ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಲೈಂಗಿಕ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಆಗಸ್ಟ್ 1ರಂದು ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಲಯ, ಆಗಸ್ಟ್ 2ರಂದು ಶಿಕ್ಷೆಯನ್ನು ಪ್ರಕಟಿಸಿದೆ. ಅಪರಾಧಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ತನ್ನ ಈ ಕೃತ್ಯಗಳನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ, ಸಾವಿರಾರು ಲೈಂಗಿಕ ದೌರ್ಜನ್ಯದ ವಿಡಿಯೋಗಳುಳ್ಳ ಪೆನ್‌ಡ್ರೈವ್‌ಗಳು 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಹಾಸನದಲ್ಲಿ ದೊರೆತಿದ್ದವು. ಆ ವಿಡಿಯೋಗಳಿಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ನಾಲ್ಕು ಪ್ರಕರಣಗಳ ಪೈಕಿ ಮೊದಲನೇ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನ ತೋಟದ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದ ಕೆ.ಆರ್ ನಗರದ ಮಹಿಳೆ ಮೇಲೆ ಅಪರಾಧಿ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು. ಮಾತ್ರವಲ್ಲದೆ, ತನ್ನ ಕೃತ್ಯವನ್ನು ತಾನೇ ವಿಡಿಯೋ ಮಾಡಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ಸಂತ್ರಸ್ತೆಯನ್ನು ಪ್ರಜ್ವಲ್‌ನ ಕುಟುಂಬವು ಅಪಹರಣ ಮಾಡಿತ್ತು. ಈ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಆರೋಪ ಸಾಬೀತಾಗಿದೆ. ಅಷ್ಟೇ ಅಲ್ಲದೇ, ಸಂತ್ರಸ್ತೆಯರ ಹೇಳಿಕೆ, ಬಲವಾದ ವಿಧಿವಿಜ್ಞಾನ ಸಾಕ್ಷಿಗಳು ಮತ್ತು ಛಾಯಾಚಿತ್ರ ಹೊಂದಾಣಿಕೆ ಈತನೇ ತಪ್ಪಿತಸ್ಥ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿದೆ.
ಪ್ರಕರಣ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲಾಗಿದ್ದು, ವಿಚಾರಣೆ ಆರಂಭವಾದ ಕೇವಲ 7 ತಿಂಗಳಿನಲ್ಲೇ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಒಟ್ಟು 424 ಪುಟಗಳ ತೀರ್ಪಿನಲ್ಲಿ ಘೋಷಿಸಿದ್ದಾರೆ. ಇನ್ನೂ ಮೂರು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
47 ವರ್ಷ ವಯಸ್ಸಿನ ಮನೆಕೆಲಸದ ಮಹಿಳೆಯ ಮೇಲೆ ಪ್ರಜ್ವಲ್ ರೇವಣ್ಣ ಮೂರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದರು. ದೂರಿನಲ್ಲಿ; ತನ್ನ ಮೇಲೆ ಹಾಸನದ ಗನ್ನಿಕಾಡದಲ್ಲಿರುವ ತೋಟದ ಮನೆಯಲ್ಲಿ ಎರಡು ಬಾರಿ ಹಾಗೂ ಬೆಂಗಳೂರಿನಲ್ಲಿರುವ ರೇವಣ್ಣನ ಕುಟುಂಬಕ್ಕೆ ಸೇರಿಸ ಮನೆಯಲ್ಲಿ ಒಮ್ಮೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಘಟನೆಗಳು 2020-2021ರಲ್ಲಿ ನಡೆದಿವೆ ಎಂದು ತಿಳಿಸಿದ್ದರು.
