ್ಕೂಟಗಳು ಬೆಲೆ ಇಳಿಕೆ ಮಾಡಿದ್ದರಿಂದ ಮೂರು ರೂಪಾಯಿ ಕೊಟ್ಟರೂ, ರೈತರಿಗೆ ಅದರ ಪ್ರಯೋಜನ ಸಿಗದಂತಾಯಿತು. ಕೋಚಿಮುಲ್ ನಿದರ್ಶನವನ್ನೇ ತೆಗೆದುಕೊಳ್ಳುವುದಾದರೆ, ಅವರು ಮೊದಲೇ 2.50 ರೂ. ಬೆಲೆ ಇಳಿಕೆ ಮಾಡಿದ್ದರಿಂದ ಮೂರು ರೂಪಾಯಿ ಬೆಲೆ ಹೆಚ್ಚಳದ ಹಣವನ್ನು ಅವರಿಗೆ ನೀಡಿದರೂ ವಾಸ್ತವವಾಗಿ ಅವರಿಗೆ ಸಿಗುವ ಹೆಚ್ಚಳ ಕೇವಲ 50 ಪೈಸೆ ಮಾತ್ರ.
ರೈತರಿಗೆ ಕೊಡದಿದ್ದರೆ ಹೋಗಲಿ, ಒಕ್ಕೂಟಗಳಾದರೂ ಸದೃಢವಾಗಿವೆಯೇ ಎಂದು ನೋಡಿದರೆ, ಅದೂ ಇಲ್ಲ. ಇರುವ 16 ಒಕ್ಕೂಟಗಳ ಪೈಕಿ 9 ಒಕ್ಕೂಟಗಳು ನಷ್ಟದಲ್ಲಿವೆ. ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಮಾಸಿಕ 15 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಬಳ್ಳಾರಿ ಒಕ್ಕೂಟ ತಿಂಗಳಿಗೆ 40 ಲಕ್ಷ ನಷ್ಟ ಅನುಭವಿಸುತ್ತಿದೆ. ಆ ನಷ್ಟವನ್ನು ಭರಿಸಿಕೊಳ್ಳಲು ಒಕ್ಕೂಟಗಳು ಮತ್ತೆ ರೈತರ ಹಣಕ್ಕೇ ಕನ್ನ ಹಾಕುತ್ತಿವೆ. ಒಂದಲ್ಲಾ ಒಂದು ರೀತಿಯಲ್ಲಿ ಒಕ್ಕೂಟಗಳು ನಷ್ಟದ ಭಾರವನ್ನು ರೈತರಿಗೆ ನೇರವಾಗಿ ವರ್ಗಾಯಿಸುತ್ತವೆ. ನಿದರ್ಶನಕ್ಕೆ ಹೇಳುವುದಾದರೆ, ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ನಷ್ಟವನ್ನು ಸರಿದೂಗಿಸಲು ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೆ ಕತ್ತರಿ ಹಾಕಲಾಗಿತ್ತು.
ಹಾಲು ಒಕ್ಕೂಟಗಳು ನಷ್ಟದಲ್ಲಿರಲು ಅವುಗಳ ಚುಕ್ಕಾಣಿ ಹಿಡಿಯುವ ನಿರ್ದೇಶಕರು ಹಾಗೂ ಅಧ್ಯಕ್ಷರ, ಅಧಿಕಾರಿಗಳ ಅವ್ಯವಹಾರಗಳೇ ಕಾರಣ. ಈ ವಿಚಾರದಲ್ಲಿ ಒಂದು ಒಕ್ಕೂಟದೊಂದಿಗೆ ಮತ್ತೊಂದು ಒಕ್ಕೂಟ ಪೈಪೋಟಿಗಿಳಿದಂತೆ ಅವ್ಯವಹಾರಗಳಲ್ಲಿ ತೊಡಗಿವೆ. ಇತ್ತೀಚೆಗೆ ತಾನೇ ಕೋಚಿಮುಲ್‌ನಲ್ಲಿ ಮೆಗಾ ಡೈರಿ ನಿರ್ಮಾಣ ಸಂಬಂಧ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಹಾಗಾಗಿ ಅದರ ಆಡಳಿತ ಮಂಡಳಿ ರದ್ದು ಮಾಡಿ, ಆಡಳಿತಾಧಿಕಾರಿ ನೇಮಕ ಮಾಡಬೇಕು ಎನ್ನುವ ಆರೋಪಗಳು ವ್ಯಕ್ತವಾಗಿದ್ದವು. ಬಹುತೇಕ ಎಲ್ಲ ಒಕ್ಕೂಟಗಳಲ್ಲೂ ಕಟ್ಟಡಗಳ ನಿರ್ಮಾಣ, ಶೀತಲೀಕರಣ ಕೇಂದ್ರಗಳ ಸ್ಥಾಪನೆ, ನೌಕರರ ನೇಮಕ ಇತ್ಯಾದಿಗಳಲ್ಲಿ ಅವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಅವನ್ನು ಹಾಗೆಯೇ ಮುಚ್ಚಿಹಾಕಲಾಗುತ್ತದೆ. ಅದರಿಂದಾದ ನಷ್ಟವನ್ನು ಮಾತ್ರ ಕೊನೆಗೆ ರೈತರ ತಲೆಗೆ ಕಟ್ಟಲಾಗುತ್ತದೆ.
