ವಚನಯಾನ | ಸಾಮಾಜಿಕ ಕಾಳಜಿಯಿಲ್ಲದ ವಿದ್ಯೆ ನಿರರ್ಥಕ

Date:

Advertisements

ಪರಂಪರಾಗತ ವಿದ್ಯೆಗಳು, ಅವುಗಳ ಮೇಲಿನ ಪುರೋಹಿತಶಾಹಿಗಳ ನಿಯಂತ್ರಣ ಮತ್ತು ಅವುಗಳ ವಾಣಿಜ್ಯೀಕರಣದ ಪರಂಪರೆ ಶತಶತಮಾನಗಳಿಂದ ಭಾರತದ ಉಪಖಂಡವನ್ನು ಬಾಧಿಸುತ್ತ ಬಂದಿದೆ. ಅಂದು ಸಂಸ್ಕೃತ ಮತ್ತು ಆ ಮಾಧ್ಯಮದ ಮೂಲಕ ನೀಡಲಾಗುತ್ತಿದ್ದ ಶಿಕ್ಷಣದ ಕ್ಷೇತ್ರಕ್ಕೆ ಬೇಲಿಯನ್ನು ಹಾಕಿ ಅದನ್ನು ಸಂಪೂರ್ಣವಾಗಿ ತಮ್ಮ ಸ್ವಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಪುರೋಹಿತಶಾಹಿಗಳ ದುರ್ಬುದ್ಧಿಯನ್ನು ಜಗತ್ತಿನ ಯಾವ ಜನಾಂಗದೊಂದಿಗೂ ಹೋಲಿಸಲಾಗದು.

ಈ ದೇಶದಲ್ಲಿ ವಿದ್ಯಾವಂತರು ಬಹಳಷ್ಟು ಜನ ಸಿಗುತ್ತಾರೆ, ಆದರೆ ಮನುಷತ್ವವುಳ್ಳ ಮಾನವಂತರು ಸಿಗುವುದು ವಿರಳ. ಬ್ರಿಟೀಷರ ಆಗಮನಪೂರ್ವದಲ್ಲಿ ವಿದ್ಯೆ ಕೇವಲ ಮೇಲ್ವರ್ಗದ ಸ್ವತ್ತಾಗಿತ್ತು. ಗುರುಕುಲಗಳು ಕೇವಲ ಬ್ರಾಹ್ಮಣರು ಹಾಗೂ ಕ್ಷತ್ರೀಯರಿಗೆ ಮಾತ್ರ ವಿದ್ಯೆಯನ್ನು ನೀಡುತ್ತಿದ್ದವು. ಅಂದಿನ ವಿದ್ಯೆ ಎಂದರೆ ಬಹುತೇಕ ಬ್ರಾಹ್ಮಣರಿಗೆ ದುಡಿಯದೆ ಉಣ್ಣಲು ನೆರವಾಗುವ ಧರ್ಮಶಾಸ್ತ್ರ ಮತ್ತು ಅದಕ್ಕೆ ಪೂರಕವಾದ ವಿಷಯಗಳು ಮಾತ್ರ. ಅಂದಿನ ಶಿಕ್ಷಣದ ಮಾಧ್ಯಮವೆಂದರೆ 95% ಭಾರತೀಯರಿಂದ ಮುಚ್ಚಿಡಲ್ಪಟ್ಟಿದ್ದ ಸಂಸ್ಕೃತ ಎಂಬ ಲಿಪಿಯಿಲ್ಲದ ವಿದೇಶಿ ಅಪೂರ್ಣ ಭಾಷೆ. ಬ್ರಿಟಿಷರು ಮೆಕಾಲೆ ನೀತಿಯನ್ನು ಜಾರಿಗೊಳಿಸಿ ಶಿಕ್ಷಣವನ್ನು ಸಾರ್ವತ್ರೀಕರಿಸಿದಾಗ ತಮ್ಮ ಗುರುಕುಲಗಳ ಬಾಗಿಲುಗಳನ್ನು ಸ್ವಯಂಪ್ರೇರಿತವಾಗಿ ತಾವೇ ಮುಚ್ಚಿ ಇಂಗ್ಲಿಷ್ ಶಿಕ್ಷಣವನ್ನು ಎಲ್ಲರಿಗಿಂತ ಮೊದಲು ಪಡೆದವರು ಇದೇ ವೈದಿಕರು. ಏಕೆಂದರೆ ಶಿಕ್ಷಣ ಪಡೆದು ಬ್ರಿಟಿಷರ ಕಾರಕೂನಗಿರಿ ಮಾಡಲು ತಮ್ಮನ್ನು ತಾವು ಸಜ್ಜುಗೊಳಿಸಲು ತಮ್ಮದೆಯಾದ ಗುರುಕುಲಗಳನ್ನು ಬ್ರಾಹ್ಮಣರು ತಾವೇ ತಮ್ಮ ಕೈಯಾರೆ ನಾಶ ಮಾಡಿದರು. ಬ್ರಿಟಿಷರಿಂದ ಭಾರತೀಯ ಶಿಕ್ಷಣ ಪದ್ದತಿ ನಾಶವಾಯಿತು ಎಂದು ಈಗ ಮಿಥ್ಯಾರೋಪ ಮಾಡುತ್ತಿರುವುದೂ ಅವರೆ. ಸಂಸ್ಕೃತವನ್ನು ಎಲ್ಲರಿಂದ ಮುಚ್ಚಿಟ್ಟು ಅದರ ಕೊಲೆ ಮಾಡಿದ ವೈದಿಕರೆ ಇಂದು ನಮ್ಮೆಲ್ಲರ ಮೇಲೆ ಸಂಸ್ಕೃತ ಮತ್ತು ಹಿಂದಿ ಭಾಷೆಗಳನ್ನು ಹೇರಲು ಹವಣಿಸುತ್ತಿದ್ದಾರೆ. ವಿದ್ಯೆಯನ್ನು ಸಂಸ್ಕಾರ, ವಿನಯ, ಸಭ್ಯತೆಯ ಮೂಲವಾಗಿ ಪರಿಗಣಿಸದೆ, ವೈದಿಕರು ನಿರಂತರವಾಗಿ ಅದೊಂದು ಹೊಟ್ಟೆ ಹೊರೆಯುವ ಸಾಧನವಾಗಿ ಬಳಸಿಕೊಂಡಿದ್ದಾರೆ.