ಅಂದಹಾಗೆ, 2024ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಸಂಸದನೂ ಆಗಿದ್ದ ಪ್ರಜ್ವಲ್ ರೇವಣ್ಣ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಹಾಸನದಲ್ಲಿ ಸ್ಪರ್ಧಿಸಿದ್ದರು. ಆತನ ಪರವಾಗಿ, ಪ್ರಧಾನಿ ಮೋದಿ ಅವರೂ ಪ್ರಚಾರ ಮಾಡಿದ್ದರು. ಪ್ರಜ್ವಲ್‌ಗೆ ಮತ ಚಲಾಯಿಸುವಂತೆ ಮತದಾರರಲ್ಲಿ ಮೋದಿ ಮನವಿ ಮಾಡಿಕೊಂಡಿದ್ದರು. ಮತದಾನಕ್ಕೆ ಕೇವಲ 3 ದಿನಗಳು ಬಾಕಿ ಇದ್ದಾಗ, ಆತನ ಲೈಂಗಿಕ ಹಗರಣದ ವಿಡಿಯೋಗಳು ಬೆಳಕಿಗೆ ಬಂದಿದ್ದವು.
ಈ ಬೆನ್ನಲ್ಲೇ, 2024ರ ಏಪ್ರಿಲ್ 26ರಂದು ಮತ ಚಲಾಯಿಸಿದ ಪ್ರಜ್ವಲ್ ರೇವಣ್ಣ, ಅಂದು ರಾತ್ರಿಯೇ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ, ಜರ್ಮನಿಗೆ ಪಲಾಯನ ಮಾಡಿದ್ದರು. ಆತನ ವಿರುದ್ಧ ಕೆ.ಆರ್ ನಗರದ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ 2024ರ ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಪೊಲೀಸರು ಪ್ರಜ್ವಲ್ ವಿರುದ್ಧ ಐಪಿಸಿ ಸೆಕ್ಷನ್ 376(2)(ಎನ್), 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಿದ್ದರು. ಆ ನಂತರ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಇತರ ಮೂರು ದೂರುಗಳು ದಾಖಲಾದವು.
ಅಷ್ಟೇ ಅಲ್ಲ, ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗಾಗಿ ಐಪಿಎಸ್ ಅಧಿಕಾರಿ ಬಿ.ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತು. ತನಿಖಾ ತಂಡವು ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ನೋಟಿಸ್ ಜಾರಿ ಮಾಡಿತು. ಆದರೆ, ವಿಚಾರಣೆ ಬಾರದ ಪ್ರಜ್ವಲ್ ತನ್ನ ವಕೀಲರಿಂದ ಸಮಯ ಕೋರಿ ಪ್ರತಿಕ್ರಿಯೆ ಬರೆದರು. ಆ ಬಳಿಕ, ಆತನ ವಿರುದ್ಧ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿತು.
ಇದೇ ಸಂದರ್ಭದಲ್ಲಿ, ಪ್ರಜ್ವಲ್‌ನ ಬಂಧನಕ್ಕೆ ಆಗ್ರಹಿಸಿ ದೇಶಾದ್ಯಂತ ಆಗ್ರಹಗಳು ಕೇಳಿಬಂದವು. ಹಾಸನದಲ್ಲಿ ‘ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ’ಗಳು ‘ಹಾಸನ ಚಲೋ’ ಬೃಹತ್ ಪ್ರತಿಭಟನೆ ನಡೆಸಿದವು.
ಆದಾಗ್ಯೂ, ಜರ್ಮನಿಗೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ ಬರೋಬ್ಬರಿ 34 ದಿನ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಲುಕ್ ಔಟ್ ನೋಟಿಸ್‌ಗೂ ಪ್ರಜ್ವಲ್ ಜಗ್ಗಲಿಲ್ಲ. ಬಳಿಕ, ಎಸ್‌ಐಟಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿತು. ಆ ನಂತರ, 2024ರ ಮೇ 27ರಂದು ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಪ್ರಜ್ವಲ್, 2024ರ ಮೇ 31ರಂದು ಬೆಂಗಳೂರಿಗೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುವುದಾಗಿ ಹೇಳಿಕೊಂಡಿದ್ದರು. ಮೇ 31ರಂದು ತಡರಾತ್ರಿ ಬೆಂಗಳೂರಿಗೆ ಬಂದ ಪ್ರಜ್ವಲ್‌ನನ್ನು ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಅಧಿಕಾರಿಗಳು ಬಂಧಿಸಿದರು. ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಆ ನಂತರ, ನಾಲ್ಕು ಪ್ರಕರಣದಲ್ಲಿಯೂ ಕೂಡ ಪ್ರಜ್ವಲ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು.
ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿಗೆ ಪ್ರಮುಖ ಸವಾಲುಗಳು ಇದ್ದವು. ಸಂತ್ರಸ್ತರ ಮೇಲೆ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಎಸಗಿದ್ದು, ಅದನ್ನು ತಾನೇ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಸಾಬೀತು ಪಡಿಸುವುದು ತನಿಖಾಧಿಕಾರಿಗಳಿಗೆ ಸವಾಲಾಗಿತ್ತು. ಬಹಿರಂಗಗೊಂಡಿದ್ದ ವಿಡಿಯೋಗಳಲ್ಲಿ ಸಂತ್ರಸ್ತರ ಮುಖ ಕಾಣಿಸುತ್ತಿತ್ತು. ಆದರೆ, ವೀಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿಯ ಮುಖ ಕಾಣಿಸುತ್ತಿರಲಿಲ್ಲ. ಆತನ ಕೈಗಳು ಮತ್ತು ಗುಪ್ತಾಂಗ ಮಾತ್ರವೇ ವಿಡಿಯೋದಲ್ಲಿ ಸೆರೆಯಾಗಿತ್ತು. ಪ್ರಜ್ವಲ್ ರೇವಣ್ಣನೇ ವಿಡಿಯೋ ಮಾಡಿದ್ದಾನೆ ಎಂಬುದನ್ನು ಗುರುತಿಸಿ, ಸಾಬೀತು ಮಾಡಲು ಪೊಲೀಸರು ಟರ್ಕಿ ಮತ್ತು ಜಪಾನ್‌ನ ಕೆಲವು ಅಧ್ಯಯವನ್ನು ಅವಲಂಬಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗುಪ್ತಾಂಗಗಳ ದೈಹಿಕ ಗುಣಲಕ್ಷಣಗಳನ್ನು ಶಂಕಿತನ ದೈಹಿಕ ಗುಣಲಕ್ಷಣಗಳೊಂದಿಗೆ ಹೋಲಿಸುವ ಮೂಲಕ ಶಂಕಿತನನ್ನು ಹೇಗೆ ಗುರುತಿಸಬಹುದು ಎಂಬುದನ್ನು ಎರಡೂ ಅಧ್ಯಯನಗಳು ವಿವರಿಸಿವೆ. ಸಾಮಾನ್ಯವಾಗಿ ಅನೇಕ ದೇಶಗಳಲ್ಲಿ ವಿಶೇಷವಾಗಿ ಮಕ್ಕಳ ಲೈಂಗಿಕ ದೌರ್ಜನ್ಯದ ವೀಡಿಯೊಗಳನ್ನು ಒಳಗೊಂಡ ಅಪರಾಧಗಳಲ್ಲಿ ಈ ರೀತಿ ಗುರುತಿಸುವಿಕೆಯಿಂದ ಅಪರಾಧಿಯನ್ನು ಪತ್ತೆಹಚ್ಚಲಾಗುತ್ತದೆ ಎಂಬುದನ್ನು ಗಮನಿಸಬಹುದು.
ಇನ್ನು ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ ಬಳಿಕ ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿತ್ತು. ಪ್ರಜ್ವಲ್ ಸಾಮಾನ್ಯ ವೈದ್ಯಕೀಯ ಪರೀಕ್ಷೆಗೆ ಒಪ್ಪಿದರೂ, ಅವರ ದೇಹದ ಚಿತ್ರಗಳನ್ನು ಸೆರೆಹಿಡಿಯಲು ನಿರಾಕರಿಸಿದ್ದರು. ಆ ಹಂತದಲ್ಲಿ ವೈದ್ಯರು ಸಹ ಪ್ರಜ್ವಲ್‌ನ ದೇಹದ ಚಿತ್ರಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ತನಿಖಾಧಿಕಾರಿಗಳು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (CrPC) ಸೆಕ್ಷನ್ 53A ಅಡಿಯಲ್ಲಿ ನ್ಯಾಯಾಂಗ ಅನುಮೋದನೆಯನ್ನು ಕೋರಿದ್ದರು. ನಂತರ ವೈದ್ಯರು ವಿಡಿಯೋದಲ್ಲಿ ಕಂಡುಬರುವ ಅವರ ದೇಹದ ಭಾಗಗಳ ಛಾಯಾಚಿತ್ರಗಳನ್ನು ತೆಗೆದುಕೊಂಡಿದ್ದರು.
