ಕಳಪೆ ಬೀಜ-ನಕಲಿ ಗೊಬ್ಬರದ ಹಾವಳಿ; ರೈತರ ನೆರವಿಗೆ ನಿಲ್ಲದ ಇಲಾಖೆ

Date:

Advertisements

ಕಳಪೆ ಬೀಜ ಮತ್ತು ರಸಗೊಬ್ಬರದ ಅಭಾವ, ಕಾಳಸಂತೆಯ ಸಮಸ್ಯೆಗಳು ರೈತರನ್ನು ಕಾಡುತ್ತಿರುವ ಬೆನ್ನಲ್ಲೇ ನಕಲಿ ರಸಗೊಬ್ಬರ ಹಾವಳಿಯ ದೂರು ಕೇಳಿ ಬಂದಿದೆ. ಉತ್ತಮ ಹವಾಮಾನದ ಬೆಳೆ ಬಿತ್ತನೆ ಕಾಲದಲ್ಲಿ ಅನ್ನದಾತ ರೈತನ ಆರ್ಥಿಕತೆಗೆ ಕೊಳ್ಳಿ ಇಡುವ ಆರೋಪಗಳು ಕೇಳಿ ಬಂದಿದೆ. ಕಳಪೆ ಬೀಜ, ಬಿತ್ತನೆ ಗೊಬ್ಬರ ಹಾಗೂ ಯೂರಿಯಾದ ಕೃತಕ ಅಭಾವ ಸೃಷ್ಟಿಸಿ ಅಂಗಡಿಗಳಲ್ಲಿ ದುಬಾರಿ ಬೆಲೆ ಪಡೆದು ರೈತರನ್ನು ಶೋಷಿಸುವ ಘಟನೆ ರಾಜ್ಯದ ಬಹುತೇಕ ಕಡೆಗಳಲ್ಲಿ ಸಾಮಾನ್ಯವಾಗಿ ನಡೆಯುತ್ತಲೇ ಇದೆ. ರೈತರ ನೆರವಿಗೆ ಬರಬೇಕಾದ ಸರ್ಕಾರ, ಕೃಷಿ ಇಲಾಖೆ ಪ್ರತಿ ಬಾರಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ.

ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ಫರ್ಟಿಲೈಜರ್ ಅಂಗಡಿಯಲ್ಲಿ ರೈತರಿಗೆ ಕಳಪೆ ಗೊಬ್ಬರ ನೀಡಿ ವಂಚಿಸುತ್ತಿರುವ ಆರೋಪ ಕೇಳಿ ಬಂದಿತು. ವಡೇರಹಳ್ಳಿ ಗ್ರಾಮದ ನರಸಿಂಹಪ್ಪ ಎಂಬ ರೈತ ಫರ್ಟಿಲೈಜರ್ಸ್ ಅಂಗಡಿಯಲ್ಲಿ ಈರುಳ್ಳಿ ಬೆಳೆಗೆಂದು ಕಂಪನಿಯೊಂದರ ಗೊಬ್ಬರ ತೆಗೆದುಕೊಂಡು ಹೋಗಿ ಬೆಳೆಗೆ ಗೊಬ್ಬರ ಚೆಲ್ಲುವ ವೇಳೆ ಗೊಬ್ಬರವನ್ನು ನೋಡಿದಾಗ ಗೊಬ್ಬರದ ಚೀಲದಲ್ಲಿ ಬರಿ ಬಿಳಿ ಕಲ್ಲು ಮಣ್ಣು ಕಂಡು ಬಂದಿದೆ. ಕೂಡಲೇ ಗೊಬ್ಬರ ಸಮೇತವಾಗಿ ಅಂಗಡಿಯ ಮುಂದೆ ರೈತರೊಂದಿಗೆ ಬಂದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.‌ ಅಲ್ಲದೇ ಕೃಷಿ ಇಲಾಖೆ ಅಡಿಯಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ವಿತರಿಸುವ ಗೊಬ್ಬರ ಕೂಡ ಕಳಪೆಯಾಗಿದ್ದು ಇದಕ್ಕೆ ಜಂಟಿ ನಿರ್ದೇಶಕರೇ ಹೊಣೆ ಎಂದು ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

