ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಎಸ್. ನಾಗೇಂದ್ರ ಮಾತನಾಡಿ ‘ ಆಗಸ್ಟ್. 2 ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಬಸವೇಶ್ವರ ವೃತ್ತದಿಂದ ನಗರ ಪೊಲೀಸ್ ಆಯುಕ್ತರ ಕಚೇರಿ ಮೂಲಕ, ಜಿಲ್ಲಾಧಿಕಾರಿ ಕಚೇರಿವರೆಗೆ ‘ ಮಾದಕ ದ್ರವ್ಯ ಮುಕ್ತ ಮೈಸೂರು ನಗರ ‘ ಜಾಥಾ ನಡೆಸಿ, ಮನವಿ ನೀಡುವುದಾಗಿ ಮಾಹಿತಿ ನೀಡಿದರು.
” ಮುಂಬೈ ನಗರದ ಸಾಕಾಸಕಿ ಠಾಣಾ ಪೊಲೀಸ್ ಅಧಿಕಾರಿಗಳು ದಿನಾಂಕ-24-04-2025 ರಂದು ಮುಂಬೈ ನಲ್ಲಿ ಮಾದಕ ದ್ರವ್ಯ ಸ್ವತ್ತು ಸಮೇತ ಡ್ರಗ್ಸ್ ಪೆಡ್ಲರ್ ಓರ್ವನನ್ನು ಬಂಧಿಸಿ FIR ದಾಖಲಿಸಿದ್ದರು. ಆರೋಪಿ ನೀಡಿದ ಮಾಹಿತಿ ಅನ್ವಯ ಮೈಸೂರಿನಿಂದ ಮಹರಾಷ್ಟ್ರಕ್ಕೆ ಡ್ರಗ್ಸ್ ರವಾನೆಯಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಿನಾಂಕ-26-07-2025 ರಂದು ಮಹಾರಾಷ್ಟ್ರ ಪೊಲೀಸರು ಮೈಸೂರು ನಗರದ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಘಟಕದ ಮೇಲೆ ದಾಳಿ ನಡೆಸಿ ಆರೋಪಿಗಳ ಸಹಿತ, ಸ್ವತ್ತನ್ನು ವಶಕ್ಕೆ ಪಡೆದಿರುತ್ತಾರೆ.
ಮೈಸೂರಿನ ಸದರಿ ಘಟಕದಿಂದ ದೇಶದ ಅನೇಕಾನೇಕ ರಾಜ್ಯಗಳಿಗೆ ಇಲ್ಲಿಂದಲೇ ಮಾದಕ ದ್ರವ್ಯ ಸಾಗಟವಾಗುತ್ತಿದೆ ಎಂಬುದನ್ನು ಖಚಿತಪಡಿಸಿದ್ದು, ಮಹಾರಾಷ್ಟ್ರದ ಮುಂಬೈ ಪೊಲೀಸರು ನೀಡಿರುವ ಮಾದಕ ದ್ರವ್ಯ ವಸ್ತುಗಳ ತೂಕ ಮತ್ತು ಅಂದಾಜು ವಿವರಗಳು, ಮೈಸೂರು ನಗರ ಪೊಲೀಸ್ ಆಯುಕ್ತರು ಹೇಳುವ ಅಂದಾಜು ವಿವರ, ತೂಕಕ್ಕೂ ವ್ಯತ್ಯಾಸ ಇರುವುದು ಹಾಗೂ ದಿನಾಂಕ-26-7-2025 ರಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರ ಆದೇಶ ಅನ್ವಯ ಅಮಾನತುಗೊಂಡಿದ್ದ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನೇ ದೂರುದಾರನಾಗಿ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ” ಎಂದು ಆರೋಪ ಮಾಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ವಕೀಲ ರವಿಕುಮಾರ್ ಮಾತನಾಡಿ ” ರಾಜ್ಯ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾಗಿದೆ. ಅದಕ್ಕಾಗಿ, ಕೂಡಲೇ ಸದರಿ ಪ್ರಕರಣದಲ್ಲಿ ನರಸಿಂಹರಾಜ ಪೊಲೀಸ್ ಠಾಣಾಧಿಕಾರಿ ಲಕ್ಷ್ಮಿಕಾಂತ್ ತಳವಾರ್ ರವರ ಮೇಲೆ ಎಫ್ಐಆರ್ ದಾಖಲಿಸಿ, ಬಂಧಿಸಬೇಕು. ಮೈಸೂರು ನಗರ ಆಯುಕ್ತರು ಯಾರ ಒತ್ತಡಕ್ಕೆ ಮಣಿದರು ಎಂಬುದನ್ನು ಸಾರ್ವಜನಿಕವಾಗಿ ಮಾಹಿತಿ ಒದಗಿಸಬೇಕು ” ಎಂದು ಆಗ್ರಹಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಮೈಸೂರು ನಗರ ಪೊಲೀಸ್ ಅಧಿಕಾರಿಗಳ ದ್ವಂದ್ವ ಹೇಳಿಕೆ ಮತ್ತು ಕರ್ತವ್ಯಲೋಪದ ಬಗ್ಗೆ ತಿಳಿಸುತ್ತೇವೆ. ಸದರಿ ಪ್ರಕರಣದಿಂದ ಮೈಸೂರು ನಗರದ ಘನತೆಗೆ ಧಕ್ಕೆಯಾಗಿದ್ದು, ರಾಷ್ಟ್ರ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಆದ್ದರಿಂದ, ಸದರಿ ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅವರನ್ನು ಅಮಾನತು ಮಾಡಿ, ಸಾರ್ವಜನಿಕವಾಗಿ ಆದೇಶ ನೀಡಿ, ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಬಳಿಕ, ಮರು ದಿನವೇ ತನ್ನ ಪ್ರಭಾವ ಬಳಸಿ ಕರ್ತವ್ಯಕ್ಕೆ ಹಾಜರಾಗಿರುವುದು ಅಧಿಕಾರಿಯ ಹಿನ್ನಲೆ ಬಗ್ಗೆ ಬಹಳಷ್ಟು ಅನುಮಾನ ಕಾಡುತ್ತಿದೆ.