ವೀಡಿಯೊದಲ್ಲಿ ಕಂಡುಬರುವ ಮತ್ತು ಛಾಯಾಚಿತ್ರಗಳ ನಡುವಿನ ಹೋಲಿಕೆಯಲ್ಲಿ ಕೈಗಳು ಮತ್ತು ಜನನಾಂಗಗಳ ಮೇಲೆ 10 ಗುರುತುಗಳು ಹೊಂದಿಕೆಯಾಗುತ್ತಿವೆ ಎಂದು ಕಂಡುಬಂದಿದೆ. ಇಷ್ಟೇ ಅಲ್ಲದೇ, ವಿಡಿಯೋದಲ್ಲಿ ಕೇಳಿಬಂದ ಆಡಿಯೋ ಕೂಡ ಪ್ರಜ್ವಲ್ ಅವರ ಧ್ವನಿಯ ಮಾದರಿಗೆ ಹೊಂದಿಕೆಯಾಗುತ್ತಿದೆ ಎಂಬುದನ್ನು ಎಸ್‌ಐಟಿ ಅಧಿಕಾರಿಗಳು ದೃಢಪಡಿಸಿಕೊಂಡರು.
ಅಪರಾಧದ ಸ್ಥಳಗಳಾದ ಪ್ರಜ್ವಲ್ ಅವರ ತೋಟದ ಮನೆಯ ಕೋಣೆ ಮತ್ತು ಬೆಂಗಳೂರಿನ ನಿವಾಸದಲ್ಲಿರುವ ಅವರ ಕೋಣೆಗೆ ಹೋಲಿಕೆ ಮಾಡುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಸ್ಥಳಗಳ ಮಹಜರು ಸಮಯದಲ್ಲಿ, ವೀಡಿಯೊದಲ್ಲಿ ಕಂಡುಬರುವ ಮನೆಯ ಹಿನ್ನೆಲೆ ಮತ್ತು ನೆಲದ ಟೈಲ್ಸ್‌ಗಳು ಅವರ ಕೋಣೆಯಂತೆಯೇ ಇವೆ ಎಂದು ಪೊಲೀಸರು ಸ್ಪಷ್ಟವಾಗಿ ತೋರಿಸಿದ್ದಾರೆ.
ಇಷ್ಟೇ ಅಲ್ಲದೇ, ಪೊಲೀಸರು ಸಂತ್ರಸ್ತರ ಬಟ್ಟೆಗಳಿಂದ ಡಿಎನ್‌ಎ ಮಾದರಿಯನ್ನು ಸಹ ವಶಪಡಿಸಿಕೊಂಡಿದ್ದರು. ಈ ಡಿಎನ್ಎ ಮಾದರಿಯು ಪ್ರಜ್ವಲ್‌ಗೆ ಡಿಎನ್‌ಎಗೆ ಹೊಂದಿಕೆಯಾಯಿತು.
ಐಟಿ ಕಾಯ್ದೆಯ ಸೆಕ್ಷನ್ 66E ಅಡಿಯಲ್ಲಿ ಪ್ರಜ್ವಲ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಇದು ಗೌಪ್ಯತೆಯ ಉಲ್ಲಂಘನೆಗೆ ಶಿಕ್ಷೆಯಾಗಿದೆ. ಈ ವಿಭಾಗವು ‘ಯಾರಾದರೂ ಉದ್ದೇಶಪೂರ್ವಕವಾಗಿ ಅಥವಾ ತಿಳಿದೂ ಯಾವುದೇ ವ್ಯಕ್ತಿಯ ಖಾಸಗಿ ಚಿತ್ರವನ್ನು ಅವರ ಒಪ್ಪಿಗೆಯಿಲ್ಲದೆ ಸೆರೆಹಿಡಿದರೆ, ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ, ಆ ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸಿದರೆ ಅವರನ್ನು ಶಿಕ್ಷಿಸಬಹುದು’ ಎಂದು ಹೇಳುತ್ತದೆ.