ವಾತ್ಸಾಯನನ ಕಾಮಸೂತ್ರದಲ್ಲಿ 64 ಬಗೆಯ ವಿದ್ಯೆ ಅಥವಾ ಕಲೆಗಳ ಕುರಿತು ಉಲ್ಲೇಖವಿದೆ. ಅಂದಿನ ದಿನಮಾನಗಳಲ್ಲಿ ಈ ಎಲ್ಲಾ ಕಲೆಗಳು ಪ್ರಸ್ತುತವಾಗಿದ್ದವು ಹಾಗೂ ಅವು ಬಹುತೇಕ ಬ್ರಾಹ್ಮಣರ ಸ್ವತ್ತಾಗಿದ್ದವು. ವಿದ್ಯೆಯನ್ನು ಪಡೆಯುತ್ತಿದ್ದ ಬ್ರಾಹ್ಮಣರು ಅದನ್ನು ತಮ್ಮ ಉಪಜೀವನಕ್ಕಾಗಿ ಬಳಸುತ್ತಿದ್ದರೆ ಹೊರತು ಜನಕಲ್ಯಾಣಕ್ಕಾಗಿಯಲ್ಲ. ಈ ವಿದ್ಯೆಗಳು ಗೊತ್ತಿಲ್ಲದ ಬಹುಜನರನ್ನು ಅಂದು ಕೀಳಾಗಿ ಕಾಣಲಾಗುತ್ತಿತ್ತು. ಅದಕ್ಕೆ ಪ್ರತಿಯಾಗಿ ಶರಣರು “ಆವ ವಿದ್ಯೆ ಬಲ್ಲವರಾದರೇನು ಸಾವ ವಿದ್ಯೆ ತಿಳಿಯದು” ಎನ್ನುತ್ತಾರೆ. ಅದರ ಮುಂದುವರಿದ ಭಾಗವಾಗಿ ಸರ್ವಜ್ಞ “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು” ಎಂದು ಬಹುಜನ ರೈತ ಸಮುದಾಯವನ್ನು ಉನ್ನತೀಕರಿಸುತ್ತಾನೆ. ಬಸವಾದಿ ಶರಣರ ಕಾಲಘಟ್ಟದಲ್ಲಿ ಜನರ ಬದುಕನ್ನು ಕಟ್ಟಿಕೊಳ್ಳಲು ನೆರವಾಗದ ಈ ಬಗೆಯ ವಿದ್ಯೆಗಳಿಗೆ ಎಲ್ಲಿಲ್ಲದ ಮಹತ್ವ ನೀಡಲಾಗುತ್ತಿತ್ತು. ಇವುಗಳ ವೈಭವೀಕರಣ ಹಾಗೂ ಆ ಮೂಲಕ ಹುಟ್ಟುಹಾಕಲಾಗಿದ್ದ ಶೈಕ್ಷಣಿಕ ಅಸಮಾನತೆಯನ್ನು ಶರಣರು ಅತ್ಯಂತ ತೀಕ್ಷ್ಣವಾಗಿ ವಿಡಂಬಿಸುತ್ತಾರೆ ಮತ್ತು ತೀವ್ರವಾಗಿ ಖಂಡಿಸುತ್ತಾರೆ. ಪಂಚಾಂಗ ವಿದ್ಯೆ ಬಲ್ಲಾತ ಜನರ ಮೌಢ್ಯವನ್ನು ಬಂಡವಾಳ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ. ಧರ್ಮಶಾಸ್ತ್ರ, ವೇದಾಧ್ಯಯನ ಮತ್ತು ಆಗಮಶಾಸ್ತ್ರ ಅರಿತವನು ಅರ್ಚಕ ವೃತ್ತಿ ಮಾಡುತ್ತ ಜನರನ್ನು ದೋಚುತ್ತಿದ್ದ. ಕಣ್ಕಟ್ಟು ಮಾಟಮಂತ್ರ, ಮಾಂತ್ರಿಕ ವಿದ್ಯೆ, ಮುಂತಾದ ಕೈಚಳಕದ ವಿದ್ಯೆಗಳು ಕಲಿತವರು ಮುಗ್ದ ಜನರ ಸುಲಿಗೆ ಮಾಡುತ್ತಿದ್ದರು.