1002431852
ಬಿತ್ತನೆಗೆ ಹೊಲ ಹದಗೊಳಿಸುತ್ತಿರುವ ರೈತ

ಇದು ಕೇವಲ ಒಂದು ಅಂಗಡಿಯ ಅಥವಾ ಒಂದು ಊರಿನ ಸಮಸ್ಯೆಯಲ್ಲ. ಹಲವೆಡೆ ನಡೆಯುತ್ತಿದ್ದರೂ, ಬೆಳಕಿಗೆ ಬರುತ್ತಿಲ್ಲ. ಕೆಲವೆಡೆ ವಾಪಸ್ ಪಡೆದು ಬದಲಿ ಬೀಜ, ರಸಗೊಬ್ಬರ ಅಥವಾ ಹಣ ಹಿಂದಿರುಗಿಸಿದ ಉದಾಹರಣೆಗಳೂ ಇವೆ. ಕೆಲವರು ಮುಖಂಡರ ಮಧ್ಯಸ್ಥಿಕೆಯಲ್ಲಿ ರಾಜಿ ಮಾಡಿಕೊಂಡು ಕೈತೊಳೆದುಕೊಂಡ ಪ್ರಕರಣಗಳೂ ನಡೆದಿವೆ.

Advertisements

ಮಾನ್ಸೂನ್ ಆರಂಭದ ತಿಂಗಳುಗಳು ಬಂತೆಂದರೆ ರೈತರಿಗೆ ಹಬ್ಬದ ವಾತಾವರಣ.‌ ಮುಂಗಾರಿನಲ್ಲಿ ಬಿತ್ತನೆ ಕಾರ್ಯಗಳು ಗರಿಗೆದರುತ್ತವೆ.‌ ಭೂಮಿ ಉಳುಮೆ, ಹಸನು, ಹಸನಾದ ನೆಲದಲ್ಲಿ ಬಿತ್ತನೆಗೆ ಶುರುವಿಟ್ಟುಕೊಳ್ಳುತ್ತಾರೆ.‌ ಈ ಸಮಯದಲ್ಲಿ ರೈತರಿಗೆ ಕೃಷಿ ಒಳಸುರಿಗಳ ಅವಶ್ಯಕತೆ ಹೆಚ್ಚಾಗಿರುತ್ತದೆ.‌ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಸಾಮಗ್ರಿಗಳು ಇತ್ಯಾದಿ ಕೃಷಿ ಸಾಮಗ್ರಿಗಳು ಭರದಿಂದ ಮಾರಾಟವಾಗುತ್ತವೆ. ಉತ್ತಮ ಬೀಜ, ರಸಗೊಬ್ಬರ, ಕೀಟನಾಶಕ ಸಾಮಗ್ರಿಗಳು ದೊರೆತರೆ, ಮಳೆ ಬಿಸಿಲಿನ ಹವಾಮಾನ ಉತ್ತಮ, ಪೂರಕವಾಗಿ ಸಹಕರಿಸಿದರೆ ಉತ್ತಮ ಇಳುವರಿ ಪಡೆಯಬಹುದು. ಆರ್ಥಿಕವಾಗಿ ಸದೃಢನಾಗಬಹುದು. ಆದರೆ ಇವುಗಳಲ್ಲಿ ಯಾವುದಾದರೂ ಒಂದು ಕಳಪೆಯಾದರೂ ರೈತನ ಪ್ರಯತ್ನ, ಕೆಲಸಗಳು ವ್ಯರ್ಥವಾಗುತ್ತದೆ. ಅದರಲ್ಲೂ ಹವಾಮಾನದ ವ್ಯತಿರಿಕ್ತ ಹೊಡೆತಕ್ಕೆ ಇತ್ತೀಚಿನ ವರ್ಷಗಳಲ್ಲಿ ರೈತ ನಷ್ಟದಿಂದ ಸಾಲಬಾಧೆಗೆ ಸಿಲುಕಿ ಹೊರಬರಲಾಗದೆ ಹೆಚ್ಚಿನ ಬಹುಪಾಲು ರೈತರು ಸಂಕಷ್ಟದಲ್ಲಿದ್ದಾರೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಮೂಲವಾಗಿ ಬೆಳೆಗೆ ಆಧಾರವಾದ ಬೀಜ ರಸಗೊಬ್ಬರಗಳೇ ಕಳಪೆಯಾದರೆ, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾದರೆ ಇದರ ವಿಷಮ ಸ್ಥಿತಿಯನ್ನು ರೈತ ಅನುಭವಿಸಬೇಕಾಗುತ್ತದೆ. ಮೊದಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತನಿಗೆ ರೂ. 2500 ಬೆಲೆಯ ಡಿಎಪಿ ರಸಗೊಬ್ಬರವನ್ನು ರೂ.3500 ಕೊಟ್ಟು ಖರೀದಿಸುವ ಅನಿವಾರ್ಯತೆ ಬೀಳುತ್ತದೆ. ಬಿತ್ತನೆ ಬೀಜಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಿ ಕೃಷಿ ಮಾಡಲು ಅಸಹಾಯಕನಾಗುತ್ತಾನೆ. ಅದನ್ನು ಸರಿದೂಗಿಸಲು ಮತ್ತೆ ಮತ್ತೆ ಬಂಡವಾಳಶಾಹಿಗಳ, ಜಮೀನ್ದಾರಿಕೆಯ, ಖಾಸಗಿ ಲೇವಾದೇವಿಗಳ ಹಿಡಿತಕ್ಕೆ ಒಳಗಾಗಬೇಕಾಗುತ್ತದೆ. ಇದು ರೈತಾಪಿ ವರ್ಗವನ್ನು ಇನ್ನಷ್ಟು ಶೋಷಣೆಗೆ ಗುರಿಮಾಡುತ್ತದೆ.

