ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನಗಳ ಅನುಷ್ಠಾನಕ್ಕೆ ಎಸ್‌ಸಿ ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಮೀಸಲಿಟ್ಟಿರುವ ಹಣವನ್ನು ಬಳಸಬಾರದೆಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಪ್ರತಿಭಟನೆಯ ನೇತೃತ್ವವಹಿಸಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಅಧ್ಯಕ್ಷ ಡಾ.ವೆಂಕಟಾಚಲಪತಿ ಮಾತನಾಡಿ, “ಪ್ರಸ್ತುತ ಸಾಲಿನ ಬಜೆಟ್ ನಲ್ಲಿ ದಲಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲು ಇಟ್ಟಿದ್ದ 42 ಸಾವಿರ ಕೋಟಿ ರೂಪಾಯಿಗಳಲ್ಲಿ ಗ್ಯಾರೆಂಟಿ ಯೋಜನೆಗಳಿಗೆ ಸುಮಾರು 11 ಸಾವಿರ ಕೋಟಿ ರೂಪಾಯಿಗಳನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ
ನಡೆಸುತ್ತಿರುವುದು ಖಂಡನೀಯ. ಯಾವುದೇ ಕಾರಣಕ್ಕೂ ದಲಿತರಿಗೆ ಮೀಸಲು ಇಟ್ಟಿರುವ ಹಣವನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಬಾರದು. ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯಗಳನ್ನು ಗೌರವಿಸಿ ದಲಿತರಿಗೆ ಮೀಸಲು ಇಟ್ಟಿರುವ ಹಣವನ್ನು ದಲಿತ ಸಮುದಾಯಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕೆಂದು” ಅವರು ಒತ್ತಾಯಿಸಿದರು.
ಇದನ್ನೂ ಓದಿ: ಕೋಲಾರ | ಸರ್ಕಾರಗಳು ರೈತರ ಕಾಲು ಹಿಡಿಯುವ ಪರಿಸ್ಥಿತಿ ಬರಲಿದೆ: ಶಾಸಕ ಕೊತ್ತೂರು ಮಂಜುನಾಥ್
ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ, ಜಿಲ್ಲಾ ಕಾರ್ಯದರ್ಶಿ ವಿಜಯಕುಮಾರ್, ಮುಖಂಡರುಗಳಾದ ಶೇಷನ್, ಗೋಪಾಲ್, ವೇಣು ಗೋಪಾಲ್, ಖಾದೀರ್ ಬಾಷಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.