Advertisements
gurukula

ಸಂಸ್ಕೃತ ಭಾಷೆಯ ಪಂಡಿತರು ಕಾವ್ಯ, ಮಹಾಕಾವ್ಯಗಳನ್ನು ಬರೆದು ರಾಜ, ಮಹಾರಾಜರನ್ನು ಮೆಚ್ಚಿಸಿ ಆಸ್ಥಾನದಲ್ಲಿ ಉನ್ನತ ಸ್ಥಾನಮಾನ ಪಡೆದು ತಮ್ಮ ವೈಯಕ್ತಿಕ ಬದುಕು ಕಟ್ಟಿಕೊಳ್ಳುತ್ತಿದ್ದರು. ಮನುಷತ್ವವಿಲ್ಲದ, ಉಪಜೀವನದ ವಿದ್ಯೆಗಳನ್ನು ಶರಣರಾದ ಅಲ್ಲಮಪ್ರಭುದೇವರು ವಿಡಂಬಿಸುತ್ತಾ ಜನಪರವಾಗಿ ಕೆಲಸ ಮಾಡುವ ಬಸವಣ್ಣನವರನ್ನು ತಮ್ಮ ಈ ಕೆಳಗಿನ ವಚನದಲ್ಲಿ ಸ್ಮರಿಸಿಕೊಳ್ಳುತ್ತಾರೆ.

“ಕವಿಸಾಧಕರೆಲ್ಲರು ಕಳವಳಸಿ ಕೆಟ್ಟರು.
ವಿದ್ಯಾಸಾಧಕರೆಲ್ಲರು ಬುದ್ದಿ ಹೀನರಾದರು.
ಪವನ ಸಾಧಕರೆಲ್ಲರು ಹದ್ದು ಕಾಗೆಗಳಾದರು.
ಜಲಸಾಧಕರೆಲ್ಲರು ಕಪ್ಪೆ ಮೀನುಗಳಾದರು.
ಅನ್ನ ಸಾಧಕರೆಲ್ಲರು ಭೂತಪ್ರಾಣಿಗಳಾದರು.
ಬಸವಣ್ಣ, ಸದ್ಗುರುಸಾಧಕನಾಗಿ ಸ್ವಯಂಲಿಂಗವಾದ ಕಾಣಾ ಗುಹೇಶ್ವರಾ.”