ಮೊಳಕಾಲ್ಮೂರು ತಾಲೂಕಿನಲ್ಲಿ ಎನ್ ಪಿ ಕೆ 17-17-17 ಎನ್ನುವ ನಕಲಿ ಗೊಬ್ಬರ ಮಾರಾಟವಾಗುತ್ತಿದ್ದು, ರೈತರ ದೂರು, ಪ್ರತಿಭಟನೆ ಬಳಿಕ ಕೃಷಿ ಅಧಿಕಾರಿಗಳು ತಾಲೂಕಿನ ಬಹುತೇಕ ಫೈರ್ಟಿಲೈಜರ್ ಅಂಗಡಿಗಳಿಗೆ ದಿಡೀರ್ ದಾಳಿ ನಡೆಸಿ ಈ ಗೊಬ್ಬರ ಮಾರಾಟ ಮಾಡದಂತೆ ನೋಟಿಸ್ ನೀಡಿದ್ದಾರೆ.

1002431854
ಪೂರ್ಣ ಪ್ರಮಾಣದ ಪೋಷಕಾಂಶ, ಯೂರಿಯಾ ಸಿಗದೇ ಕುಂಠಿತವಾದ ಮೆಕ್ಕೆಜೋಳ

ಸಾಕಷ್ಟು ರೈತರಿಗೆ ಇದೇ ಗೊಬ್ಬರ ನೀಡಿ ಮೋಸ ಮಾಡಿದ್ದಾರೆ. ಕೂಡಲೇ ಅಂಗಡಿಯ ಲೈಸೆನ್ಸ್ ರದ್ದು ಮಾಡುವಂತೆ ರೈತರು ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಹಿತಿ ತಿಳಿದ ಕೃಷಿ ಅಧಿಕಾರಿಗಳು ಗೊಬ್ಬರದ ಅಂಗಡಿಗೆ ಭೇಟಿ ನೀಡಿ ಅಂಗಡಿಯಲ್ಲಿದ್ದ 114 ಚೀಲ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡದಂತೆ ಸೂಚನೆ ನೀಡಿದ್ದು, ದಾವಣಗೆರೆಯ ಲ್ಯಾಬ್ ಗೆ ಗೊಬ್ಬರದ ಸ್ಯಾಂಪಲ್ ಕಳಿಸಿಕೊಟ್ಟಿದ್ದಾರೆ. ಲ್ಯಾಬ್ ವರದಿ ಬಂದ ಬಳಿಕ ಕಂಪನಿ ಹಾಗೂ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇನ್ನೂ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಮುನ್ಸೂಚನೆ ಅರಿತ ಕೆಲ ಫರ್ಟಿಲೈಜರ್ ಅಂಗಡಿಗಳ ಮಾಲೀಕರು ರಾತ್ರೋರಾತ್ರಿ ನಕಲಿ ಗೊಬ್ಬರವನ್ನು ಗೋದಾಮಿನಿಂದ ಬೇರೆಡೆ ಶಿಫ್ಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ವಾಡಿಕೆಗಿಂತಲೂ ಅಧಿಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಗಳು