ಅಮೆರಿಕ ಪೂರ್ವ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಜೊತೆಗೆ ಸುಂಟರಗಾಳಿ ಬೀಸುವ ಮುನ್ಸೂಚನೆ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ 2600 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಎಚ್ಚರಿಕೆ ಕ್ರಮವಾಗಿ ವಾಷಿಂಗ್ಟನ್ ಡಿಸಿಯಲ್ಲಿ ಸರ್ಕಾರಿ ಕಚೇರಿಗಳನ್ನು ಸೋಮವಾರ ಮುಂಜಾನೆ ಮುಚ್ಚಲಾಗಿದೆ. ಗುಡುಗು ಮತ್ತು ಬಿರುಗಾಳಿಯಿಂದ ಈ ಪ್ರದೇಶದಲ್ಲಿ ನೂರಾರು ಮರಗಳು ನೆಲಕ್ಕುರುಳಿವೆ.
ಮೇರಿಲ್ಯಾಂಡ್ ಮತ್ತು ವರ್ಜೀನಿಯಾದಲ್ಲಿ ಸುಮಾರು 200,000 ಮನೆಗಳಿಗೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ದಕ್ಷಿಣ ಮತ್ತು ಮಧ್ಯ ಅಟ್ಲಾಂಟಿಕ್ ರಾಜ್ಯಗಳಲ್ಲಿ ಸುಮಾರು 800,000 ಗ್ರಾಹಕರು ವಿದ್ಯುತ್ ಕಡಿತದಿಂದ ತೊಂದರೆಗೊಳಗಾಗಿದ್ದಾರೆ.
ಚಂಡಮಾರುತದ ಕಾರಣದಿಂದಾಗಿ ಅಲಬಾಮಾದಿಂದ ಪಶ್ಚಿಮ ನ್ಯೂಯಾರ್ಕ್ ರಾಜ್ಯದವರೆಗೆ 3 ಕೋಟಿಗಿಂತಲೂ ಹೆಚ್ಚು ಜನರು ಅಪಾಯದಲ್ಲಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಹವಾಮಾನ ಸೇವೆ ತಿಳಿಸಿದೆ.
ಕಳೆದ ಕೆಲ ದಿನಗಳಿಂದ ವಾಷಿಂಗ್ಟನ್ ಡಿಸಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಸಾಕಷ್ಟು ಅನಾಹುತಗಳು ಸಂಭವಿಸಿವೆ. ಚಂಡಮಾರುತ ಬೀಸುವ ಹಿನ್ನೆಲೆಯಲ್ಲಿ ನಿವಾಸಿಗಳು ಮನೆಯಿಂದ ಹೊರಬರದೇ, ಮನೆಯೊಳಗೇ ಸುರಕ್ಷಿತವಾಗಿ ಇರುವಂತೆ ಸೂಚನೆ ನೀಡಲಾಗಿದೆ.
ಅಲ್ಲದೆ ಕೆಲವೊಂದು ಪ್ರದೇಶಗಳಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನೂ ಕೂಡ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.
ಚಂಡಮಾರುತದ ಭೀತಿಯಿಂದ ನ್ಯೂಯಾರ್ಕ್ ನಗರ, ಫಿಲಡೆಲ್ಫಿಯಾ, ವಾಷಿಂಗ್ಟನ್ ಡಿಸಿ, ಚಾರ್ಲೆಟ್ ಮತ್ತು ಅಟ್ಲಾಂಟಾದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಗಾಳಿ, ಮಳೆ, ಮಿಂಚು ಸಹಿತ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ವಾಷಿಂಗ್ಟನ್ ಡಿಸಿಯ ಎಲ್ಲ ಸರ್ಕಾರಿ ಕಚೇರಿಗಳನ್ನು ಸೋಮವಾರ (ಆಗಸ್ಟ್ 07) ಮಧ್ಯಾಹ್ನವೇ ಮುಚ್ಚಲಾಯಿತು. ಜೊತೆಗೆ ಕೆಲಸ ಸ್ಥಗಿತಗೊಳಿಸಿ ಮನೆಗಳಿಗೆ ತೆರಳುವಂತೆ ಎಲ್ಲ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.