ಮಾದಕ ದ್ರವ್ಯ ತಯಾರಿಕಾ ಘಟಕ ತನ್ನ ಠಾಣಾ ವ್ಯಾಪ್ತಿಯಲ್ಲಿ, ಅದರಲ್ಲೂ ಹೊರ ವರ್ತುಲ ರಸ್ತೆಯ ಬದಿಯಲ್ಲೆ ಇದ್ದರು ಗಮನಕ್ಕೆ ಬಾರದಂತೆ ಇರುವುದರ ಬಗ್ಗೆ ಅನುಮಾನವಿರುವುದರಿಂದ ತನಿಖೆಯಿಂದ ತಿಳಿಯಬೇಕಿದೆ. ಈತನಿಗೆ ಸಹಕಾರ ನೀಡುತ್ತಿರುವವರು ಯಾರು? ಎಲ್ಲವನ್ನೂ ಬಹಿರಂಗ ಪಡಿಸಬೇಕಿದೆ. ಮಾದಕ ವಸ್ತು ಕಳ್ಳಸಾಗಣೆ ಮತ್ತು ದುರುಪಯೋಗದ ವಿರುದ್ಧ ಭಾರತದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿ ಬಿ) ಗೆ ಅಧಿಕೃತವಾಗಿ ದೂರನ್ನು ದಾಖಲಿಸುತ್ತಿದ್ದೇವೆ.
ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಸರಬರಾಜನ್ನು ತೊಡೆದು ಹಾಕುವ ಮೂಲಕ ಸಮಾಜದ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ದೂರನ್ನು ದಾಖಲಿಸುತ್ತಿದ್ದೇವೆ. ಈ ಕೃತ್ಯವೂ ದೇಶದ ಅನೇಕ ರಾಜ್ಯಗಳ ನಡುವೆ ಸಂಭಂದ ಏರ್ಪಟ್ಟಿರುವುದರಿಂದ, ದೇಶದ ಭದ್ರತೆಗೆ ಅಪಾಯಕಾರಿ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಡಲು ಕಾರಣವಾಗಿರುವುದರಿಂದ, ಕೂಡಲೇ ಈ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ವಹಿಸಬೇಕು, ಸದರಿ ಕಳ್ಳ ಸಾಗಾಣಿಕೆ ವ್ಯವಹಾರದಲ್ಲಿ ₹380 ಕೋಟಿ ರೂಪಾಯಿ ವಹಿವಾಟು ನಡೆದಿರುವುದರಿಂದ ಜಾರಿ ನಿರ್ದೇಶನಾಲಯ (ಇಡಿ) ತಕ್ಷಣವೇ ಮದ್ಯ ಪ್ರವೇಶಿಸಬೇಕೆಂದು ದೂರಿನಲ್ಲಿ
ವಿವರಿಸಿರುವುದಾಗಿ ಹೇಳಿದರು.
ನಾಳೆ ಮೈಸೂರು ನಗರದಲ್ಲಿ ಮಾದಕ ದ್ರವ್ಯ ಮುಕ್ತ ನಗರಕ್ಕಾಗಿ ಜಾಗೃತಿ ಜಾಥಾವನ್ನು ಮೈಸೂರು ಜಿಲ್ಲಾ ಘಟಕದ ಕೆಆರ್‌ಎಸ್ ಪಕ್ಷದ ನೂರಾರು ಕಾರ್ಯಕರ್ತರು ಜಾಥಾ ಮೂಲಕ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಕರ್ತವ್ಯಲೋಪ; ಇನ್ಸ್ಪೆಕ್ಟರ್ ಲಕ್ಷ್ಮಿಕಾಂತ್ ತಳವಾರ್ ಅಮಾನತ್ತು
ರಾಜ್ಯ ಎಸ್ಸಿ, ಎಸ್ಟಿ ಘಟಕದ ಉಪಾಧ್ಯಕ್ಷರಾದ ಅಕ್ಕ ಮಹಾದೇವಮ್ಮ, ಕಾರ್ಯದರ್ಶಿ ವೇಣುಗೋಪಾಲ್, ನಾಗರಾಜು, ರವಿ ಇದ್ದರು.