ಹಿಂಸಾಚಾರದಲ್ಲಿ ಭಾಗಿಯಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲಿಗೆ ಬೇಕಾಬಿಟ್ಟಿಯಾಗಿ ಜನರನ್ನು ಬಂಧಿಸಲಾಯಿತು ಹಾಗೂ ತದನಂತರ ಕಾನೂನನ್ನು ಬದಿಗಿಟ್ಟು, ಮನೆ ಮತ್ತು ಅಂಗಡಿಗಳನ್ನು ಅತಿಕ್ರಮಣದ ಹೆಸರಿನಲ್ಲಿ ಕೆಡವಲಾಯಿತು. ಕೊನೆಗೆ ಹೈಕೋರ್ಟ್ ಇದನ್ನು ನಿಲ್ಲಿಸಿತು. ಇವೆಲ್ಲ ಶಾಂತಿ ಸ್ಥಾಪಿಸುವ ಬದಲಿಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷದ ಮೇಲೆ ಸೇಡು ತೀರಿಸಿಕೊಳ್ಳುವ ಕ್ರಮದಂತೆ ಕಾಣುತ್ತಿದೆ
“ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದ ಹಿಂದೂ ಭಕ್ತಾದಿಗಳ ಮೇಲೆ ಮುಸ್ಲಿಂ ದಂಗೆಕೋರರಿಂದ ನಿಯೋಜಿತ ದಾಳಿ… ಎರಡು ಸಮುದಾಯಗಳ ಸಂಘರ್ಷದ ಮುಂದೆ ಅಸಹಾಯಕರಾದ ಪೊಲೀಸರು” -ಜುಲೈ 31ರ ಸಂಜೆ ನೂಹ್ನ ಈ ಸುದ್ದಿಗಳನ್ನು ನೋಡಿ ನನ್ನ ಚಿಂತೆ ಎಲ್ಲೆ ಮೀರಿತ್ತು.
ಕಳೆದ ಇಪ್ಪತ್ತರೆಡು ವರ್ಷಗಳಿಂದ ಹರಿಯಾಣದ ಮೇವಾತ್ ಪ್ರದೇಶದೊಂದಿಗೆ ನನ್ನ ನಿಕಟ ಸಂಬಂಧವಿದೆ. ಮಾರನೆಯ ದಿನ ಆಗಸ್ಟ್ 1ರಂದೇ ನಾನು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಯ ಮುಖ್ಯಾಲಯ ನೂಹ್ ತಲುಪಿದೆ. ಅಲ್ಲಿ ಡಿಸಿ ಮತ್ತು ಎಸ್ಪಿ ಅವರನ್ನು ಭೇಟಿಯಾದೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟೆ, ಹಿಂಸಾಚಾರಕ್ಕೆ ಬಲಿಯಾದ ಕೆಲವು ಸಂತ್ರಸ್ತರನ್ನು ಭೇಟಿಯಾದೆ ಹಾಗೂ ಅನೇಕ ಪ್ರತ್ಯಕ್ಷ ಸಾಕ್ಷಿಗಳನ್ನು ಭೇಟಿಯಾದೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕ ವಿಡಿಯೊ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದೆ. ಮಾಧ್ಯಮಗಳು ಮತ್ತು ಕೇವಲ ಸ್ವಾರ್ಥಕ್ಕಾಗಿ ಹರಡಿಸಲಾಗುತ್ತಿದ್ದ ಪ್ರೊಪಗಾಂಡಾವನ್ನು ಕೇಳುತ್ತಿದ್ದೆ. ಒಟ್ಟಾರೆಯಾಗಿ ದೇಶದ ಎದುರಿಗೆ ಅರ್ಧಸತ್ಯಗಳಿಂದ ಕೂಡಿದ ಒಂದು ಭ್ರಮಾತ್ಮಕ ಚಿತ್ರಣ ರಚಿಸಲಾಗುತ್ತಿದೆ. ಅದು ರಾಷ್ಟ್ರೀಯ ಏಕತೆಗೆ ಮಾರಕವಾಗಿದೆ. ಹಾಗಾಗಿ, ಈ ಘಟನೆ ಮತ್ತು ಇದರ ಸಂದರ್ಭದ ಸಂಪೂರ್ಣ ಸತ್ಯವನ್ನು ದೇಶದ ಮುಂದೆ ಇಡುವುದು ಅತ್ಯವಶ್ಯಕವಾಗಿದೆ.
