ಇತ್ತೀಚಿನ ದಿನಗಳಲ್ಲಿ ಮತ್ತೊಬ್ಬರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವೇಕೆ ಭಾಗಿಯಾಗಬೇಕು ಎಂಬ ಮನಸ್ಥಿತಿ ಹೆಚ್ಚಾಗಿದೆ. 20ನೇ ಶತಮಾನದಲ್ಲಿ ನಡೆಯುತ್ತಿದ್ದ ಸಂಘಟನೆ, ಚಳವಳಿ ಹಾಗೂ ಹೋರಾಟದ ಸ್ವರೂಪ ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಆ ಚಳವಳಿಗಳು ಮರುಕಳಿಸಬೇಕಿದೆ ಎಂದು ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ. ಹೆಚ್ ವಿ ವಾಸು ಹೇಳಿದರು.
ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಭತ್ತ ವೈವಿಧ್ಯ ಕೇಂದ್ರದಲ್ಲಿ ನಡೆದ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಅವರು, ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ವಿಚಾರಗೋಷ್ಠಿಯ ಭಾಗವಾಗಿ ಸಂಘಟನೆ ಮತ್ತು ಅಭಿವೃದ್ಧಿಗೆ ರಾಜಕೀಯದ ಹೊಸ ದಾರಿಗಳು ಎಂಬ ವಿಚಾರ ಮಂಡಿಸಿದರು.

“ಇನ್ನು ಧರಣಿ, ಪ್ರತಿಭಟನೆಗಳ ಬಗ್ಗೆ ಇತರ ಸಾರ್ವಜನಿಕರು ತಲೆಕೆಡಿಸಿಕೊಳ್ಳುವ ಸ್ಥಿತಿ ಈಗಿಲ್ಲ. ರಾಜಕೀಯ ಪಕ್ಷಗಳು, ಅಧಿಕಾರದಲ್ಲಿರುವವರು, ಧರಣಿ ಪ್ರತಿಭಟನೆಗಳು ನಡೆಯದಂತೆ ಸಮಸ್ಯೆಗಳನ್ನು ಬಗೆಹರಿಸಬೇಕಾದವರೇ ಧರಣಿ-ಪ್ರತಿಭಟನೆಗಳಿಗೆ ಅನುಮತಿ ನೀಡುವುದು, ಟೆಂಟ್ ಹಾಕಿಸಿಕೊಡುವುದೂ ಮಾಡಿಕೊಂಡು ಬರುತ್ತಿದ್ದಾರೆ. ಧರಣಿ, ಪ್ರತಿಭಟನೆಗಳು ಸಿದ್ದ ಪಡಿಸಿದ ರೀತಿಯಲ್ಲಿ ನಡೆಯುತ್ತಿದ್ದು, ಈ ರೀತಿಯ ಮನಸ್ಥಿತಿ ಬದಲಾಗಬೇಕಿದೆ. ಗುರಿ ಮತ್ತು ಉದ್ದೇಶ ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೋರಾಟಗಳು ಹೊಸಬರೊಂದಿಗೆ ಪ್ರಾರಂಭವಾಗಬೇಕಿದೆ” ಎಂದರು.
“ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧವಾಗಿ ನಡೆಸಿದ ಹೋರಾಟದ ರೀತಿಯಲ್ಲಿ ರೈತರ ಪರವಾಗಿ ಹೋರಾಟಗಳು ಸಜ್ಜುಗೊಳ್ಳಬೇಕಿದೆ. ಅಲ್ಲದೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಶಾಸನಗಳನ್ನು ಬದಲಿಸುವ, ಬರೆಯುವ ಸ್ಥಾನದಲ್ಲಿರುವ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಅಂಶವನ್ನು ಮನದಟ್ಟು ಮಾಡಿಸುವ ಕೆಲಸ ರೈತರಿಂದಲೇ ಆಗಬೇಕಿದೆ” ಎಂದರು.
