ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಬಹುತೇಕ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಜನರ ಆತಂಕದಲ್ಲಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಕರ್ನಾಟಕಕ್ಕೆ ಹೊಂದಿರುವ ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ, ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣ, ಪಂಚಗಂಗಾ, ದೂಧಗಂಗಾ, ಘಟಪ್ರಭ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣ ನದಿಯು ತುಂಬಿ ಹರಿಯುತ್ತಿದ್ದು, ನದಿಗೆ ಮೇಲೆ ನಿರ್ಮಿಸಲಾಗಿರುವ ರಾಜ್ಯ ಹೆದ್ದಾರಿಯ ಸೇತುವೆ ಮುಳುಗಿದೆ. ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕೃಷ್ಣ ನದಿಗೆ ಪಂಚಗಂಗಾ ನದಿ ಸೇರುವ ಕೊಲ್ಲಾಪುರ ಜಿಲ್ಲೆಯ ನರಸಿಂಹವಾಡಿ ಜಲಾವೃತಗೊಂಡಿದೆ. ಅಲ್ಲಿನ ದತ್ತ ಮಂದಿರ ಬಹುತೇಕ ಮುಳುಗಡೆಯಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ಕೃಷ್ಣ ನದಿ ದಂಡೆಯಲ್ಲಿರುವ ದತ್ತ ಮಂದಿರ ಕೂಡ ಭಾಗಶಃ ಮುಳುಗಿದೆ. ಎದೆವರೆಗೆ ತುಂಬಿರುವ ನೀರಿನಲ್ಲಿಯೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿದೆ.
ಇನ್ನು, ಖಾನಾಪುರ ಪ್ರದೇಶದಲ್ಲಿ ಮಳೆ-ಗಾಳಿ ಅಬ್ಬರ ಜೋರಾಗಿದೆ. ನಂದಗಡ ಗ್ರಾಮದಲ್ಲಿ ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿದ್ದ ಬೃಹತ್ ಮರವೊಂದು ಶಾಲಾ ಕಟ್ಟಡದ ಮೇಲೆ ಬಿದ್ದಿದೆ. ಕಟ್ಟಡಕ್ಕೆ ತೀವ್ರ ಹಾನಿಯಾಗಿದೆ. ಸದ್ಯ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೃಷ್ಣ ನದಿ ತುಂಬಿ ಹರಿಯುತ್ತಿರುವ ಪರಿಣಾಮ, ನದಿ ತಟದಲ್ಲಿರುವ ಬಾಗಲಕೋಟೆ, ಮಹಾಲಿಂಗಪುರ, ಉಗಾರ, ಕುಡಚಿ ಪ್ರದೇಶಗಳಲ್ಲಿ ನದಿಗೆ ನಿರ್ಮಿಸಲಾಗಿರುವ ಹಲವಾರು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಸಂಚಾರಕ್ಕೆ ಅಡ್ಡಿಯಾಗಿದೆ. ಚಿಕ್ಕೋಡಿ ಭಾಗದಲ್ಲಿಯೇ ಮೂರು ದಿನದಲ್ಲಿ ಹತ್ತು ಸೇತುವೆಗಳು ಮುಳುಗಿವೆ ಎಂದು ವರದಿಯಾಗಿದೆ.