ಅರ್ಧಸತ್ಯ 1: “ಇದು ಮುಸ್ಲಿಂ ದಂಗೆಕೋರರು ಮಾಡಿದ ಸುನಿಯೋಜಿತ ದಾಳಿ”. ಹೌದು, ಕಲ್ಲೆಸೆತ ಮತ್ತು ಹಿಂಸೆಯ ಆರಂಭವು ಮುಸ್ಲಿಂ ಗುಂಪುಗಳಿಂದ ಆಗಿತ್ತು. ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಯ ನೈತಿಕ ಹೊಣೆಗಾರಿಕೆ ಮುಸ್ಲಿಂ ಸಮುದಾಯದ್ದಾಗಿರುತ್ತೆ ಎಂಬುದೂ ಸತ್ಯ. ಆದರೆ, ಅಪರಾಧಿಗಳನ್ನು ಗುರುತಿಸುವ ಈ ಕಥನದಲ್ಲಿ ಅನೇಕ ಸುಳ್ಳುಗಳು ಅಡಗಿವೆ. ಮೊದಲನೆಯದು, ಈ ಕಥಾನಕವು ಕೆಲವೇ ಕೆಲವು ಮುಸ್ಲಿಂ ಗೂಂಡಾಗಳ ಕುಕೃತ್ಯದ ಹೊಣೆಗಾರಿಕೆಯನ್ನು ಇಡೀ ಮುಸ್ಲಿಂ ಸಮುದಾಯದ ಮೇಲೆ ಹಾಕುತ್ತದೆ. ಇದನ್ನು ಒಂದು ವೇಳೆ ಒಪ್ಪಿಕೊಳ್ಳಬೇಕೆಂದರೆ, ಗುರುಗಾಂವದಲ್ಲಿ ಮಸೀದಿಯ ಮೇಲೆ ಆದ ದಾಳಿ ಮತ್ತು ಅದರ ಮೌಲ್ವಿಯ ಕೊಲೆಯ ಹೊಣೆಗಾರಿಕೆಯನ್ನು ಹಿಂದೂ ಸಮುದಾಯದ ಮೇಲೆ ಹಾಕಬಹುದೇ? ಎರಡನೆಯದಾಗಿ, ಇಷ್ಟು ದೊಡ್ಡ ಪ್ರಮಾಣದ ಹಿಂಸೆ ಯಾವುದೇ ರೀತಿಯ ಸಿದ್ಧತೆಯಿಲ್ಲದೇ ಆಗಲು ಸಾಧ್ಯವಿಲ್ಲ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಇದರಲ್ಲಿ ಯಾವುದೇ ಸಂಘಟನೆಯ ಕೈವಾಡ ಇರುವುದಕ್ಕೆ ಯಾವ ಪ್ರಮಾಣಗಳೂ ಇಲ್ಲ. ಮೂರನೆಯದಾಗಿ, ಈ ಕಥಾನಕ ಒಂದು ಸತ್ಯವನ್ನು ಮರೆಮಾಚುತ್ತದೆ, ಅದೇನೆಂದರೆ, ದಾಳಿಯನ್ನು ಆರಂಭಿಸುವವರು ಮುಸಲ್ಮಾನರಾಗಿದ್ದಾಗ, ನೂಹ್ನ ಮ್ಯಾಜಿಸ್ಟ್ರೇಟ್, ಭಾದಸ ಗ್ರಾಮದ ಗುರುಕಲು ಹಾಗೂ ಬಡಕಲಿ ಚೌಕಿನ ಹಿಂದೂ ವ್ಯಾಪಾರಿಗಳನ್ನು ರಕ್ಷಿಸುವವರೂ ಮುಸಲ್ಮಾನರೇ ಆಗಿದ್ದರು ಎಂಬುದು.
