- ಕೆ.ಎ.ಎಸ್. ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಸಿಎಂ ಅಭಿಮತ
- ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ಕೆಲಸ ಮಾಡಲು ಸಿದ್ದರಾಮಯ್ಯ ಸೂಚನೆ
ಪ್ರತಿಯೊಬ್ಬ ಅಧಿಕಾರಿ ಸಂವಿಧಾನದ ಚೌಕಟ್ಟಿನೊಳಗೆ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ವಿದ್ಯಾವಂತರಾದ ಅಧಿಕಾರಿಗಳು, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆ ಮೂಲಕ ಕರ್ತವ್ಯ ನಿರ್ವಹಿಸಿದರೆ ಜಾತ್ಯತೀತ ಹಾಗೂ ಸಮಾನ ಸಮಾಜವನ್ನು ನಿರ್ಮಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಬುಧವಾರ ನಡೆದ ಕೆಎಎಸ್ ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಅಧಿಕಾರಿಗಳು ಕೈಗೊಳ್ಳಬೇಕು. ರಾಜಕಾರಣಿಗಳು ಕಾನೂನು ಹಾಗೂ ನೀತಿಗಳನ್ನು ನಿರೂಪಿಸಿದರೆ, ಅವುಗಳನ್ನು ಜಾರಿಗೊಳಿಸುವುದು ಅಧಿಕಾರಿಗಳು. ಅಧಿಕಾರಿಗಳು, ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ, ಜನಪರವಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ” ಎಂದರು.
“ಸರ್ಕಾರದ ಅಧಿಕಾರಿ ಹಾಗೂ ನೌಕರರು ಬಡವರ ವಿರೋಧಿ, ಜನವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಬಾರದು. ಜಾತಿ ಧರ್ಮಗಳ ಕಲಹದಲ್ಲಿಯೂ ಇರಬಾರದು. ಧರ್ಮಕ್ಕೂ, ಆಡಳಿತಕ್ಕೂ ಸಂಬಂಧವಿಲ್ಲ. ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಅಥವಾ ಧರ್ಮ ಕಲಹಗಳಲ್ಲಿ ತೊಡಗಿಕೊಳ್ಳಬಾರದು. ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ದೇಶವನ್ನು ರಕ್ಷಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು” ಎಂದು ಹೇಳಿದರು.
“ಒಬ್ಬ ವ್ಯಕ್ತಿ ಒಬ್ಬ ಮತ ಎಂದಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಈ ಸಮಾನತೆ ಇಲ್ಲ. ಹೀಗೆ ಮುಂದುವರೆದರೆ, ಅಸಮಾನತೆಗೆ ಒಳಗಾದ ಜನರು ಸ್ವಾತಂತ್ರ್ಯಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆ ಇದೆ ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಇದು ಎಲ್ಲ ನಾಗರಿಕರ ಕರ್ತವ್ಯ. ಇದನ್ನು ಅರ್ಥಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಸುಧಾರಣೆ ತರಬಹುದಾಗಿದೆ. ಈಗ ಶಿಕ್ಷಣ ಅಭಿವೃದ್ಧಿಗೊಳ್ಳುತ್ತಿದೆ. ವಿದ್ಯಾವಂತರು ಜಾತ್ಯತೀತತೆ, ವೈಚಾರಿಕತೆಯನ್ನು ಪಾಲಿಸಬೇಕು” ಎಂದರು.
ಅರ್ಥಪೂರ್ಣ ಶತಮಾನೋತ್ಸವ
“1919 ರಲ್ಲಿ ಸಂಘ ಅಸ್ತಿತ್ವ ಬಂದಿದ್ದು, ಇದಕ್ಕೆ ಸ್ಪೂರ್ತಿ ಒಬ್ಬ ಐರ್ಲೆಂಡ್ ಅಧಿಕಾರಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯನ್ನು ಸುವರ್ಣ ಯುಗ ಎನ್ನಲಾಗುತ್ತದೆ. ಅವರ ಕಾಲದಲ್ಲಿ ಆದಂತಹ ಅಭಿವೃದ್ಧಿ, ಸಾಮಾಜಿಕ ಕಾರ್ಯಗಳು, ಉದ್ದಿಮೆಗಳು ದೊಡ್ಡಮಟ್ಟದಲ್ಲಿ ಆಗಿತ್ತು. ಇದೇ ಅವಧಿಯಲ್ಲಿ ನಾಗರಿಕ ಸೇವೆ ಎಂಬ ಕಲ್ಪನೆಗೆ ಜೀವ ಬಂದಿತು” ಎಂದು ತಿಳಿಸಿದರು.
ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ಇ.ವಿ. ರಮಣರೆಡ್ಡಿ, ಕೆ.ಎ.ಎಸ್. ಅಧಿಕಾರಿಗಳ ಸಂಘದ ಅಧ್ಯಕ್ಷ ರವಿ ತಿರ್ಲಾಪೂರ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.