ಭಾವಾರ್ಥ

ಭಾರತೀಯ ತತ್ವ ಪರಂಪರೆಯಲ್ಲಿ ಮಹಾ ಮಹಾ ಕವಿಗಳೆಲ್ಲ ಆಗಿಹೋಗಿದ್ದಾರೆ. ಅಂತಹ ಕವಿತ್ವ ಸಾಧಕರೆಲ್ಲರೂ ಕೊನೆಕೊನೆಗೆ ಇನ್ನೂ ಸಾಧಿಸಲಿಲ್ಲವಲ್ಲ ಅಂತಲೊ, ಮತ್ತೊಬ್ಬರಿಗಿಂತ ಕಡಿಮೆ ಸಾಧನೆಯಾಯಿತೆಂತಲೊ ಕಳಕಳದಿಂದ ಕೆಟ್ಟುಹೋದವರು. ನಮ್ಮಲ್ಲಿ ಆಗಿಹೋದ ಅದೆಷ್ಟೊ ವಿದ್ಯಾಸಾಧಕರು ವಿದ್ಯೆಯನ್ನು ಸಾಧಿಸಿಯೂ ವಿನಯ, ತತ್ವ ಮುಂತಾದ ಸತ್ವಗುಣವನ್ನು ಹೊಂದದೆ ಕೊನೆಗಾಲದಲ್ಲಿ ಬುದ್ದಿಹೀನರಾಗಿ ಹೋದರು. ನಮ್ಮ ಅನೇಕ ಋಷಿ ಮುನಿಗಳು ಪ್ರಾಣಾಯಾಮ, ಯೋಗ ಸಾಧನೆ ಮಾಡಿ ಪವನ ಸಾಧಕರೆಂದು ಪ್ರಸಿದ್ಧರಾದರು. ಗಾಳಿಯಂತೆ ತಮ್ಮ ದೇಹವನ್ನು ಹಗುರವಾಗಿಸಿಕೊಂಡು ಹದ್ದು ಕಾಗೆಗಳಂತೆ ಆಕಾಶದಲ್ಲಿ ಹಾರುವ ಸಾಧನೆ ಮಾಡಿದರು. ಅನೇಕ ಸಾಧಕರು ನೀರಿನೊಳಗೆ ಈಜುವುದುˌ ತೇಲುವುದು ಮುಂತಾದ ವಿದ್ಯೆಯನ್ನು ಸಾಧಿಸಿ ಕಪ್ಪೆ ಮೀನುಗಳಂತೆ ನೀರಿನ ಮೇಲೆ ತೇಲಿದರೆ ಹೊರತು ಮತ್ತಾವ ಜೀವನ್ಮುಖಿ ಕೆಲಸಗಳು ಮಾಡಲಿಲ್ಲ. ಅನೇಕ ಮಹಾನುಭಾವರು ಉಣ್ಣುವುದರಲ್ಲಿ ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿ ಅನ್ನಸಾಧಕರೆನ್ನಿಸಿ ಭೂತಪ್ರಾಣಿಗಳಂತಾದರು. ಬಸವಣ್ಣನವರು ಮಾತ್ರ ಈ ಲೋಕದ ಜನರ ಸಮಸ್ಸೆಗಳಿಗೆ ಪರಿಹಾರವನ್ನು ಕಲ್ಪಿಸುವ ಗುರುವಾಗಿˌ ಅಸಂಖ್ಯಾತ ಅಮರಗಣಂಗಳಿಗೆ ಸದ್ಗುರುವೆನ್ನಿಸಿˌ ದೇವರು ಮತ್ತು ಭಕ್ತರ ನಡುವಿನ ದಲ್ಲಾಳಿಗಳನ್ನು ನೀಗಲು ಇಷ್ಟಲಿಂಗವೆಂಬ ಅದ್ಭುತವಾದ ಪರಿಕಲ್ಪನೆಯನ್ನು ಪ್ರಯೋಗಿಸಿ ಸ್ವಯಂ ಲಿಂಗವಾದರು ಎನ್ನುವಲ್ಲಿಗೆ ಬಸವಣ್ಣನವರು ವೈಯಕ್ತಿಕ ಸಾಧನೆಗಳ ಮೂಲಕ ಲೋಕ ಪ್ರಸಿದ್ಧರಾಗುವ ಬದಲಿಗೆ ಸಾಮಾಜಿಕ ಸಾಧನೆಗಳಿಗೆ ಮನ್ನಣೆ ಕೊಟ್ಟು ಗುರುಸ್ಥಾನವನ್ನಲಂಕರಿಸಿದರು ಎನ್ನುತ್ತಾರೆ ಅಲ್ಲಮಪ್ರಭುದೇವರು.