ಅರ್ಧಸತ್ಯ 2: “ಈ ಹಿಂಸಾಚಾರದ ಬಲಿಪಶುಗಳು ಒಂದು ಧಾರ್ಮಿಕ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಭಕ್ತಾದಿಗಳು.” ಈ ಹಿಂಸಾಚಾರದ ಬಲಿಪಶುಗಳನ್ನು ಗುರುತಿಸುವ ಈ ಕಥಾನಕವೂ ಅರ್ಧಸತ್ಯವಾಗಿದೆ. ನಲಹಡನ ಶಿವ ಮಂದಿರದ ಪರಂಪರೆಯ ಅನುಗುಣವಾಗಿ ಈ ಯಾತ್ರೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಸ್ವಾಭಾವಿಕವಾಗಿಯೇ ಅವರ್ಯಾರೂ ದಂಗೆ ಮಾಡಲು ಬಂದಿದ್ದಿಲ್ಲ. ಆರಂಭಿಕ ಹಿಂಸಾಚಾರದ ಬಲಿಪಶುಗಳು ಬಹುತೇಕರು ಹಿಂದೂಗಳೇ ಆಗಿದ್ದರು ಎಂಬುದು ಸತ್ಯವಾಗಿದೆ. ಆದರೆ, ವಾಸ್ತವವೇನೆಂದರೆ ಈ ಜಲಾಭಿಷೇಕ ಶೋಭಾ ಯಾತ್ರೆಯಲ್ಲಿ ಸಾಮಾನ್ಯ ಭಕ್ತಾದಿಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಪದ್ರವಕಾರಿ ವ್ಯಕ್ತಿಗಳೂ ಪಾಲ್ಗೊಂಡಿದ್ದರು, ಅವರು ಧಾರ್ಮಿಕ ಕಾರಣಕ್ಕಾಗಿ ಅಲ್ಲಿ ಬರದೇ ಪರಿಸ್ಥಿತಿ ಉದ್ರೇಕಗೊಳಿಸುವ ಉದ್ದೇಶದಿಂದ ಹಾಗೂ ದಂಗೆಗಳನ್ನು ಶುರು ಮಾಡುವ ಉದ್ದೇಶದಿಂದ ಅದಕ್ಕೆ ಎಲ್ಲಾ ತಯ್ಯಾರಿ ಮಾಡಿಕೊಂಡೇ ಅಲ್ಲಿ ಸೇರಿಕೊಂಡಿದ್ದರು. ಹಿಂಸೆ ಮತ್ತು ಪ್ರತಿಕ್ರಿಯಾತ್ಮಕ ಹಿಂಸಾಚಾರದೊಂದಿಗೆ ಭಕ್ತಾದಿಗಳಿಗೆ ಯಾವ ಸಂಬಂಧವೂ ಇರಲಿಲ್ಲ. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಯಾವುದೇ ಮಹಿಳೆಯೊಂದಿಗೆ ಯಾವ ರೀತಿಯ ಕಿರುಕುಳ ಅಥವಾ ಅನುಚಿತ ವರ್ತನೆಯ ಯಾವ ಘಟನೆಯೂ ಆಗಿಲ್ಲ, ಹಾಗೆಂದು ಇದನ್ನು ರಾಜ್ಯದ ಎಡಿಜಿಪಿ ಮಮತಾ ಸಿಂಗ್ ಅವರೇ ಪುಷ್ಟೀಕರಿಸಿದ್ದಾರೆ. ಹಿಂಸಾಚಾರದಿಂದ ಬಚಾವಾಗಲು ದೇವಸ್ಥಾನದಲ್ಲಿ ಸೇರಿಕೊಂಡ ಭಕ್ತಾದಿಗಳನ್ನು ಸುತ್ತುವರೆದು, ಅವರ ಮೇಲೆ ಸುನಿಯೋಜಿತ ದಾಳಿಯ ವಿಷಯವೂ ಸುಳ್ಳು. ದೇವಸ್ಥಾನದ ಪುಜಾರಿಯೇ ಇದನ್ನು ನಿರಾಕರಿಸಿದ್ದಾರೆ.
ಅರ್ಧಸತ್ಯ 3: “ಎರಡು ಸಮುದಾಯಗಳ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿತು.” ಈ ಸಂಘರ್ಷದಲ್ಲಿ ಒಂದೆಡೆ ಹಿಂದೂಗಳಿದ್ದರು, ಇನ್ನೊಂದೆಡೆ ಮುಸ್ಲಿಮರಿದ್ದರು ಎಂಬುದು ವಾಸ್ತವ, ಆದರೆ ಈ ಎರಡೂ ಸಮುದಾಯಗಳ ನಡುವೆ ಸಂಘರ್ಷವಾಗಿಲ್ಲ. ಒಂದೆಡೆ ಮುಸ್ಲಿಂ ಗಲಭೆಕೋರರಿದ್ದರೆ ಇನ್ನೊಂದೆಡೆ ಹಿಂದೂ ಗಲಭೆಕೋರರಿದ್ದರು. 31ನೆಯ ತಾರೀಕಿನಿಂದ ಇಂದಿನವರೆಗೆ ಮೇವಾತ್ನಲ್ಲಿ ಎಲ್ಲಿಯೂ ಈಶಾನ್ಯ ದೆಹಲಿ ಪ್ರದೇಶದಲ್ಲಿ ಇರುವ ಹಾಗೆ ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಹಿಂಸೆ ಅಥವಾ ಘರ್ಷಣೆಯ ಯಾವ ಒಂದು ಘಟನೆಯೂ ನಡೆದಿಲ್ಲ.