ಗೊಬ್ಬರ ಅಂಗಡಿ, ದಾಸ್ತಾನು ಗೋದಾಮುಗಳಿಗೆ ಭೇಟಿ ನೀಡಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮತ್ತು ಅಕ್ರಮವಾಗಿ ಬೇರೆ ಕಡೆಗೆ ಗೊಬ್ಬರ ಸಾಗಿಸಿದ ಆರೋಪದಡಿ ಹನ್ನೆರಡು ಅಂಗಡಿಗಳ ಲೈಸೆನ್ಸ್ ಅಮಾನತು ಗೊಳಿಸಿದ್ದಾರೆ.‌

ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗಾಗಿ ರೈತರು ಈಗಾಗಲೇ ಭೂಮಿಯನ್ನು ಸಿದ್ಧಪಡಿಸಿಕೊಂಡು ಬಿತ್ತನೆಗೆ ಮುಂದಾಗಿದ್ದಾರೆ. ಆದರೆ ನಕಲಿ ರಸಗೊಬ್ಬರ ಮತ್ತು ನಕಲಿ ಬೀಜದ ಹಾವಳಿಯಿಂದ ನಾಡಿನ ರೈತರು ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಚಳ್ಳಕೆರೆ, ಮೊಳಕಾಲ್ಮುರು, ಚಿತ್ರದುರ್ಗ, ಹೊಸದುರ್ಗ ಸೇರಿದಂತೆ ಹಲವು ಕಡೆ ಫರ್ಟಿಲೈಸರ್ ಅಂಗಡಿ ಮಾಲೀಕರು ಲಾಭದ ಆಸೆಗಾಗಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ನಕಲಿ ಗೊಬ್ಬರ ನೀಡಿ ಜೇಬು ತುಂಬಿಸಿಕೊಂಡು ರೈತರ ಬೊಕ್ಕಸವನ್ನು ಖಾಲಿ ಮಾಡುತ್ತಿದ್ದಾರೆ ಎಂದು ಪ್ರತಿಭಟನೆಗಳು ನಡೆಯುತ್ತಿವೆ.‌

ಹಾಸನದಲ್ಲಿ ಕೂಡ ಮೆಕ್ಕೆಜೋಳ ಕಳಪೆ ಬಿತ್ತನೆ ಬೀಜ ಮಾರಾಟವಾಗಿದ್ದು, ಬೆಳೆ ಕುಂಠಿತವಾಗಿ ಫಸಲು ಬಾರದೇ, ಅನೇಕ ರೋಗಗಳಿಗೆ ತುತ್ತಾಗಿ ಬೆಳವಣಿಗೆ ಕುಂಠಿತವಾಗಿರುವ ಪ್ರಕರಣಗಳು ಕಂಡುಬಂದಿವೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ರೈತ ಅಂಜಿನಪ್ಪ ತೆಗೆದುಕೊಂಡು ಹೋಗಿದ್ದ ಶೇಂಗಾ ಬಿತ್ತನೆ ಬೀಜ ಚೀಲದಲ್ಲಿಯೇ ಹುಳು ಹಿಡಿದಿದೆ ಎಂದು ವರದಿಯಾಗಿದೆ.

