ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಸ್ಥಿಕೆ ವಹಿಸಿ ಎರಡೂ ರಾಜ್ಯಗಳ ಜನಪ್ರತಿನಿಧಿಗಳ ಸಭೆ ನಡೆಸುವ ಮೂಲಕ ಕಳಸಾ ಬಂಡೂರಿ ಮಹದಾಯಿ ನೀರಿನ ವಿವಾದ ಬಗೆಹರಿಸಲು ಪ್ರಯತ್ನ ಮಾಡಬೇಕು ಎಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಹುಬ್ಬಳ್ಳಿಯಲ್ಲಿ ನಡೆಸಿದ ಅನಿರ್ಧಿಷ್ಟಾವಧಿ ಚಳುವಳಿಯಲ್ಲಿ ಆಗ್ರಹಿಸಿದೆ.
ಚಳವಳಿಯು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಚಿಟಗುಪ್ಪಿ ಆಸ್ಪತ್ರೆ ಹತ್ತಿರವಿರುವ ಸಂಸದ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಚೇರಿ ಹತ್ತಿರ ನಡೆಸಿದ ಚಳವಳಿಯಲ್ಲಿ ಕೇಂದ್ರ ಸರಕಾರದ ಮಹದಾಯಿ ನಡೆಯನ್ನು ರೈತರು ಖಂಡಿಸಿದರು. ಪ್ರಲ್ಹಾದ್ ಜೋಶಿಯವರು ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಹೀಗಾಗಿ ರೈತರ ಮತ್ತು ಕಾರ್ಮಿಕರ ಕಷ್ಟಗಳು ಅವರಿಗೆ ತಿಳಿದಿಲ್ಲ. ಕೇವಲ ಆಶ್ವಾಸನೆ ಅವರ ಮಂತ್ರವಾಗಿದ್ದು, ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಮಹದಾಯಿ ನೀರಿನಲ್ಲಿ ರಾಜಕಾರಣ ಮಾಡುತ್ತಿದ್ದು, ಹೋರಾಟವು ಅಗತ್ಯವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಚಳವಳಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಧಾರವಾಡದ ಎಐಟಿಯುಸಿ ಸಂಘಟನೆ, ಉತ್ತರ ಕರ್ನಾಟಕದ ಎ.ಜೆ.ಮುಧೋಳ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ, ಕೃಷಿಕ ಸಮಾಜ, ನವದೆಹಲಿ ನಿವೃತ್ತ ನೌಕರರ ಸಂಘ, ಲಕ್ಷ್ಮಣ ಹಿರೇಕೇರೂರು ಅಟೋ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಕನ್ನಡ ಪರ, ದಲಿತ ಪರ, ಕಾರ್ಮಿಕ ಒಕ್ಕೂಟ, ಮಹಿಳಾ ಪರ ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.

ಇದನ್ನೂ ಓದಿ: ಹುಬ್ಬಳ್ಳಿ | ಲಿಂಗಾಯತರು ಒಳಪಂಗಡಗಳ ಕಿತ್ತಾಟವನ್ನು ಬದಿಗೆ ಸರಿಸಬೇಕಿದೆ: ಗಂಗಾಧರ ದೊಡವಾಡ
ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ, ಬಾಬಾಜಾನ ಮುಧೋಳ, ಪಕ್ಷಾತೀತ ಮತ್ತು ಜ್ಯಾತ್ಯಾತೀತ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಲೋಕನಾಥ್ ಹೆಬಸೂರ, ರೈತ ಸಂಘ ಜಿಲ್ಲಾಧ್ಯಕ್ಷ ರವಿರಾಜ ಕಂಬಳಿ, ಭಾರತೀಯ ಕೃಷಿಕ ಸಮಾಜ ಸಂಘದ ಮಾಣಿಕ್ಯ ಚಿಲ್ಲೂರು, ರಮೇಶ್ ಬೋಸ್ಲೆ, ಬಸೀರಹ್ಮದ ಮುಧೋಳ, ಯುಸುಫ ಬಳ್ಳಾರಿ, ಕಳಸಾ ಬಂಡೂರಿ ಹೋರಾಟ ಸಮಿತಿಯ ಸಲೀಂ ಸಂಗನಮುಲ್ಲಾ, ಬಿ.ಎಸ್. ಸೊಪ್ಪಿನ, ರಘುನಾಥ್ ನಡುವಿನಮನಿ, ಕಿಶೋರ ಮಿಠಾರಿ, ದಲಿತ ಮಹಿಳಾ ಮುಖಂಡೆ ಶೋಭಾ ಕಮತರ, ಶಂಕ್ರಮ್ಮ ಕರ್ಕನ್ನವರ, ರೇಣುಕಾ ಹೊಂಗಲ್, ರಾಜು ನಾಯಕವಾಡಿ, ಹನಮಂತಪ್ಪ ಪವಾಡಿ, ಡಾ.ಡಿ.ಟಿ.ಪಾಟೀಲ್, ನಿವೃತ್ತಿ ನೌಕರರ ಸಂಘದ ಅಧ್ಯಕ್ಷ ಶೈಲ್ ಗಡದಿನ್ನಿ, ಎಚ್.ಕೆ.ದೊಡಮನಿ, ರೈತರು, ಕಾರ್ಮಿಕರು, ಮಹಿಳಾ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.