ಈ ಲೇಖನ ಓದಿದ್ದೀರಾ?: ಲೈಂಗಿಕ ಹಗರಣ | ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಕಳೆದ 15 ತಿಂಗಳ ಕಾನೂನು ಪ್ರಕ್ರಿಯೆಯಲ್ಲಿ ನಡೆದದ್ದೇನು?
ವಿಡಿಯೋ ಚಿತ್ರೀಕರಿಸಿದ ಫೋನ್ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ಪ್ರಜ್ವಲ್ ಬಳಿ ಇತ್ತು. ನಂತರ ಅದನ್ನು ಅವರ ಚಾಲಕನಿಗೆ ವರ್ಗಾಯಿಸಲಾಗಿದೆ ಎಂದು ತೋರಿಸಲು ಪುರಾವೆಗಳನ್ನು ಪ್ರಸ್ತುತಪಡಿಸುವ ಮೂಲಕ ಪೊಲೀಸರು ವಿಡಿಯೋವನ್ನು ಪ್ರಜ್ವಲ್ ರೇವಣ್ಣನನ್ನೇ ರೆಕಾರ್ಡ್ ಮಾಡಿದ್ದಾನೆ ಎಂದು ಸಾಬೀತುಪಡಿಸಿದ್ದಾರೆ.
ಇದೀಗ, ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಪ್ರಜ್ವಲ್‌ಗೆ ಶಿಕ್ಷೆ ವಿಧಿಸಿದೆ. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು, “ನಮಗೆ ಈ ಫಲಿತಾಂಶ ಬೇಕಿತ್ತು, ಇಲ್ಲದಿದ್ದರೆ ನಮ್ಮ ಎಲ್ಲ ಪ್ರಯತ್ನಗಳು ವ್ಯರ್ಥವಾಗುತ್ತಿದ್ದವು” ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ವಿಧಿವಿಜ್ಞಾನ ಸಾಕ್ಷ್ಯಗಳು ಪ್ರಬಲವಾಗಿದ್ದರೂ, ಶಿಕ್ಷೆಗೆ ನಿರ್ಣಾಯಕ ಅಂಶವೆಂದರೆ ಸಂತ್ರಸ್ತರ ಹೇಳಿಕೆ ಪ್ರಬಲವಾಗಿದೆ.
“ಸಂತ್ರಸ್ತೆ ವಿಡಿಯೋ ನೋಡಿದಾಗ ಮತ್ತು ವಿಚಾರಣೆಯ ಸಮಯದಲ್ಲಿ ತೊಂದರೆಗೊಳಗಾಗಿದ್ದರೂ ಹಿಂಜರಿಯಲಿಲ್ಲ” ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ ಹೇಳಿದ್ದಾರೆ.
“ಸಂತ್ರಸ್ತೆ ಸಾಕ್ಷಿ ಹೇಳುವಾಗ, ವಿಡಿಯೋ ನೋಡಿದಾಗ, ವಿಚಾರಣೆ ನಡೆಸಿದಾಗ ಮತ್ತು ತೀರ್ಪು ಪ್ರಕಟವಾದಾಗಲೂ ನ್ಯಾಯಾಲಯದಲ್ಲಿ ಹಲವಾರು ಬಾರಿ ಸಂತ್ರಸ್ತೆ ಕಣ್ಣೀರು ಸುರಿಸಿದ್ದಾರೆ. ಆದರೆ, ಆಕೆ ದೃಢನಿಶ್ಚಯದಿಂದ ಇದ್ದರು” ಎಂದು ಹೇಳಿದ್ದಾರೆ.