ಇದನ್ನೂ ಓದಿ ವಚನಯಾನ | ಲಂಚ ವಂಚನೆಗೆ ಕೈಯಾನದ ಭಾಷೆ-ಶರಣೆ ಸತ್ಯಕ್ಕ

ಟಿಪ್ಪಣಿ

ಪರಂಪರಾಗತ ವಿದ್ಯೆಗಳು, ಅವುಗಳ ಮೇಲಿನ ಪುರೋಹಿತಶಾಹಿಗಳ ನಿಯಂತ್ರಣ ಮತ್ತು ಅವುಗಳ ವಾಣಿಜ್ಯೀಕರಣದ ಪರಂಪರೆ ಶತಶತಮಾನಗಳಿಂದ ಭಾರದ ಉಪಖಂಡವನ್ನು ಬಾಧಿಸುತ್ತ ಬಂದಿದೆ. ಅಂದು ಸಂಸ್ಕೃತ ಮತ್ತು ಆ ಮಾಧ್ಯಮದ ಮೂಲಕ ನೀಡಲಾಗುತ್ತಿದ್ದ ಶಿಕ್ಷಣದ ಕ್ಷೇತ್ರಕ್ಕೆ ಬೇಲಿಯನ್ನು ಹಾಕಿ ಅದನ್ನು ಸಂಪೂರ್ಣವಾಗಿ ತಮ್ಮ ಸ್ವಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಪುರೋಹಿತಶಾಹಿಗಳ ದುರ್ಬುದ್ಧಿಯನ್ನು ಜಗತ್ತಿನ ಯಾವ ಜನಾಂಗದೊಂದಿಗೂ ಹೋಲಿಸಲಾಗದು. ಬಹುಜನರಿಗೆ, ಬಡವರಿಗೆ, ದಲಿತ-ದಮನಿತರಿಗೆ, ಹಾಗೂ ದುರ್ಬಲರಿಗೆ ಶಿಕ್ಷಣವನ್ನು ನಿರಾಕರಿಸಿದವರು ತಮ್ಮನ್ನು ತಾವು ಪ್ರತಿಭಾವಂತರೆಂದು ಬಿಂಬಿಸಿಕೊಂಡು ಬಂದಿದ್ದಾರೆ. ಪ್ರತಿಭೆಯು ಯಾವುದೇ ಧರ್ಮ, ಜಾತಿ-ಜನಾಂಗದ ಸ್ವತ್ತಲ್ಲ ಎನ್ನುವ ವೈಜ್ಞಾನಿಕ ಸತ್ಯವನ್ನು ಅರಿಯದ ಈ ನೆಲದ ಮುಗ್ಧ ಹಾಗೂ ಮೂಢ ಜನರು ಯಾವುದೊ ಒಂದು ನಿರ್ದಿಷ್ಟ ಜನಾಂಗವನ್ನು ಇಡಿಯಾಗಿ ನೈಸರ್ಗಿಕವಾಗಿ ಪ್ರತಿಭಾವಂತರು ಎಂದು ಸ್ವಯಂ ಒಪ್ಪಿಕೊಂಡು ಹಾಗೆಯೇ ಬದುಕುತ್ತಿರುವುದು ಈ ನೆಲದ ವಿಪರ್ಯಾಸಗಳಲ್ಲಿ ಒಂದು. ತನ್ನೊಂದಿಗೆ ಓದುವ ಸಹಪಾಠಿಯ ಪುಸ್ತಕವನ್ನು ಮುಚ್ಚಿಟ್ಟು, ವಂಚಕತನದಿಂದ ಆತನಿಗೆ ಓದದಂತೆ ತಡೆಯೊಡ್ಡಿ ಪರೀಕ್ಷೆಯಲ್ಲಿ ತೇರ್ಗಡೆಯಾದವನು ಹೇಗೆ ಪ್ರತಿಭಾವಂತನಾಗಿರಲು ಸಾಧ್ಯ? ಬಹುಜನರನ್ನು ಧಾರ್ಮಿಕ ಕಟ್ಟಳೆಗಳಲ್ಲಿ ಬಂಧಿಸಿ, ಅವರನ್ನು ಶಿಕ್ಷಣದಿಂದ ಸತತವಾಗಿ ವಂಚಿಸುತ್ತಾ ಬಂದ ಸಮುದಾಯ ನೈಸರ್ಗಿಕವಾಗಿ ಪ್ರತಿಭಾವಂತರಾಗಿರಲು ಸಾಧ್ಯವೇಯಿಲ್ಲ.