ಇದನ್ನೂ ಓದಿ: ಮಂಡ್ಯ | ಲಂಚ ಪಡೆವಾಗ ಲೋಕಾಯುಕ್ತ ಬಲೆಗೆ ಮೂವರು ನೌಕರರು
“ಕೃಷಿಯಲ್ಲಿ ತೊಡಗಿಸಿಕೊಂಡಿರುವವರು ಎಂದಿಗೂ ಲಾಭ ಪಡೆಯಬಾರದು ಎಂಬ ಕಾಣದ ನಿಲುವುಗಳು ಕೃಷಿಗೆ ವಿರುದ್ಧವಾಗಿಯೇ ನಡೆದುಕೊಂಡು ಬರುತ್ತಿವೆ. ಕೃಷಿ ಸಾಲವನ್ನು ಕನಿಷ್ಠ 2 ರಿಂದ 3ವರ್ಷಗಳಿಗೊಮ್ಮೆ ಮನ್ನ ಮಾಡಬೇಕು ಎಂಬ ಮಾತುಗಳು ಈ ಹಿಂದೆ ಕೇಳಿಬರುತ್ತಿದ್ದ ಉದ್ದೇಶ, ಮುಂದಿನ ದಿನಗಳಲ್ಲಿಯೂ ಸಹ ಕೆಲವರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದಾಗಿತ್ತು. ಆದರೆ, ಕೃಷಿ ಎಂಬುದು ಅಧಿಕಾರ ಶಾಹಿಗಳಿಂದ ಕಡೆಗಣಿಸಲ್ಪಟ್ಟಿದ್ದು, ಈ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕಿದೆ. ರಾಜಕೀಯ ಅಧಿಕಾರ ಎಂಬುದು ಮೇಲ್ನೋಟಕ್ಕೆ ಸಾಮಾಜಿಕ ಕಳಕಳಿ ಇರುವಂತೆ ಕಂಡರೂ ವ್ಯವಹಾರಿಕ ಹಾಗೂ ವೈಯಕ್ತಿಕ ಹಿತಾಸಕ್ತಿಯ ಹಿನ್ನಲೆಯಿಂದಲೇ ನಡೆದುಕೊಂಡು ಬರುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಿ ಹೊಸ ರಾಜಕೀಯ ಸ್ವರೂಪವನ್ನು, ಸಂಘಟನೆಗಳ ಪಾಲ್ಗೊಳ್ಳುವಿಕೆಯನ್ನು ವಿಭಿನ್ನವಾಗಿ ಮಾಡಬೇಕಿದೆ. ಯಾವುದೇ ಒಂದು ವಿಚಾರವನ್ನು ಚುನಾವಣಾ ರಾಜಕಾರಣಕ್ಕೆ ಹೊಂದಿಕೊಳ್ಳುವಂತೆ ಹೋರಾಟಗಳು, ಚಳವಳಿಗಳು ನಡೆಯಬೇಕಿದ್ದು, ಇವುಗಳ ಪರಿಣಾಮ ನೇರವಾಗಿ ರಾಜಕಾರಣದ ಮೇಲೆ ಬೀರುವಂತೆ ನೋಡಿಕೊಳ್ಳಬೇಕು. ರಾಜಕಾರಣವನ್ನು ವಿಭಿನ್ನವಾಗಿ ಕಲ್ಪಿಸಿಕೊಳ್ಳುವ ಪ್ರಯತ್ನ ಆಗಬೇಕು” ಎಂದು ಹೇಳಿದರು.
“ಇನ್ನು ಹೋರಾಟಗಳು ಲೆಕ್ಕಕ್ಕೆ ಇಲ್ಲ ಎಂಬಂತೆ ಜಾತಿ ವೈರುಧ್ಯ, ಕೋಮು ಸಂಬಂಧಿತ ವಿಚಾರಗಳನ್ನು ಜನರ ಮೇಲೇರಿ ಅಧಿಕಾರ ಪಡೆಯುವ ಕೆಲಸ ಮಾಡುತ್ತಿರುವ ಆರ್.ಎಸ್.ಎಸ್ ಮತ್ತು ಬಿಜೆಪಿಯನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡುವ ಕೆಲಸವನ್ನು ರಾಜಕಾರಣವನ್ನು ಅರ್ಥಪೂರ್ಣವಾಗಿ ಮಾಡುವ ಹಾಗೂ ಬದಲಿಸುವ ಕೆಲಸವನ್ನು ಪ್ರಸ್ತುತ ಉದ್ದೇಶದಿಂದ ನಾವೆಲ್ಲರೂ ಜಾಗೃತರಾಗಿ ಸಂಘಟನೆ ಮಾಡಬೇಕಿದೆ” ಎಂದರು.