ಅರ್ಧಸತ್ಯ 4: “ಹಠಾತ್ತಾಗಿ ಭುಗಿಲೆದ್ದ ಈ ಹಿಂಸಾಚಾರದ ಎದುರು ಪೊಲೀಸ್ ಮತ್ತು ಆಡಳಿತ ಅಸಹಾಯಕವಾಗಿತ್ತು”. ವಾಸ್ತವವೇನೆಂದರೆ, ಜುಲೈ 31ರಂದು ಭುಗಿಲೆದ್ದ ಹಿಂಸಾಚಾರ ದಿಢೀರನೇ ಆಗಿದ್ದಲ್ಲ. ಈ ಜಲಾಭಿಷೇಕ ಯಾತ್ರೆಯಲ್ಲಿ 2 ವರ್ಷಗಳ ಹಿಂದೆಯೂ ಮಜಾರ್ ಒಡೆದುಹಾಕುವ ಘಟನೆ ನಡೆದಿತ್ತು. ಜುಲೈ 25 ಮತ್ತು 26ರ ತನಕ ಸೋನು ಮನೇಸರ್ ಮತ್ತು ಬಿಟ್ಟು ಬಜರಂಗಿಯ ಪ್ರಚೋದನಕಾರಿ ವಿಡಿಯೋಗಳು ಹರಿದಾಡುತ್ತಿದ್ದವು, ಗುಪ್ತಚರ ವರದಿಗಳು ಆಗಲೇ ಬಂದಿದ್ದವು. ಜುಲೈ 27ರಂದು ಸ್ಥಳೀಯ ಶಾಂತಿ ಸಮಿತಿಯ ಸಭೆಯಲ್ಲಿ ಈ ವಿಡಿಯೋಗಳನ್ನು ಪೊಲೀಸ್ ಆಡಳಿತದ ಉನ್ನತ ಅಧಿಕಾರಿಗಳಿಗೆ ತೋರಿಸಲಾಗಿತ್ತು. ಅದಾಗ್ಯೂ ಒಂದು ವೇಳೆ ಈ ಯಾತ್ರೆಯಲ್ಲಿ ನೂರೈವತ್ತಕ್ಕೂ ಹೆಚ್ಚು ವಾಹನಗಳು ಬರಲು ಅವಕಾಶ ಮಾಡಿಕೊಡಲಾಗುತ್ತದೆ. ಯಾತ್ರಿಗಳ ನಡುವೆ ನಡೆಯುತ್ತಿರುವ ಗಲಭೆಕೋರರನ್ನು ತಡೆಯುವುದಿಲ್ಲ, ಅವರು ಲಾಠಿಗಳು, ತಲವಾರಗಳು ಹಾಗೂ ಬಂದೂಕುಗಳನ್ನು ತೆಗೆದುಕೊಂಡು ನಡೆಯಲು ಅನುವು ಮಾಡಿಕೊಡಲಾಗುತ್ತದೆ ಎಂದರೆ ಸ್ಪಷ್ಟವಾಗುವುದೇನೆಂದರೆ ಒಂದೋ ಪೊಲೀಸ್ ಮತ್ತು ಆಡಳಿತದ ಅಪರಾಧಿಕ ನಿರ್ಲಕ್ಷ್ಯವಿತ್ತು ಅಥವಾ ಉದ್ದೇಶಪೂರ್ವಕವಾಗಿ ಇವೆಲ್ಲ ಆಗಲು ಅನುವು ಮಾಡಿಕೊಟ್ಟರು ಎಂದು.