ಹಲವು ಸಮಸ್ಯೆಗಳಿಂದಾಗಿ ಕರ್ನಾಟಕ ಹಾಲು ಒಕ್ಕೂಟದ ಅಡಿಯಲ್ಲಿ ಬರುವ ವಿವಿಧ ಒಕ್ಕೂಟಗಳು 90 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿವೆ ಎಂದು ಬಹುಕಾಲ ಕೆಎಂಎಫ್ ಅಧ್ಯಕ್ಷರಾಗಿದ್ದ ಎಚ್ ಡಿ ರೇವಣ್ಣ ಕೆಲವು ತಿಂಗಳ ಹಿಂದೆ ಆರೋಪಿಸಿದ್ದರು.
ಹಸಿರು ಹುಲ್ಲಿನ ಕೊರತೆ, ಚರ್ಮ ಗಂಟು ರೋಗ, ಪಶು ಆಹಾರ ದರದ ಹೆಚ್ಚಳ ಮುಂತಾದವುಗಳ ಕಾರಣದಿಂದ ಹಾಲಿನ ಉತ್ಪಾದನಾ ದರ ವರ್ಷದಿಂದ ವರ್ಷಕ್ಕೆ ವಿಪರೀತ ಹೆಚ್ಚಳವಾಗುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಹಾಲಿನ ದರ ಏರಿಕೆಯಾಗುತ್ತಿಲ್ಲ. ಆಗೀಗ ಸರ್ಕಾರ ದೊಡ್ಡ ಮನಸ್ಸು ಮಾಡಿ ಏರಿಕೆ ಮಾಡಿದರೂ ಒಕ್ಕೂಟಗಳ ಕಳ್ಳಾಟದಿಂದ ಅದು ರೈತರಿಗೆ ಸಿಗುವುದಿಲ್ಲ. ಇತ್ತ ಗ್ರಾಹಕರಿಗಾದರೂ ಪ್ರಯೋಜನವಾಗುತ್ತಿದೆಯೇ ಎಂದು ನೋಡಿದರೆ, ಸರ್ಕಾರ ಮೂರು ರೂಪಾಯಿ ಹೆಚ್ಚಿಸಲು ಅನುಮತಿ ನೀಡಿದರೆ, ಚಿಲ್ಲರೆಯ ನೆಪ ಹೇಳಿ ಕೆಎಂಎಫ್ ಲೀಟರ್‌ಗೆ ನಾಲ್ಕರಿಂದ ಐದು ರೂಪಾಯಿ ಹೆಚ್ಚಿಸಿದೆ. ಅದರ ಬಗ್ಗೆ ಗ್ರಾಹಕ ವಲಯದಲ್ಲಿ ಟೀಕೆಗಳೂ ವ್ಯಕ್ತವಾದವು. ಕೆಎಂಎಫ್ ರೈತರಿಂದ ಹಾಲು ಕೊಳ್ಳುವುದಕ್ಕೂ ಗ್ರಾಹಕರಿಗೆ ಮಾರುವುದಕ್ಕೂ ಲೀಟರ್‌ಗೆ ಸುಮಾರು 10 ರೂಪಾಯಿ ವ್ಯತ್ಯಾಸವಿದೆ. ಆದರೂ ಬಹುತೇಕ ಒಕ್ಕೂಟಗಳು ನಷ್ಟದಲ್ಲಿವೆ ಎಂದರೆ, ಅದಕ್ಕೆ ಕಾರಣ ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಅಧಿಕಾರಿಗಳೇ.
