- ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
- ಪದೇಪದೆ ಲಕ್ಷಾಂತರ ಹಣಕ್ಕೆ ಬೇಡಿಕೆ ಇಟ್ಟ ಆರೋಪಿಗಳು
ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ ₹6.8 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣ ಕಳೆದುಕೊಂಡ 58 ವರ್ಷದ ಅಧಿಕಾರಿ ಮೂಲತಃ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿದ್ದು, ಅವರು ಜೂ.12 ರಂದು ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಅತಿಥಿ ಗೃಹದಲ್ಲಿದ್ದರು. ಅಲ್ಲಿ, ಸ್ನಾನ ಮುಗಿಸಿ ಹೊರ ಬಂದಾಗ ಅವರಿಗೆ ವಿಡಿಯೋ ಕಾಲ್ ಬಂದಿದೆ. ಕರೆಗೆ ಅವರು ಉತ್ತರಿಸಿದ್ದು, ಕರೆ ಮಾಡಿದ್ದ ಮಹಿಳೆ ಕರೆಯ ಸಂಭಾಷಣೆ ಮತ್ತು ವಿಡಿಯೋವನನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ.
ಮರುದಿನ ಓರ್ವ ಅಪರಿಚಿತ ವ್ಯಕ್ತಿ ಅಧಿಕಾರಿಗೆ ಕರೆ ಮಾಡಿದ್ದಾನೆ. ಆದರೆ, ಅಧಿಕಾರಿ ಕರೆ ಸ್ವೀಕರಿಸಿಲ್ಲ. ಪದೇಪದೆ ಕರೆ ಬಂದ ಕಾರಣ ಕರೆಯನ್ನು ಸ್ವೀಕರಿಸಿದ್ದಾರೆ. ಈ ವೇಳೆ, ಆ ಅಪರಿಚಿತ ವ್ಯಕ್ತಿ ತಾನೂ ಮಹೇಂದ್ರ ಸಿಂಗ್ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ವರದಿಗಾರ ಎಂದು ಹೇಳಿಕೊಂಡಿದ್ದಾನೆ.
ಬಳಿಕ ಓರ್ವ ಮಹಿಳೆ ನಿಮ್ಮ ಬಗ್ಗೆ ದೂರು ನೀಡಿದ್ದಾರೆ. ನೀವು ಮಹಿಳೆಯೊಂದಿಗೆ ವಿಡಿಯೋ ಕಾಲ್ನಲ್ಲಿ ಅನುಚಿತವಾಗಿ ವರ್ತಿಸಿದ್ದೀರಿ. ನಿಮ್ಮ ವಿಡಿಯೋ ನಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಬಳಿಕ ನಾವು ಕೇಳಿದಷ್ಟು ಹಣ ನೀಡಿ, ಇಲ್ಲದಿದ್ದರೆ, ನಿಮ್ಮ ವಿಡಿಯೋ ಅನ್ನು ಯೂಟ್ಯೂಬ್ ಹಾಗೂ ಫೇಸ್ ಬುಕ್ನಲ್ಲಿ ಹರಿಬಿಡುವುದಾಗಿ ಹೆದರಿಸಿದ್ದಾನೆ. ಹಣ ನೀಡಿದರೆ ವಿಡಿಯೋ ಡಿಲಿಟ್ ಮಾಡುವುದಾಗಿ ಹೇಳಿದ್ದನು ಎಂದು ಅಧಿಕಾರಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿದ್ಯುತ್ ಬಿಲ್ ಜಾಸ್ತಿ ಬಂತೆಂದು ಮೀಟರ್ ರೀಡರ್ ಮೇಲೆ ಹಲ್ಲೆ; ದೂರು ದಾಖಲು
ಬಳಿಕ ಹೆದರಿದ ಅಧಿಕಾರಿ ಮೊದಲಿಗೆ ₹1.5 ಲಕ್ಷ ಹಣ ನೀಡಿದ್ದಾರೆ. ನಂತರ ₹50 ಸಾವಿರ ಆರೋಪಿ ಹೇಳಿದ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಬಳಿಕ ಜು.14ರಂದು ಕರೆ ಮಾಡಿ ಮತ್ತೆ ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟು ₹2 ಲಕ್ಷ ಹಾಗೂ ₹2.8 ಲಕ್ಷ ವರ್ಗಾಯಿಸುವಂತೆ ಒತ್ತಾಯಿಸಿದ್ದಾನೆ. ಒಟ್ಟು ₹6.8 ಲಕ್ಷ ಹಣವನ್ನು ಅಧಿಕಾರಿಯಿಂದ ವಂಚಕರು ಸುಲಿಗೆ ಮಾಡಿದ್ದಾರೆ.
ಮತ್ತೆ ಅದೇ ದಿನ ಕರೆ ಮಾಡಿ ₹7.2 ಲಕ್ಷ ನೀಡುವಂತೆ ಕೇಳಿದ್ದಾರೆ. ಇದಕ್ಕೆ ಅಧಿಕಾರಿ ನಗರ ಪೊಲೀಸ್ ಕಮಿಷನರ್ ಅವರಿಗೆ ತಿಳಿಸಿ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.