ಅರ್ಧಸತ್ಯ 5: “ಸ್ಥಳೀಯ ಮಟ್ಟದಲ್ಲಿ ಏನೇ ತಪ್ಪುಗಳು ಆಗಿದ್ದರೂ, ರಾಜ್ಯ ಸರಕಾರವು ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಂತಿ ನೆಲೆಸುವಂತೆ ಮಾಡಿದೆ.” ಮೇಲ್ನೋಟದಲ್ಲಿ ಇದು ನಿಜ ಅನಿಸಬಹುದು, ಆದರೆ ವಾಸ್ತವದಲ್ಲಿ ಈ ಅಶಾಂತಿಯ ಮೂಲದಲ್ಲಿ ರಾಜ್ಯದ ಬಿಜೆಪಿ ಸರಕಾರವಿತ್ತು ಹಾಗೂ ಈಗ ಶಾಂತಿಯ ಬದಲಿಗೆ ದೀರ್ಘಾವಧಿಯ ಅಶಾಂತಿಯ ಬೀಜ ಬಿತ್ತಲಾಗುತ್ತಿದೆ. ರೈತರ ಹೋರಾಟದಿಂದ ಹಿನ್ನೆಡೆ ಅನುಭವಿಸಿದ ಹರಿಯಾಣದ ಬಿಜೆಪಿಯು ನೂಹ್ನ ಕಿಡಿಯನ್ನು ಬಳಕೆಯನ್ನು ತನ್ನ ಚುನಾವಣೆಯ ಒಲೆ ಹೊತ್ತಿಸುವುದಕ್ಕಾಗಿ ಮಾಡಿದೆ ಎಂಬ ಸಂದೇಹ ಸ್ವಾಭಾವಿಕವಾಗಿದೆ. ಅಶಾಂತಿ ಆಗಬಹುದು ಎಂಬ ಸಂಪೂರ್ಣ ಆತಂಕದ ಹೊರತಾಗಿಯೂ ಹಿಂಸಾಚಾರ ಆಗಲು ಬಿಟ್ಟಿದ್ದಾರೆ ಎಂದರೆ ಅದು ರಾಜ್ಯ ಸರಕಾರದ ಸೂಚನೆಯಿಲ್ಲದೇ ಸಾಧ್ಯವಿದ್ದಿಲ್ಲ. ಹಿಂಸಾಚಾರ ಆದ ಕೂಡಲೇ ಹರಿಯಾಣದಲ್ಲಿ ಇದು ನಾಲ್ಕನೆಯ ಬಾರಿ (ಹಿಸಾರ್, ಪಂಚಕುಲಾ, ಝಜ್ಜರ್ ಹಾಗೂ ನೂಹ್) ಪೊಲೀಸ್ ನಾಪತ್ತೆಯಾದ ಪ್ರಕ್ರಿಯೆ ಕಂಡುಬಂದಿದೆ. ಈ ಹಿಂಸಾಚಾರದ ನಂತರ ರಾಜ್ಯದ ಇತರ ಪ್ರದೇಶಗಳಲ್ಲಿ ಮುಸಲ್ಮಾನರ ಸುರಕ್ಷತೆಗಾಗಿ ರಾಜ್ಯ ಸರಕಾರಿ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ, ಹಾಗಾಗಿ ಸಾವಿರಾರು ಬಡ ಮುಸಲ್ಮಾನರೂ ರಾತ್ರೋರಾತ್ರಿ ವಲಸೆ ಹೋಗಬೇಕಾಗಿ ಬಂತು.
ಹಿಂಸಾಚಾರದಲ್ಲಿ ಭಾಗಿಯಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲಿಗೆ ಬೇಕಾಬಿಟ್ಟಿಯಾಗಿ ಜನರನ್ನು ಬಂಧಿಸಲಾಯಿತು ಹಾಗೂ ತದನಂತರ ಕಾನೂನನ್ನು ಬದಿಗಿಟ್ಟು, 200 ರಿಂದ 300ರ ತನಕ ಮನೆ ಮತ್ತು ಅಂಗಡಿಗಳನ್ನು ಅತಿಕ್ರಮಣದ ಹೆಸರಿನಲ್ಲಿ ಕೆಡವಲಾಯಿತು. ಕೊನೆಗೆ ಹೈಕೋರ್ಟ್ ಇದನ್ನು ನಿಲ್ಲಿಸಿತು. ಇವೆಲ್ಲ ಶಾಂತಿ ಸ್ಥಾಪಿಸುವುದಕ್ಕೆ ಬದಲಿಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷದ ಮೇಲೆ ಸೇಡು ತೀರಿಸಿಕೊಳ್ಳುವ ಕ್ರಮದಂತೆ ಕಾಣುತ್ತಿದೆ. ಇಂತಹ ಬೆಂಕಿಯಲ್ಲಿ ಕೇವಲ ಒಂದು ಪಕ್ಷವನ್ನು ಸುಡುವುದಿಲ್ಲ ಎಂದು ಇತಿಹಾಸ ನಮಗೆ ಹೇಳುತ್ತದೆ. ಅನ್ಯಾಯ ಮತ್ತು ದಬ್ಬಾಳಿಕೆ ಎಂದೂ ಶಾಂತಿ ನೆಲೆಸುವಂತೆ ಮಾಡುವುದಿಲ್ಲ, ಅದರಿಂದ ದೀರ್ಘಾವಧಿಯಲ್ಲಿ ಅಸಮಾಧಾನ, ಪ್ರತ್ಯೇಕತಾವಾದ ಹಾಗೂ ಉಗ್ರವಾದವು ಹುಟ್ಟಿ ಬೆಳೆಯುತ್ತವೆ.

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