1002431860
Oplus_131072

ರಾಜ್ಯದ ಹಲವಡೆಗಳಲ್ಲಿ ಖಾಸಗಿ ಫರ್ಟಿಲೈಜರ್ ಅಂಗಡಿಗಳಲ್ಲಿ ಯಾವುದೇ ಭಾಗದಲ್ಲೂ ವಿಚಾರಿಸಿದರೆ ಕೂಡ ಸರ್ಕಾರ ನಿಗದಿಪಡಿಸಿರುವ ಬೆಲೆಗೆ ರಸ ಗೊಬ್ಬರ ಮತ್ತು ಬೀಜಗಳು ಸಿಗುವುದೇ ಇಲ್ಲ. ಕಳೆದ ಎರಡು ಮೂರು ವರ್ಷಗಳ ಹಿಂದೆ ಕಂಪನಿಗಳು ಮೆಕ್ಕೆಜೋಳ 5 ಕೆಜಿಯಲ್ಲಿ ಚೀಲದಲ್ಲಿ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಬೀಜ ಕಂಪೆನಿಗಳು ಲಾಭದ ಆಸೆಗೆ 4ಕೆಜಿಗೆ ಇಳಿಸಿ ಅದೇ ಬೆಲೆಗೆ ಮಾರಾಟ ಮಾಡುತ್ತಿವೆ. ಬೇರೆ ಬೇರೆ ಬಿತ್ತನೆ ಬೀಜಗಳ ಪ್ಯಾಕೆಟ್ ಗಳ ತೂಕ ಇಳಿಸಿ, ವರ್ಷದಿಂದ ವರ್ಷಕ್ಕೆ ಬೆಲೆ ಹೆಚ್ಚಿಸಿ ರೈತರನ್ನು ಶೋಷಿಸಿ ದೋಚುತ್ತಿವೆ.‌ ಸರ್ಕಾರ, ಕೃಷಿ ಇಲಾಖೆ, ಬೀಜ ನಿಗಮಗಳೂ ಕೂಡ ಲಾಭಿಗೆ ಒಳಗಾಗಿ ಇವನ್ನು ನಿಯಂತ್ರಿಸುವಲ್ಲಿ ಹಿಂದೆ ಸರಿದಿವೆ.

ವರ್ಷದ ಫಸಲಿಗಾಗಿ ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಸಾಲ ಮಾಡಿ ಬೆಳೆ ಬೆಳೆಯುವ ರೈತರಿಗೆ ದುಬಾರಿ ಬೀಜ, ರಸಗೊಬ್ಬರ ಅಥವಾ ನಕಲಿ ಬೀಜ ಮತ್ತು ಗೊಬ್ಬರವು ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ, ನಕಲಿ ಬೀಜ ಮತ್ತು ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮೇಲೆ ಕಾನೂನು ಕ್ರಮ ವಹಿಸಬೇಕಿದೆ.

