ಶಿವಮೊಗ್ಗ, ಪ್ರಾಣಿಗಳ ವಿನಿಮಯ ಕಾರ್ಯಕ್ರಮದಲ್ಲಿ ತಾಲೂಕಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮೂರು ಹುಲಿ ಮತ್ತು ಎರಡು ಸಿಂಹಗಳು ಆಗಮಿಸಲಿವೆ. ಇದರಿಂದ ಹುಲಿ ಮತ್ತು ಸಿಂಹಧಾಮ ಇನ್ನಷ್ಟು ಜನಾಕರ್ಷಣೆಯ ಕೇಂದ್ರವಾಗಲಿದೆ.
ತ್ಯಾವರೆಕೊಪ್ಪ ಹುಲಿ, ಸಿಂಹಧಾಮ ರಾಜ್ಯದ ಪ್ರಮುಖ ಸಫಾರಿ ಹಾಗೂ ಮೃಗಾಲಯವಾಗಿದ್ದು ಇಲ್ಲಿ ಹುಲಿ, ಸಿಂಹಗಳ ಸಫಾರಿ ಇದ್ದು, ನಂತರದ ದಿನಗಳಲ್ಲಿ ಕಾಡುಕೋಣ, ಜಿಂಕೆಗಳ ಸಫಾರಿಯನ್ನೂ ಪ್ರಾರಂಭಿಸಲಾಗಿದೆ.
ದೇಶದ ಮೃಗಾಲಯಗಳ ನಡುವೆ ಪ್ರಾಣಿಗಳ ವಿನಿಮಯ ನಡೆಯುತ್ತಿರುತ್ತದೆ. ಕೆಲವು ಮೃಗಾಲಯಗಳು ತಮ್ಮಲ್ಲಿರುವ ಹೆಚ್ಚುವರಿ ಪ್ರಾಣಿಗಳ ವಿವರ ಹಂಚಿಕೊಳ್ಳುತ್ತವೆ. ಜೊತೆಗೆ, ತಮಗೆ ಬೇಕಿರುವ ಪ್ರಾಣಿಗಳ ಪಟ್ಟಿ ನೀಡುತ್ತವೆ. ನಂತರ ಮೃಗಾಲಯಗಳ ನಡುವೆ ಒಪ್ಪಂದ ನಡೆದು ಪ್ರಾಣಿಗಳ ವಿನಿಮಯ ನಡೆಯುತ್ತದೆ.
ಇದರಂತೆ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಮೂರು ಹುಲಿ ಹಾಗೂ ಎರಡು ಸಿಂಹಗಳು ಆಗಮಿಸುತ್ತಿವೆ. ಇದಕ್ಕಾಗಿ ಎರಡು ಮೃಗಾಲಯಗಳ ಮುಖ್ಯಸ್ಥರು ಹಾಗೂ ವೈದ್ಯರು ಅಲ್ಲಿನ ಮೃಗಾಲಯಕ್ಕೆ ಹೋಗಿ ಪ್ರಾಣಿಗಳ ಆರೋಗ್ಯ ಗಮನಿಸಿಕೊಂಡು ಬರುತ್ತಾರೆ. ಪ್ರತ್ಯೇಕ ಗೇಜ್ಗಳನ್ನು ನಿರ್ಮಿಸಿ ಪ್ರಾಣಿಗಳ ವಿನಿಮಯ ಮಾಡಲಾಗುತ್ತದೆ.ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ನಾಲ್ಕು ಹೆಣ್ಣು ಹುಲಿಗಳಿವೆ. ಈಗ ಮತ್ತೆ ಮೂರು ಹುಲಿಗಳು ಬಂದರೆ ಒಟ್ಟು 7 ಹುಲಿಗಳಾಗುತ್ತವೆ. ಇಲ್ಲಿಂದ ಎರಡು ಸಿಂಹಗಳು ಹೋಗಿ ಎರಡು ಸಿಂಹಗಳು ಆಗಮಿಸಲಿವೆ.

