ಭಾರತದ ಜೊತೆಗಿನ ವ್ಯಾಪಾರ ಮಾತುಕತೆಗಳಲ್ಲಿ ಯಾವುದೇ ಪ್ರಗತಿ ಕಂಡಿಲ್ಲವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರಗೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಮೇಲೆ ವಿಧಿಸಲಾದ 25%ರಷ್ಟು ಸುಂಕವು ಪರಿಸ್ಥಿತಿಯನ್ನು ನಿಭಾಯಿಸಲು ಪರಿಹಾರ ಒದಗಿಸುತ್ತದೆ ಎಂದು ಶ್ವೇತಭವನದ ಆರ್ಥಿಕ ಸಲಹೆಗಾರರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅಮೆರಿಕದ ರಾಷ್ಟ್ರೀಯ ಆರ್ಥಿಕ ಪರಿಷತ್ತಿನ ನಿರ್ದೇಶಕ ಕೆವಿನ್ ಹ್ಯಾಸೆಟ್, ”ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಎರಡು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ, ಎರಡೂ ವಿಫಲವಾಗಿವೆ. ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ಜೊತೆ ಯುದ್ಧದಲ್ಲಿರುವ ರಷ್ಯಾ ಮೇಲೆ ಅಮೆರಿಕ ಮತ್ತು ನ್ಯಾಟೋ ನಿರ್ಬಂಧ ಹೇರಿವೆ. ನಿರ್ಬಂಧದ ಹೊರತಾಗಿಯೂ ಭಾರತವು ರಷ್ಯಾದಿಂದ ಕಚ್ಚಾತೈಲ ಮತ್ತು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಿದೆ. ಈ ಖರೀದಿಯನ್ನು ತಡೆಯಲು ಅಮೆರಿಕ ಹವಣಿಸುತ್ತಿದ್ದು, ಆಗಸ್ಟ್ 1ರಿಂದ ಭಾರತದ ಮೇಲೆ 25% ತೆರಿಗೆ ಮತ್ತು ದಂಡ ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ವಿಪಕ್ಷಗಳ ಗಂಭೀರ ಪ್ರಶ್ನೆಗಳಿಗೆ ಮೋದಿ ನಿರುತ್ತರ!
ಈ ಸುಂಕ ಹೇರಿಕೆಯ ಹಿಂದೆ, ರಷ್ಯಾ ಜೊತೆಗಿನ ಭಾರತದ ವ್ಯಾಪಾರ ಸಂಬಂಧವನ್ನು ತಡೆಯುವುದು ಮಾತ್ರವಲ್ಲದೆ, ಭಾರತವು ತನ್ನೆಲ್ಲ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಮಾಡುವ ಅಮೆರಿಕದ ಹುನ್ನಾರವೂ ಇದೆ ಎಂದು ಹೇಳಲಾಗಿದೆ.
ಈ ಹಿಂದೆ, ಜಪಾನ್, ಬ್ರಿಟನ್ ಹಾಗೂ ಯೂರೋಪಿಯನ್ ಒಕ್ಕೂಟದ ವಿರುದ್ಧವೂ ಟ್ರಂಪ್ ಇದೇ ರೀತಿಯ ತಂತ್ರಗಳನ್ನು ಬಳಸಿದ್ದರು.