ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ‘ನಮ್ಮ ಬಸ್ ನಿಲ್ದಾಣ, ಸ್ವಚ್ಛ ನಿಲ್ದಾಣ’ ಅಭಿಯಾನದಲ್ಲಿ ಅಂಕೋಲಾ ಬಸ್ ನಿಲ್ದಾಣವು ‘ಬಿ’ ವರ್ಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಮೇ ಮತ್ತು ಜೂನ್ 2025ರ ತಿಂಗಳುಗಳಲ್ಲಿ ನಡೆಸಲಾದ ಈ ಅಭಿಯಾನದಲ್ಲಿ ಪ್ರಯಾಣಿಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ನೀಡಿದ ವರದಿಗಳು ಮತ್ತು ವಾಸ್ತವಿಕ ಪರಿಶೀಲನೆಯ ಆಧಾರದ ಮೇಲೆ ಈ ಆಯ್ಕೆ ಮಾಡಲಾಗಿದೆ.
ಅಂಕೋಲಾ ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿ ಅವರು ಪತ್ರಿಕಾ ಹೇಳಿಕೆ ನೀಡಿ, ಈ ಸಾಧನೆಯು ಅಂಕೋಲಾ ನಾಗರಿಕರಿಗೆ ಸಂತಸ ತಂದಿದೆ ಎಂದು ತಿಳಿಸಿದ್ದಾರೆ. ಬಸ್ ನಿಲ್ದಾಣದ ಸ್ವಚ್ಛತೆಗೆ ಸಂಪೂರ್ಣ ಬೆಂಬಲ ನೀಡಿದ ಕಾರವಾರ-ಅಂಕೋಲಾ ಶಾಸಕ ಸತೀಶ ಸೈಲ್, ಎಲ್ಲ ತಾಲ್ಲೂಕು ಅಧಿಕಾರಿಗಳು, ಎಲೆ ಮರೆಯ ಕಾಯಿಯಂತೆ ಕೆಲಸ ಮಾಡಿದ ಸಾಮಾಜಿಕ ಕಾರ್ಯಕರ್ತರು, ರಚನಾತ್ಮಕ ಸಲಹೆ ನೀಡಿದ ಪತ್ರಕರ್ತರು ಮತ್ತು ಜವಾಬ್ದಾರಿಯುತ ಅಂಕೋಲಾ ನಾಗರಿಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ | ನಿರ್ವಹಣೆ ಕೊರತೆ; ಹಳ್ಳಕ್ಕೆ ಬಿದ್ದ ಸರ್ಕಾರಿ ಬಸ್, ಸಾರ್ವಜನಿಕರ ಆಕ್ರೋಶ
ಈ ಅಭಿಯಾನದಲ್ಲಿ ಅಂಕೋಲಾ ಪ್ರಥಮ ಸ್ಥಾನ ಪಡೆದರೆ, ಹುಕ್ಕೇರಿ ಮತ್ತು ಬ್ಯಾಡಗಿ ಬಸ್ ನಿಲ್ದಾಣಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿವೆ ಎಂದು ತಿಳಿದುಬಂದಿದೆ. ಈ ಸಾಧನೆಗೆ ಸಹಕರಿಸಿದ ಅಂಕೋಲಾದ ಸಮಸ್ತ ನಾಗರಿಕರಿಗೆ ಸಾರಿಗೆ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.