ತ್ಯಾವರೆಕೊಪ್ಪ ಹುಲಿ ಸಿಂಹಧಾಮದಿಂದ ಹೋಗುವ ಪ್ರಾಣಿಗಳು
ತ್ಯಾವರೆಕೊಪ್ಪ ಹುಲಿ ಸಿಂಹಧಾಮದಿಂದ 2 ಸಿಂಹ, 2 ನರಿ, 1 ಕರಡಿ , 2 ಆಸ್ಟ್ರಿಚ್ ಪಕ್ಷಿಗಳು ಹಾಗೂ 4 ಕಾಡುಕೋಣಗಳು ಔರಂಗಾಬಾದ್ ಹಾಗೂ ಇಂದೋರ್ ಮೃಗಾಲಯಕ್ಕೆ ರವಾನೆಯಾಗಲಿವೆ.ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಕಾರ್ಯಕಾರಿ ನಿರ್ದೇಶಕರಾದ ಅಮರಾಕ್ಷರ ಅವರು ಪ್ರತಿಕ್ರಿಯಿಸಿ, “ಪ್ರಾಣಿಗಳ ವಿನಿಮಯ ಯೋಜನೆಯಡಿ ಹುಲಿ ಮತ್ತು ಸಿಂಹಗಳನ್ನು ತರುತ್ತಿದ್ದೇವೆ. ಔರಂಗಾಬಾದ್ ಹಾಗೂ ಇಂದೋರ್ ಮೃಗಾಲಯದಿಂದ ನಮಗೆ ಪ್ರಾಣಿಗಳ ಬರುವಿಕೆ ಆಗುತ್ತದೆ. ಇಂದೋರ್ ಮೃಗಾಲಯದಿಂದ ಎರಡು ಸಿಂಹಗಳು ಬರುತ್ತಿವೆ.
ಅದೇ ರೀತಿ ಔರಂಗಾಬಾದ್ ಮೃಗಾಲಯದಿಂದ ಮೂರು ಹುಲಿಗಳು ಬರುತ್ತಿವೆ. ಇದರಲ್ಲಿ ಎರಡು ರಾಯಲ್ ಬೆಂಗಾಲ್, ಒಂದು ಬಿಳಿ ಹುಲಿ ಸೇರಿದೆ. ಇದಕ್ಕಾಗಿ ನಾವು ನಮ್ಮ ಮೃಗಾಲಯದಿಂದ ನಾಲ್ಕು ಕಾಡುಕೋಣಗಳು ಹಾಗೂ ಎರಡು ಆಸ್ಟ್ರಿಚ್ ಪಕ್ಷಿ, ಎರಡು ಸಿಂಹ, ಎರಡು ನರಿ ಹಾಗೂ ಕರಡಿಗಳನ್ನು ನೀಡುತ್ತಿದ್ದೇವೆ” ಎಂದು ತಿಳಿಸಿದರು.
“ಕಳೆದ ಏಪ್ರಿಲ್‌ನಲ್ಲಿ ನಾವು ಮಾತುಕತೆ ಪ್ರಾರಂಭಿಸಿದ್ದೆವು. ಪ್ರಾಣಿಗಳು ಬಹುದೂರದವರೆಗೂ ಪ್ರಯಾಣ ಮಾಡಬೇಕಾಗಿರುವುದರಿಂದ ಸಾಗಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಆಗಸ್ಟ್ ಮಧ್ಯದಲ್ಲಿ ಔರಂಗಾಬಾದ್ಗೆ ನಾನು ಮತ್ತು ಸಿಂಹಧಾಮದ ವೈದ್ಯರು ಇಲ್ಲಿಗೆ ಬರಲಿರುವ ಪ್ರಾಣಿಗಳ ಆರೋಗ್ಯದ ಕುರಿತು ಮಾಹಿತಿ ಪಡೆಯಲು ತೆರಳುತ್ತಿದ್ದೇವೆ.
ಅದೇ ರೀತಿ ಅಲ್ಲಿನವರೂ ನಮ್ಮ ಹುಲಿ ಮತ್ತು ಸಿಂಹಧಾಮಕ್ಕೆ ಆಗಮಿಸುತ್ತಿದ್ದಾರೆ. ಪ್ರಾಣಿಗಳ ಆರೋಗ್ಯದ ಮಾಹಿತಿ ಪಡೆದ ನಂತರ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾಣಿಗಳು ಬರಲಿವೆ” ಎಂದು ಹೇಳಿದರು.