ಮುಸ್ಲಿಂ ಯುವಕನೊಬ್ಬನ ಮೃತದೇಹವನ್ನು ಆತನ ಕುಟುಂಬಸ್ಥರಿಗೂ ತಿಳಿಸದೆ ಪೊಲೀಸರು ಸುಟ್ಟು ಹಾಕಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಪೊಲೀಸರ ನಡೆಗೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಸ್ಮಾಯಿಲ್ (20) ಎಂಬ ಯುವಕನ ಮೃತದೇಹವನ್ನು ಜೋಧ್‌ಪುರದ ಗುಲಾಬ್ ಸಾಗರ್ ಪ್ರದೇಶದಲ್ಲಿ ಪೊಲೀಸರು ಸುಟ್ಟುಹಾಕಿದ್ದಾರೆ. ಆತನ ಮೃತದೇಹವನ್ನು ಕುಟುಂಸ್ಥರಿಗೆ ಹಸ್ತಾಂತರಿಸದೆ, ʼವಾರಸುದಾರರಿಲ್ಲದ ಮೃತದೇಹʼ ಎಂದು ಹೇಳಿ ಪೊಲೀಸರು ದಹಿಸಿದ್ದಾರೆ. ತಮ್ಮ ಮಗನ ಮೃತದೇಹವನ್ನು ಮುಸ್ಲಿಂ ಸಂಪ್ರದಾಯದಂತೆ ಅಂತ್ರಕ್ರಿಯೆ ಮಾಡಲು ಅವಕಾಶ ನೀಡಿಲ್ಲ ಎಂದು ಇಸ್ಮಾಯಿಲ್ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮೃತ ಇಸ್ಮಾಯಿಲ್ ಅವರು ಜೋಧ್‌ಪುರದ ಚಿಮನ್ಪುರ ಗಲಿ-4ರಲ್ಲಿ ವಾಸಿಸುತ್ತಿದ್ದರು. ಅವರು ಜೂನ್ 17ರಂದು ನಾಪತ್ತೆಯಾಗಿದ್ದರು. ಆತನಿಗಾಗಿ ಹುಡುಕಾಟ ನಡೆಸಿದ ಕುಟುಂಬಸ್ಥರು, ಆತ ಪತ್ತೆಯಾಗದಿದ್ದಾಗ, ಜೂನ್ 20ರಂದು ಸದರ್ ಬಝಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಮರುದಿನ, (ಜೂನ್ 21) ಗುಲಾಬ್ ಸಾಗರ್ ಬಳಿ ಯುವಕನೋರ್ವನ ಮೃತದೇಹ ಪತ್ತೆಯಾಗಿತ್ತು. ಆ ಮೃತದೇಹವನ್ನು ಸದರ್ ಕೊತ್ವಾಲಿಯ ಮಹಾತ್ಮ ಗಾಂಧಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿತ್ತು. ಜೂನ್ 25ರಂದು ಸದರ್ ಕೊತ್ವಾಲಿ ಪೊಲೀಸರು ಮೃತದೇಹವನ್ನು ಸುಟ್ಟುಹಾಕಿದ್ದರು.
ಇಸ್ಮಾಯಿಲ್ ನಾಪತ್ತೆಯಾಗಿರುವ ಬಗ್ಗೆ ಸದರ್ ಬಝಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಸದರ್ ಕೊತ್ವಾಲಿ ಠಾಣಾ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಪೊಲೀಸರ ನಡುವೆ ಸಮನ್ವಯದ ಕೊರತೆಯಿಂದಾಗಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಆಪರೇಷನ್ ಸಿಂಧೂರ | ವಿಪಕ್ಷಗಳ ಗಂಭೀರ ಪ್ರಶ್ನೆಗಳಿಗೆ ಮೋದಿ ನಿರುತ್ತರ!
ಜೂನ್ 26ರಂದು ಇಸ್ಮಾಯಿಲ್ ಕುಟುಂಬಸ್ಥರಿಗೆ ಮೃತದೇಹೊಂದು ಪತ್ತೆಯಾದ ಬಗ್ಗೆ ಮಾಹಿತಿ ದೊರೆತಿತ್ತು. ಆ ಮೃತದೇಹ ಇಸ್ಮಾಯಿಲ್ ಅವರದ್ದೇ ಆಗಿರಬಹುದು ಎಂದು ಅನುಮಾನಿಸಿದ ಕುಟುಂಬಸ್ಥರು, ಪೊಲೀಸರನ್ನು ವಿಚಾರಿಸಿದ್ದಾರೆ. ಇಸ್ಮಾಯಿಲ್‌ನಿಂದ ಪೊಲೀಸರು ಪಡೆದಿದ್ದ ಡಿಎನ್‌ಎ ಮಾದರಿ ಮತ್ತು ಇಸ್ಮಾಯಿಲ್ ತಾಯಿ ಮಲ್ಕಾ ಅವರ ಡಿಎನ್‌ಎ ಮಾದರಿಯನ್ನು ಪರೀಕ್ಷಿಸಿದಾಗ, ಎರಡೂ ಮಾದರಿಗಳಿಗೆ ಹೊಂದಿಕೆಯಾಗಿದ್ದು, ಅದು ಇಸ್ಮಾಯಿಲ್ ಅವರ ಮೃತದೇಹ ಎಂಬುದು ದೃಢಪಟ್ಟಿದೆ.
ಪೊಲೀಸರು ಮೃತದೇಹದ ವಾರಸುದಾರರನ್ನು ಪತ್ತೆ ಹಚ್ಚದೆ, ತಾವೇ ಯುವಕನ ಮೃತದೇಹವನ್ನು ಸುಟ್ಟುಹಾಕಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.