ಕೆಎಂಎಫ್ ಹಾಲು ಗುಣಮಟ್ಟದಿಂದ ಕೂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಚೆನ್ನಾಗಿದೆ. ಆದರೆ, ತಾನು ಸಂಗ್ರಹಿಸುವ ಹಾಲಿಗೆ ಮಾರುಕಟ್ಟೆಯನ್ನು ರೂಪಿಸುವಲ್ಲಿ ಕೆಎಂಎಫ್ ದಾರುಣವಾಗಿ ಸೋತಿದೆ. ಕೆಎಂಎಫ್ ಎಂದೂ ಈ ವಿಚಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದೇ ಇಲ್ಲ. ಇದರ ಪರಿಣಾಮವಾಗಿ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ರಾಸುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಕುಸಿತವಾಗುತ್ತಿದೆ. ಹಾಲು ಮತ್ತು ರೇಷ್ಮೆಯ ನಾಡು ಎಂದೇ ಹೆಸರಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2019ರಲ್ಲಿ ಹಸುಗಳು ಎಮ್ಮೆಗಳು ಸೇರಿ ಒಟ್ಟು 2,40,212 ರಾಸುಗಳಿದ್ದವು. 2022ರ ಹೊತ್ತಿಗೆ ಜಿಲ್ಲೆಯ ರಾಸುಗಳ ಸಂಖ್ಯೆ 1,77,809ಕ್ಕೆ ಇಳಿದಿದೆ. ಅಂದರೆ, 67 ಸಾವಿರ ರಾಸುಗಳು ಕಡಿಮೆಯಾಗಿವೆ ಎಂದು ಒಂದು ವರದಿ ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ದಿನಕ್ಕೆ 3.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ ಅದು 3 ಲಕ್ಷ ಲೀಟರ್‌ಗೆ ಕುಸಿದಿದೆ. ರಾಜ್ಯದ ಇತರೆ ಭಾಗಗಳ ರೈತರ ಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ರೈತರು ಹೈನುಗಾರಿಕೆ ತ್ಯಜಿಸಿ ಹೂವಿನ ಬೇಸಾಯ ಸೇರಿದಂತೆ ಇತರೆ ಪರ್ಯಾಯ ಬೆಳೆ, ಉಪಕಸುಬುಗಳ ಮೊರೆ ಹೋಗುತ್ತಿದ್ದಾರೆ.
ರೈತಪರ ಕಾಳಜಿಯ ಸಿದ್ದರಾಮಯ್ಯನವರು ಕೆಎಂಎಫ್ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ. ಕೆಎಂಎಫ್ ಉಳಿವು ಕೇವಲ ರೈತರ ದೃಷ್ಟಿಯಿಂದ ಮಾತ್ರವಲ್ಲದೆ ರಾಜ್ಯದ ಗ್ರಾಹಕರ ದೃಷ್ಟಿಯಿಂದ ಮತ್ತು ಜನರ ಆರೋಗ್ಯದ ದೃಷ್ಟಿಯಿಂದಲೂ ಮುಖ್ಯವಾಗಿದೆ. ಮುಖ್ಯವಾಗಿ, ರಾಜ್ಯದಲ್ಲಿ ಉತ್ಪಾದನೆಯಾಗುವ ಹಾಲಿಗೆ ಮಾರುಕಟ್ಟೆ ಹುಡುಕುವುದು, ಅವ್ಯವಹಾರಗಳನ್ನು ತಡೆಯುವುದು, ಕೆಎಂಎಫ್ ಆಡಳಿತದಲ್ಲಿ ದಕ್ಷತೆ ತರುವುದು ಆಗಬೇಕಿದೆ. ಅದರಷ್ಟೇ ಮುಖ್ಯವಾಗಿ ರೈತರು ಉತ್ಪಾದಿಸಿದ ಹಾಲಿಗೆ ಉತ್ತಮ ಬೆಲೆ ಸಿಗಬೇಕಿದೆ. ಅದನ್ನು ಖಾತರಿ ಮಾಡುವ ಜವಾಬ್ದಾರಿ ಸರ್ಕಾರದ್ದು.