ಯೂರಿಯಾ ಗೊಬ್ಬರಕ್ಕೆ ಪರದಾಟ

ಗಿಡದ ಬೆಳವಣಿಗೆಗೆ ಪೋಷಕಾಂಶಭರಿತ ಹಾಗೂ ಶೀತ ನಿಯಂತ್ರಣಕ್ಕಾಗಿ ಅಗತ್ಯವಿರುವ ಯೂರಿಯಾ ರಸಗೊಬ್ಬರಕ್ಕಾಗಿ ಚಿತ್ರದುರ್ಗ, ದಾವಣಗೆರೆ, ಹಾವೇರಿ ಸೇರಿದಂತೆ ಹಲವೆಡೆ ಕೊರತೆ ಉಂಟಾಗಿದೆ. ಪ್ರತಿನಿತ್ಯ ರೈತರು ಖಾಸಗಿ ಫರ್ಟಿಲೈಸರ್ ಅಂಗಡಿ, ಕಂಪನಿಗಳ ಮುಂದೆ ಮುಗಿಬಿದ್ದು ರಸಗೊಬ್ಬರಕ್ಕಾಗಿ ಹರಸಾಹಸ ಪಡಬೇಕಿದೆ. ಪ್ರತಿ ದಿನ ಹಲವು ತಾಲೂಕುಗಳಲ್ಲಿ ನಿತ್ಯ ಪ್ರತಿಭಟನೆ ನೆಡೆಯುತ್ತಿವೆ. ರೈತ ಸಂಘದ ನೇತೃತ್ವದಲ್ಲಿ ರೈತರು ನಿರಂತರವಾಗಿ ಹೋರಾಟಕ್ಕಿಳಿದಿದ್ದಾರೆ. ಮೆಕ್ಕೆಜೋಳ ಅತಿ ಹೆಚ್ಚು ಬೆಳೆಯುವ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವೆಡೆ ಯೂರಿಯಾ ರಸಗೊಬ್ಬರ ಪೂರೈಕೆಯಿಲ್ಲದೇ ಅಂಗಡಿಗಳಿಗೆ ಅಲೆದಾಟ ಶುರುವಾಗಿದೆ. ಕೆಲವೆಡೆ ಕೃತಕ ಅಭಾವ ಸೃಷ್ಟಿಯಾಗಿರುವ ಆರೋಪ ಕೇಳಿಬಂದಿದೆ.‌

ರೈತ ಸಂಘದ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿ, “ದಾವಣಗೆರೆಗೆ ಅಗತ್ಯದಷ್ಟು ಗೊಬ್ಬರ ಸರಬರಾಜಾಗಿದ್ದು, ಕೆಲವು ವಿತರಕ ಏಜೆನ್ಸಿಗಳು ಸ್ಥಳೀಯವಾಗಿ ವಿತರಿತಬೇಕಿದ್ದ 2500 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಶಿವಮೊಗ್ಗಕ್ಕೆ ಸಾಗಿಸಿ ಇಲ್ಲಿ ಅಭಾವ ಸೃಷ್ಟಿಸಿದ್ದಾರೆ. ಇಲ್ಲಿನ ರೈತರಿಗೆ ಗೊಬ್ಬರ ತಪ್ಪಿಸಿದ ಫರ್ಟಿಲೈಜರ್ ಅಂಗಡಿಗಳ ಲೈಸೆನ್ಸ್ ರದ್ದು ಮಾಡಬೇಕು. ಕೃಷಿ ಇಲಾಖೆ ಯೂರಿಯಾ ಪೂರೈಸಲು ಕ್ರಮ ಕೈಗೊಳ್ಳಬೇಕು” ಎಂದು ಆರೋಪಿಸಿದರು.

“ಈ ಹಿಂದೆ ಖಾಸಗಿ ಆಗ್ರೋ ಫರ್ಟಿಲೈಸರ್, ಗೊಬ್ಬರದಂಗಡಿ ಮಾಲೀಕರು ರೈತರಿಂದ ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿ ರೈತರನ್ನು ಶೋಷಿಸಿದ್ದಾರೆ. ಕೃಷಿ ಅಧಿಕಾರಿಗಳು ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ. ಕೂಡಲೇ ಕೃಷಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಸರ್ಕಾರ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿರುವುದು ಸರಿಯಲ್ಲ. ಕೂಡಲೇ ಅಗತ್ಯ ಯೂರಿಯಾ ಗೊಬ್ಬರ ಒದಗಿಸಬೇಕು” ಎಂದು ಜಗಳೂರು ತಾಲೂಕಿನ ರೈತ ಮುಖಂಡ ಕುಮಾರ್ (ವಾಸುದೇವ ಭೇಟಿ ಬಣ) ಆಗ್ರಹಿಸಿದರು.

