ಚುನಾವಣಾ ಅಧಿಕಾರಿಯಿಂದ ವಿಜಯ ಪ್ರಮಾಣಪತ್ರವನ್ನು ಪಡೆದ ಉತ್ತರಾಖಂಡ ತರ್ಕುಲಿ ಗ್ರಾಮ ಪಂಚಾಯತ್‌ನ ಘೋಷಿತ ವಿಜೇತೆಯೊಬ್ಬರು “ನನ್ನ ಎದುರಾಳಿಯೇ ನಿಜವಾದ ವಿಜೇತ” ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ತರ್ಕುಲಿ ಗ್ರಾಮ ಪಂಚಾಯತ್‌ನ ಮುಖ್ಯಸ್ಥ ಹುದ್ದೆಗೆ ಚುನಾವಣೆ ನಡೆದಿದ್ದು ಫಲಿತಾಂಶ ಪ್ರಕಟವಾಗಿದೆ. ಕಾಜಲ್ ಬಿಶ್ಟ್ ಅವರನ್ನು ವಿಜೇತೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ್ದು ಅವರಿಗೆ ವಿಜಯ ಪ್ರಮಾಣಪತ್ರವನ್ನೂ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರಾಖಂಡ | ಖಾಸಗಿ ಹೆಲಿಕಾಪ್ಟರ್ ಪತನ; ಐವರು ಸಾವು
ಕಾಜಲ್ ಬಿಶ್ಟ್ 103 ಮತಗಳನ್ನು ಪಡೆದರೆ, ಅವರ ಎದುರಾಳಿ ಸುಮಿತ್ ಕುಮಾರ್ 106 ಮತಗಳನ್ನು ಪಡೆದಿದ್ದಾರೆ. ಆದರೆ ಬಿಶ್ಟ್ ಅವರನ್ನು ವಿಜೇತೆ ಎಂದು ಘೋಷಿಸಲಾಗಿದ್ದು ಗೊಂದಲ ಉಂಟಾಗಿತ್ತು. ಆದರೆ ಚುನಾವಣಾ ಅಧಿಕಾರಿಗಳ ತಪ್ಪನ್ನು ಕಾಜಲ್ ಬಿಶ್ಟ್ ಅವರೇ ತಿದ್ದಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ.
“ನಾನು ಚುನಾವಣೆಯಲ್ಲಿ ಗೆಲ್ಲಲಿಲ್ಲ, ನಾನು ಸೋತಿದ್ದೇನೆ ಎಂದು ನಾನು ಚುನಾವಣಾ ಅಧಿಕಾರಿಗೆ ಹೇಳಿದೆ. ನನ್ನ ಎದುರಾಳಿಗೆ ನನಗಿಂತ ಹೆಚ್ಚುವರಿ ಮೂರು ಅಧಿಕ ಮತಗಳು ಲಭಿಸಿದೆ. ಆದ್ದರಿಂದ ಪ್ರಮಾಣಪತ್ರವನ್ನು ನಿಜವಾದ ವಿಜೇತರಿಗೆ ನೀಡಬೇಕು”ಎಂದು ಬಿಶ್ಟ್ ಹೇಳಿದ್ದಾರೆ.
ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ವಿಷಯ ಬಗೆಹರಿಯದ ಕಾರಣ ಬಿಶ್ಟ್ ಕೋರ್ಟ್ ಕದ ತಟ್ಟಿದ್ದಾರೆ. ಬಿಶ್ಟ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅನುರಾಗ್ ಆರ್ಯ ಅವರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಿಶ್ಟ್ ಅರ್ಜಿಯನ್ನು ವಿಚಾರಣೆ ಸ್ವೀಕರಿಸಿದ ಎಸ್‌ಡಿಎಂ, 30 ದಿನಗಳಲ್ಲಿ ಮತಗಳನ್ನು ಮರುಎಣಿಕೆ ಮಾಡುವಂತೆ ಚುನಾವಣಾ ಅಧಿಕಾರಿಗೆ ಆದೇಶಿಸಿದೆ. ಮರುಎಣಿಕೆಯ ದಿನಾಂಕವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