ಅಲ್ಲಮ

ತಮ್ಮ ಕುಟಿಲತೆಯಿಂದ ಉಳಿದವರನ್ನು ಶಿಕ್ಷಣದಿಂದ ವಂಚಿಸಿದ ಸಮುದಾಯ ಅಂದಿನ ದಿನಮಾನದಲ್ಲಿ ಸುಶಿಕ್ಷಿತರಾಗಿ ಸಾಧಿಸಿದ್ದಾದರೂ ಏನು ಎನ್ನು ಪ್ರಶ್ನೆ ಇಂದಿಗೂ ನಮಗೆ ಕಾಡದಿರುವುದು ದುರಂತದ ಸಂಗತಿ. ಅವರು ಅಂದು ಅಸ್ತಿತ್ವದಲ್ಲಿದ್ದ ಆ ಎಲ್ಲಾ ವಿದ್ಯೆಗಳನ್ನು ಕಲಿತು ಒಂದಿನಿತೂ ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡಲಿಲ್ಲ. ಇಂದಿಗೂ ಅವರು ಕಲಿತ ವಿದ್ಯೆಯಿಂದ ಯಾವ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿಲ್ಲ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಓದಿಕೊಂಡವರು ಉದ್ಯೋಗ ಅರಸಿಕೊಂಡು ವಿದೇಶಕ್ಕೆ ಹಾರುತ್ತಾರೆ. ಇಲ್ಲಿರುವ ಅವರ ಕುಲ ಬಾಂಧವರು ಸ್ವದೇಶಿಯತೆ, ದೇಶಭಕ್ತಿಯ ಪಾಠವನ್ನು ಶೂದ್ರರ ಮಕ್ಕಳಿಗೆ ಹೇಳುತ್ತಿರುತ್ತಾರೆ. ಅವರ ಮಕ್ಕಳು ಮಾತ್ರ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಹಣ ಗಳಿಸುತ್ತಾ ಅಲ್ಲಿ ವೆಂಕಟೇಶನ ದೇವಸ್ಥಾನ ನಿರ್ಮಿಸುತ್ತಾರೆ ಹೊರತು ಯಾವೊಂದು ವೈಜ್ಞಾನಿಕ ಚಿಂತನೆ ಮಾಡುವುದಿಲ್ಲ. 2500 ವರ್ಷಗಳಿಂದ ಅವರ ವಿಚಾರ, ಆಚಾರ, ಕಾರ್ಯ ಹಾಗೂ ಬದುಕಿನ ಉದ್ದೇಶಗಳ ಕುರಿತ ಚಿಂತನೆಗಳಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲ. ಉಳಿದವರಿಗೆ ಸಾಂಪ್ರದಾಯವನ್ನು ಪಾಲಿಸುವಂತೆ ಕರೆ ಕೊಡುತ್ತಾ ತಾವು ಮಾತ್ರ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಾ ತಮ್ಮ ವೈಯಕ್ತಿಕ ಬದುಕನ್ನು ಉನ್ನತೀಕರಿಸಿಕೊಳ್ಳುತ್ತಾರೆ. ಇಷ್ಟಾದರೂ ಶೂದ್ರರಿಗೆ ಅವರ ಕಪಟತನ ಅರಿವಿಗೆ ಬರುವುದಿಲ್ಲ. ಅಲ್ಲಮರು ಸ್ವಾರ್ಥಿ ಪುರೋಹಿತಶಾಹಿಗಳ ಈ ಕುಟಿಲತೆಯನ್ನು ಮೇಲಿನ ವಚನದಲ್ಲಿ ಅರಹುತ್ತಾ ಬಸವಣ್ಣನವರ ಸಮಾಜೋನ್ನತಿಯ ಕಾರ್ಯವನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X