1002431849
ಉತ್ತಮ ಬೀಜ ಗೊಬ್ಬರ ಒದಗಿಸುವಲ್ಲಿ ವಿಫಲವಾದ ಕೃಷಿ ಇಲಾಖೆ

ಈದಿನ ಡಾಟ್ ಕಾಮ್ ಗೆ ಪ್ರತಿಕ್ರಿಯೆ ನೀಡಿದ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ, “ರೈತರಿಗೆ ಯೂರಿಯಾ ಅವಶ್ಯಕತೆ ಇದ್ದು, ಖಾಸಗಿ ಫರ್ಟಿಲೈಜರ್ ಅಂಗಡಿ ಕಾಳದಂದೆಯ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ರೈತರನ್ನು ಶೋಷಿಸುವ ಘಟನೆಗಳು ಹಿಂದೆ ನೆಡೆದಿವೆ. ಹಾಗಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಗೆ ಸರ್ಕಾರಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದು, ಅದರಂತೆ ಕೃಷಿ ಇಲಾಖೆ ನಿಯಂತ್ರಣದಲ್ಲಿ ಸಹಕಾರ ಸಂಘಗಳ ಮೂಲಕ ವಿತರಣೆಗೆ ಆದೇಶಿಸಿದ್ದಾರೆ. ಇನ್ನು ನಾಲ್ಕೈದು ದಿನಗಳಲ್ಲಿ ರೈತರಿಗೆ ಗೊಬ್ಬರ ಪೂರೈಸುವ ಭರವಸೆ ನೀಡಿದ್ದಾರೆ. ರೈತರೂ ಕೂಡ ಖರೀದಿಗೆ ಮುಗಿಬೀಳದೇ ಸದ್ಯ ಬೆಳೆಗೆ ಬೇಕಾಗುವಷ್ಟು ಅಗತ್ಯದ ಯೂರಿಯಾ ಖರೀದಿಸಬೇಕು” ಎಂದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯೂರಿಯಾ ರಸಗೊಬ್ಬರ ಕೊರತೆ: ವಿತರಕ ಏಜೆನ್ಸಿ ವಿರುದ್ಧ ರೈತ ಸಂಘ ಪ್ರತಿಭಟನೆ

ಈ ಬಗ್ಗೆ ದಾವಣಗೆರೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, “ಜಿಲ್ಲಾದ್ಯಂತ ಕೃಷಿ ಇಲಾಖೆ, ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳುತ್ತಿದ್ದು ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟವಾದ ಮಾಹಿತಿ ಸಂಗ್ರಹಿಸಿ ಇಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ ಮುಂಗಾರಿನಲ್ಲಿ ಯುರಿಯಾದ ಅಭಾವ ಸೃಷ್ಟಿಯಾಗಿದ್ದು, ಇನ್ನೂ ಎರಡು ಮೂರು ದಿನಗಳಲ್ಲಿ ಬಗೆಹರಿಯಲ್ಲಿದೆ. ಎಂ ಆರ್ ಪಿ ಎಲ್, ಸ್ಪಿಕ್, ಐಪಿಎಲ್ ಸೇರಿದಂತೆ ಬೇರೆ ಬೇರೆ ಕಂಪನಿಗಳ ಯೂರಿಯಾ ದಾವಣಗೆರೆ ಜಿಲ್ಲೆಗೆ ಬರುತ್ತಿದೆ. ರೈತರು ತಾಳ್ಮೆ ವಹಿಸಬೇಕು.‌ ಅಲ್ಲದೆ ವಾಡಿಕೆಯಂತೆ ಜಿಲ್ಲೆಯ ವಾರ್ಷಿಕ ಬೇಡಿಕೆಯಾದ 33,000 ಮೆಟ್ರಿಕ್ ಟನ್ ಈಗಾಗಲೇ ವಿತರಿಸಿದ್ದು, ರೈತರು ಹರಳು ರೂಪದ ಯೂರಿಯಾ ಹೆಚ್ಚು ಬಳಸುತ್ತಿರುವುದರಿಂದ ಅಭಾವ ಸೃಷ್ಟಿಯಾಗಿದೆ. ಆಹಾರದ ಬೆಳೆಗಳಿಗೆ ಕೃತಕ ಹರಳು ರೂಪದ ಯೂರಿಯಾ ಬಳಕೆಯಿಂದ ಮನುಷ್ಯನಲ್ಲಿ ರೋಗಗಳು ಹೆಚ್ಚಾಗುತ್ತಿದ್ದು, ಭೂಮಿಯ ಫಲವತ್ತತೆ ಕಡಿಮೆಯಾಗುವುದರಿಂದ ಇದರ ಬದಲಾಗಿ ನ್ಯಾನೋ ಯೂರಿಯಾ ಬಳಸುವತ್ತ ರೈತರು ಗಮನ ಹರಿಸಬೇಕು. ಇದು ಕೃಷಿ, ಭೂಮಿ ಮತ್ತು ಮಾನವನ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಯೂರಿಯಾ ಬಳಕೆ ಕನಿಷ್ಠ ಮಟ್ಟಕ್ಕೆ ಇಳಿಸಬೇಕಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಯೂರಿಯಾ ರಸಗೊಬ್ಬರ ಪೂರೈಕೆಗೆ ಜಗಳೂರಿನ ಹಲವೆಡೆ ರೈತಸಂಘ ರಸ್ತೆ ತಡೆದು ಪ್ರತಿಭಟನೆ

ಒಟ್ಟಿನಲ್ಲಿ ಕೃಷಿ ಒಳಸುರಿಗಳು, ಹವಾಮಾನದ ಮೇಲೆ ಅವಲಂಬಿತವಾಗಿರುವ ರೈತರಿಗೆ ಮುಂಗಡವಾಗಿ ಉತ್ತಮ ಬೀಜ ರಸಗೊಬ್ಬರ ಸೂಕ್ತ ಬೆಲೆಯಲ್ಲಿ ವಿವರಿಸುವಲ್ಲಿ ಸರ್ಕಾರ ಮತ್ತು ಕೃಷಿ ಇಲಾಖೆಗಳು ಮುಂದಾಲೋಚನೆಯಿಲ್ಲದೇ ರೈತರನ್ನು ಖಾಸಗಿಯವರ ಶೋಷಣೆಗೆ ತಳ್ಳುತ್ತಿವೆ. ಇದಕ್ಕೆ ಇಲಾಖೆಯ ಹೊಣೆ ಹೊತ್ತವರು ಹಾಗೂ ಇಲಾಖೆಯ ಅಧಿಕಾರಿಗಳು ದೂರದೃಷ್ಟಿಯ ಕೊರತೆ ಕಾರಣವೆನ್ನಬಹುದು. ರೈತರ ಪರ ಎಂದು ಪದೇ ಪದೇ ಹೇಳಿಕೊಳ್ಳುವ ಸರ್ಕಾರಗಳು ಅನ್ನದಾತನ ನೆರವಿಗೆ ಬರುವಲ್ಲಿ ಹಿಂದೆಬಿದ್ದಿವೆ.‌ ಇದರಿಂದ ರೈತರು ಆರ್ಥಿಕವಾಗಿ ಶೋಷಣೆ, ನಷ್ಟ ಅನುಭವಿಸುತ್ತಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿರುವ ಕೃಷಿ ಇಲಾಖೆ, ಸರ್ಕಾರಗಳು ಮುಂಗಡವಾಗಿ ರೈತರಿಗೆ ಬೇಕಾದ ಸಾಮಗ್ರಿಗಳ ಪೂರೈಕೆಗೆ ಯೋಜನೆ ರೂಪಿಸಿಕೊಳ್ಳುವ ಅಗತ್ಯ ಮನಗಾಣಬೇಕು ಎಂಬುದು ರೈತ ಸಮುದಾಯದ ಆಗ್ರಹವಾಗಿದೆ.‌

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X